Chikkaballapur: ಫೋಟೋ ಗ್ರಾಫರ್ ನೀನೇ ನನ್ನ ಲೈಫ್ ಪಾರ್ಟ್ನರ್ ಎಂದು ಮಸಣ ಸೇರಿದ್ಲು!
ಚಿಕ್ಕಬಳ್ಳಾಪುರ ಫೆಬ್ರವರಿ 26: ಚೆನ್ನಾಗಿ ಓದಿ ಪೋಷಕರಿಗೆ ಕೀರ್ತಿ ತಂದುಕೊಡಬೇಕಿದ್ದ ಮಗಳು ಹೆಣವಾಗಿ ಹೋಗಿದ್ದಾಳೆ. ಕೈಗೆ ಬಂದಿದ್ದ ಮಗಳನ್ನು ಕಳೆದುಕೊಂಡ ಪೋಷಕರಿಗೆ ಆಕಾಶವೇ ಕಳಚಿ ಬಿದ್ದಂತಾಗಿದೆ. ಸ್ನೇಹಿತೆಯಂತಿದ್ದ ಸಹೋದರಿಯನ್ನು ಕಳೆದುಕೊಂಡು ಮನೆ ಹೆಣ್ಣು ಮಕ್ಕಳು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಫೋಟೋ ಗ್ರಾಫರ್ ನೀನೇ ನನ್ನ ಲೈಫ್ ಪಾರ್ಟ್ನರ್ ಎಂದ ಅಪ್ರಾಪ್ತೆ ಈಗ ಹೆಣವಾಗಿ ಹೋಗಿದ್ದಾಳೆ.
ಹೌದು... ಚಿಕ್ಕಬಳ್ಳಾಪುರ ಜಿಲ್ಲೆ ಮಂಚೇನಹಳ್ಳಿ ತಾಲೂಕಿನ ಸಾದೇನಹಳ್ಳಿ ಗ್ರಾಮದ ವಾಸಿ ಸುಚಿತ್ರ (17) ಪ್ರೀತಿ ಪ್ರೇಮದ ಬಲೆಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕಳೆದ ವಾರ ಈ ಯುವತಿ ಸಾವಿಗೆ ಕೊರಳು ಒಡ್ಡಿದ್ದಾಳೆ. ಅಷ್ಟಕ್ಕೂ ಸುಚಿತ್ರಾ ಜೀವನದಲ್ಲಿ ಆಗಿದ್ದೇನು? ವಯಸ್ಸಲ್ಲದ ವಯಸ್ಸಿನಲ್ಲಿ ಪ್ರೀತಿ ಪ್ರೇಮ ಅಂತ ಹೋದವಳ ಕತೆ ಏನಾಯ್ತು ನೋಡಿ...

ಪ್ರೀತಿಸಿದವನಿಗಾಗಿ ವಿಷ ಸೇವಿಸಿ ಪ್ರೀತಿಸಿದವನಿಂದಲೇ ಉಸಿರು ಚೆಲ್ಲಿದ ಹುಡುಗಿ
ಮೃತ ಹುಡುಗಿ ಸುಚಿತ್ರ ಗೌರಿಬಿದನೂರಿನ ನ್ಯಾಷನಲ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಆದರೆ ಹದಿಹರೆಯ ವಯಸ್ಸಿನಲ್ಲಿ ಪ್ರೀತಿ ಪ್ರೇಮ ಎಂದು ಅಪ್ರಾಪ್ತ ಫೋಟೋ ಗ್ರಾಫರ್‌ನೊಂದಿಗೆ ಸ್ನೇಹ ಬೆಳೆಸಿದ್ದಳು. ಇವರಿಬ್ಬರು ಒಂದೇ ಮನೆಯಲ್ಲಿ ಕೆಲ ಕಾಲ ಜೀವನ ಸಹ ಮಾಡಿದ್ದರು. ತನ್ನ ಪ್ರೇಮಿಗಾಗಿ ಮನೆ ಮಂದಿಯ ವಿರೋಧ ಕಟ್ಟಿಕೊಂಡಿದ್ದ ಸುಚಿತ್ರಾ ಕೊನೆಗೆ ತಾನು ಪ್ರೀತಿಸಿದ ಪ್ರೇಮಿಯಿಂದ ಬೇಸತ್ತು ಸಾವಿಗೆ ಶರಣಾಗಿದ್ದಾಳೆ.
ಇತ್ತೀಚೆಗೆ ಫೋಟೋಗ್ರಾಫರ್ ಈಕೆಯ ಬದಲಿಗೆ ಮತ್ತೊಬ್ಬ ಯುವತಿಯೊಂದಿಗೆ ಸಲುಗೆಯಿಂದ ಇದ್ದು ವೀಡಿಯೋ ಕರೆಯಲ್ಲಿ ಮಾತನಾಡುತ್ತಿದ್ದನಂತೆ. ಇದರಿಂದ ಮನನೊಂದು ಮನೆಯಲ್ಲಿ ಸಾವಿನ ಕುಣಿಕೆಗೆ ಸುಚಿತ್ರಾ ಶರಣಾಗಿದ್ದಾಳೆ. ಹೀಗಾಗಿ ಸುಚಿತ್ರ ಸಾವಿಗೆ ಆಕೆಯ ಪ್ರಿಯಕರನೇ ಕಾರಣ ಎಂದು ಸಹೋದರಿಯರು ಆರೋಪಿಸುತ್ತಿದ್ದಾರೆ.
ಪ್ರೇಮಿಯತ್ತ ಬೆಟ್ಟು ತೋರಿಸಿದ ಸಹೋದರಿಯರು
ಸಹೋದರಿಯರ ಪ್ರಕಾರ, 'ಪ್ರೇಮಿ ಫೋಟೋ ಗ್ರಾಫರ್ ಸುಚಿತ್ರಾಳನ್ನ ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿದ್ದನಂತೆ. ಆದರೆ ಇತ್ತೀಚೆಗೆ ಬೇರೆ ಹುಡುಗಿಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದ. ಇದನ್ನು ಸಹಿಸಲು ಆಗದೆ ಮನನೊಂದು ಸುಚಿತ್ರಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ' ಎಂದು ಸಹೋದರಿಯರು ದೂರಿದ್ದಾರೆ.
ಆದರೆ ಸುಚಿತ್ರಾ ಇದೇ ಪ್ರೇಮಿಗಾಗಿ ವಿಷ ಸೇವಿಸಿದ್ದಳಂತೆ. ಹೀಗಾಗಿ ಮಗಳ ಮುಖ ನೋಡಿ ಪೋಷಕರು ಕೂಡ ಆ ಪ್ರೇಮಿಯನ್ನು ಒಪ್ಪಿ ಮನೆಗೂ ಕೂಡ ಸೇರಿಸಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ಪ್ರೇಮಿಯ ನಡೆ ನುಡಿಯಲ್ಲಿ ವ್ಯತ್ಯಾಸ ಕಂಡುಬಂದಾಗ ಸುಚಿತ್ರಾ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಸಹೋದರಿಯರು ಹೇಳಿಕೊಂಡಿದ್ದಾರೆ.
ಪ್ರೇಮಿಯನ್ನು ಸಮರ್ಥಿಸಿಕೊಂಡ ತಾಯಿ
ಆದರೆ ಸುಚಿತ್ರಾ ತಾಯಿ ಹೇಳುವುದೇ ಬೇರೆ. ಸುಚಿತ್ರಾ ಮನೆಯಲ್ಲಿ ತಾಯಿ ಒಬ್ಬರೇ ಇದ್ದ ಕಾರಣ ತಾಯಿ ಹಾಗೂ ಸುಚಿತ್ರಾಳಿಗೂ ಫೋಟೋ ಗ್ರಾಫರ್ ಆಶ್ರಯವಾಗಿದ್ದನಂತೆ. ಸುಚಿತ್ರಾಳಿಗೆ 18 ವರ್ಷ ತುಂಬಿದ ನಂತರ ಮದುವೆ ಮಾಡಿಕೊಳ್ಳುವುದಾಗಿ ಹೇಳಿದ್ದನಂತೆ. ಆದರೆ ಸುಚಿತ್ರಾಳಿಗೆ ಆತುರ ಹೆಚ್ಚು. ಸಣ್ಣಪುಟ್ಟ ವಿಚಾರಕ್ಕೂ ಜಗಳ ಮಾಡಿಕೊಳ್ಳುತ್ತಿದ್ದಳು. ಆರೋಪಿತ ಫೋಟೋಗ್ರಾಫರ್‌ದು ಏನೂ ತಪ್ಪಿಲ್ಲ ಎಂದು ಸುಚಿತ್ರಾ ತಾಯಿ ಸಮರ್ಥಿಸಿಕೊಂಡಿದ್ದಾರೆ.
ಇಲ್ಲಿ ತಪ್ಪು ಯಾರದ್ದೇ ಆಗಿರಲಿ. ವಿಷಯ ಅದಲ್ಲ. ವಯಸ್ಸಲ್ಲದ ವಯಸ್ಸಿನಲ್ಲಿ ಪ್ರೀತಿ ಪ್ರೇಮ ಅಂತ ಸುತ್ತಾಡಿ ಒಂದು ಮುಗ್ದ ಜೀವ ಪ್ರಾಣ ಬಿಟ್ಟಿದೆ. ಇದನ್ನು ಯುವ ಪೀಳಿಗೆ ಅರ್ಥ ಮಾಡಿಕೊಳ್ಳಬೇಕಿದೆ. ಪ್ರೇಮ ಪ್ರೀತಿಗಾಗಿ ವಿಷ ಸೇವಿಸಿ ಪ್ರಾಣ ಬಿಡುವ ಮಕ್ಕಳ ಪೋಷಕರ ಪರಿಸ್ಥಿತಿ ಏನಾಗುತ್ತದೆ ಅನ್ನೋದನ್ನು ಈ ಘಟನೆಯಿಂದ ಅಪ್ರಾಪ್ತ ವಯಸ್ಸಿನ ಯುವಕ ಯುವತಿಯರು ತಿಳಿಯಬೇಕಿದೆ.












Click it and Unblock the Notifications