Chikkaballapur: 'ಇದು ರೈತಪರ ಬಜೆಟ್ ಅಲ್ಲ'- ಬೇಸರಗೊಂಡ ರೈತ ಸಂಘಟನೆ
ಚಿಕ್ಕಬಳ್ಳಾಪುರ ಜುಲೈ 23: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಬಜೆಟ್ ಅನ್ನು ಮಂಡಿಸಿದರು. ಆದರೆ ಈ ಬಜೆಟ್ ರೈತರಪರವಾಗಿರಲಿಲ್ಲ ಎಂದು ಚಿಕ್ಕಬಳ್ಳಾಪುರದ ಗುಡಿಬಂಡೆ ಡಿವೈಎಫ್ಐ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಉಪ್ಪಾರಹಳ್ಳಿ ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀನಿವಾಸ್ ಅವರು, 'ಚಿಕ್ಕಬಳ್ಳಾಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸುವ ಭರವಸೆ ಹುಸಿಯಾಗಿದೆ. ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಹಾಗೂ ಕೃಷಿ ಕ್ಷೇತ್ರವನ್ನು ಉತ್ತೇಜಿಸಲು ಕೃಷಿ ಪರಿಕರಗಳಿಗೆ ಪ್ರೋತ್ಸಾಹದನ, ಶಾಶ್ವತ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡದಿರುವುದು ಬೇಸರ ತರಿಸಿದೆ, ಬಡ ಹಾಗೂ ಕೂಲಿ ಕಾರ್ಮಿಕರ ಅಭಿವೃದ್ಧಿಯನ್ನು ಕಡೆಗಣಿಸಿದ್ದು ಒಟ್ಟಾರೆ ಕೇಂದ್ರ ಬಜೆಟ್ ನಿರಾಸೆ ಮೂಡಿಸಿದೆ' ಎಂದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಎಚ್.ಪಿ. ರಮಾನಾಥ್ ಅವರು ಮಾತನಾಡಿ, 'ಕೇಂದ್ರದ ಬಜೆಟ್ ನಲ್ಲಿ ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆಗಳು ಜಾರಿ ಮಾಡುವುದನ್ನು ಕೇಂದ್ರ ಸರ್ಕಾರ ಕೈಬಿಟ್ಟಂತಿದೆ. ರೈತರು ಬೆಳೆದ ಬೆಲೆಗಳಿಗೆ ಬೆಂಬಲ ಬೆಲೆ ಘೋಷಿಸಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಇದು ರೈತಪರ ಸರ್ಕಾರದ ಬಜೆಟ್ ಅಲ್ಲ, ರೈತರ ಕಣ್ಣೋರೆಸುವ ತಂತ್ರ ಇದಾಗಿದೆ, ಈ ಬಜೆಟ್ ಬಂಡವಾಳ ಶಾಹಿಗಳಿಗೆ ಮಾತ್ರ ಉಪಯೋಗವಾಗುತ್ತದೆ' ಎಂದರು.
2024-25ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ರೈತರು ಹಾಗೂ ಕೃಷಿ ಕ್ಷೇತ್ರಕ್ಕೆ 1.52 ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಈ ನಿಧಿಯಿಂದ ಕೃಷಿ ಹಾಗೂ ಸಂಬಂಧಿತ ಕ್ಷೇತ್ರಗಳಿಗೆ ಯೋಜನೆಗಳನ್ನು ರೂಪಿಸಲಾಗುವುದು. ಐದು ರಾಜ್ಯಗಳಲ್ಲಿ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಲು ನಿರ್ಧರಿಸಲಾಗಿದೆ ಎಂದರು. ಒಂದು ವರ್ಷದಲ್ಲಿ ಒಂದು ಕೋಟಿ ರೈತರು ನೈಸರ್ಗಿಕ ಕೃಷಿ ವ್ಯಾಪ್ತಿಗೆ ಬರಲಿದ್ದಾರೆ. ಸಾವಯವ ಕೃಷಿಗೆ ಆಧ್ಯತೆ ನೀಡಲಾಗುವುದು. ಹವಾಮಾನ ಸ್ನೇಹಿ ಬೀಜಗಳನ್ನು ಅಭಿವೃದ್ಧಿ, ಎಣ್ಣೆ ಕಾಳುಗಳ ಉತ್ಪಾದನೆ, ಶೇಖರಣೆ ಹಾಗೂ ಮಾರುಕಟ್ಟೆಗಳಿಗೂ ಉತ್ತೇಜನ ನೀಡಲಾಗುವುದು.

ರೈತರ ಅನುಕೂಲಕ್ಕಾಗಿ ಡಿಜಿಟಲ್ ಬೆಳೆ ಸಮೀಕ್ಷೆ ಜಾರಿಗೆ ಬರಲಿದೆ. ತರಕಾರಿ ಉತ್ಪಾದನೆ ಮತ್ತು ಪೂರೈಕೆ ಚೈನ್ ಬಲಗೊಳಿಸಲು ಹೆಚ್ಚಿನ ಎಫ್‌ಪಿಒಗಳನ್ನು ರಚಿಸಲಾಗುವುದು. ಕೃಷಿ ಭೂಮಿ ಹಾಗೂ ರೈತರ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗುವುದು ಎಂದರು.












Click it and Unblock the Notifications