ರಾಜಕಾಲುವೆ ಒತ್ತುವರಿ: ಚೆಕ್ ಡ್ಯಾಮ್ ಮುಚ್ಚಿ ಭೂಮಿ ಸಮತಟ್ಟು ತಡೆಯಲು ಗುಡಿಬಂಡೆ ಗ್ರಾಮಸ್ಥರ ಪಟ್ಟು
ಗುಡಿಬಂಡೆ ಮಾರ್ಚ್ 8: ಗ್ರಾಮೀಣ ಪ್ರದೇಶದಲ್ಲಿ ರೈತರ ಜೀವನಾಡಿಯಾಗಿರುವ ಕೆರೆಗಳಿಗೆ ನೀರು ಹರಿಯುವ ರಾಜಕಾಲುವೆಗಳನ್ನು, ಚೆಕ್ ಡ್ಯಾಮ್ ಗಳನ್ನು ಮುಚ್ಚಿ ಜಮೀನು ಸಮತಟ್ಟು ಮಾಡಲಾಗುತ್ತಿದೆ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿ ಬಂದಿದೆ.
ಗ್ರಾಮೀಣ ಪ್ರದೇಶದಲ್ಲಿ ಜಮೀನುಗಳನ್ನು ಖರೀದಿ ಮಾಡುವ ಶ್ರೀಮಂತರು ಲೇ ಔಟ್, ವಿಲ್ಲಾ ನಿರ್ಮಾಣಕ್ಕಾಗಿ ಅಕ್ಕ ಪಕ್ಕ ಇರುವ ಸರಕಾರಿ ಹುಲ್ಲುಗಾವಲು, ಬಂಜರು ಭೂಮಿಯನ್ನು ಒತ್ತುವರಿ ಮಾಡಿಕೊಂಡು, ಕೆರೆ ಕುಂಟೆಗಳಿಗೆ ನೀರು ಹರಿಯುವ ಕಾಲುವೆಗಳನ್ನು ಮುಚ್ಚಿ ಹಾಕುತ್ತಿದ್ದರು ಕಂದಾಯ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸಿಲ್ಲ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿಬಂದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸದಾಶಿವನಹಳ್ಳಿ ಬಳಿ ರಿಯಲ್ ಎಸ್ಟೇಟ್ ಮಾಲೀಕರು ಕೃಷಿ ಜಮೀನು ಖರೀದಿಸಿ, ಕೃಷಯಂತೆ ಯೇತರ ಚಟುವಟಿಕೆಗಳಿಗಾಗಿ ಭೂಮಿ ಅಭಿವೃದ್ಧಿ ಮಾಡಲಗುತ್ತಿದ್ದು, ಅಕ್ಕ ಪಕ್ಕ ಇರುವ ಸರಕಾರಿ ಜಮೀನು, ಕೆರೆಯಂಗಳದ ಮುಳುಗಡೆ ಪದೇಶವನ್ನು ಒತ್ತುವರಿ ಮಾಡಿಕೊಂಡಿದ್ದು ಕುರಿ, ಮೇಕೆ, ದನಕರುಗಳಿಗೆ ಆಸರೆಯಾಗಿದ್ದ ಹುಲ್ಲುಗಾವಲು ಪ್ರದೇಶವನ್ನು ಉಳಿಸಿಕೊಡುವಂತೆ ಗ್ರಾಮಸ್ಥರು ಕಂದಾಯ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ರಾಜ ಕಾಲುವೆಗಳ ಒತ್ತುವರಿ :
ರಿಯಲ್ ಎಸ್ಟೇಟ್ ಮಾಲೀಕರು ಖರೀದಿಸಿರುವ ಜಮೀನುಗಳ ಮದ್ಯದಲ್ಲಿ ಕೆರೆಗಳಿಗೆ ನೀರು ಹೋಗುವ ದೊಡ್ಡ ದೊಡ್ಡ ರಾಜಕಾಲುವೆಗಳು ಮತ್ತು ಚೆಕ್ ಡ್ಯಾಂಗಳಿದ್ದು, ಜಮೀನು ಒಂದೇ ಸಮದಟ್ಟು ಮಾಡಲು ರಾಜಕಾಲುವೆಗಳನ್ನು ಮತ್ತು ಚೆಕ್ ಡ್ಯಾಂಗಳನ್ನು ನಾಶಮಾಡಿ ಕೆರೆಗೆ ನೀರು ಹೋಗುವ ಕಾಲುವೆಗಳನ್ನು ಮುಚ್ಚಿದ್ದು ಕೆರೆಯ ಅಂಗಳದಲ್ಲಿ ನೀರು ಇಲ್ಲದಂತಾಗಿ ಮುಂದಿನ ದಿನಗಳಲ್ಲಿ ಕೆರೆ ಬತ್ತಿ ಹೋಗುವ ಆತಂಕ ರೈತರಲ್ಲಿ ಮನೆ ಮಾಡಿದೆ.
ಸರ್ಕಾರಿ ಆದೇಶ ಲೆಕ್ಕಕ್ಕಿಲ್ಲ :
ಹಿಡುವಳಿ ಜಮೀನುಗಳಲ್ಲಿ ದೊಡ್ಡ ದೊಡ್ಡ ಬಂಗಲೇಗಳನ್ನು ಕಟ್ಟುವುದು ಸೇರಿ ಕೃಷಿಯೇತರ ಚಟುವಟಿಕೆಗಳನ್ನು ಮಾಡಲು ಕಡ್ಡಾಯವಾಗಿ ಆಯಾ ಗ್ರಾಮ ಪಂಚಾಯಿತಿ ಅನುಮತಿ ಪಡೆಯಬೇಕಾಗಿದೆ, ಆದರೆ ರಿಯಲ್ ಎಸ್ಟೇಟ್ ಮಾಫೀಯಾದವರು ಮಾತ್ರ ಸರ್ಕಾರಿ ಆದೇಶಗಳನ್ನು ಗಾಳಿಗೆ ತೂರಿ ರಾಜಕಾಲುವೆಗಳು, ಚೆಕ್‌ಡ್ಯಾಂಗಳನ್ನು, ಗಿಡ ಮರಗಳನ್ನು ನಾಶ ಮಾಡಿ ಪರಿಸರವನ್ನು ನಾಶ ಮಾಡುತ್ತಿದ್ದಾರೆಂದು ಸ್ಥಳಿಯರು ಆರೋಪಿಸುತ್ತಿದ್ದಾರೆ.
ಸರ್ಕಾರಕ್ಕೆ ತೆರಿಗೆ ವಂಚನೆ:
ಕೃಷಿ ಭೂಮಿಯನ್ನು ಲೇಔಟ್‌ಗಳನ್ನಾಗಿ ಅಭಿವೃದ್ಧಿ ಮಾಡಲು ಕೆಲ ನಿಯಮಗಳನ್ನು ಪಾಲಿಸಿ, ನಿವೇಶನಗಳನ್ನು ಮಾರಾಟ ಮಾಡಬೇಕು ಹಾಗೂ ಸರಕಾರಕ್ಕೆ ಪಾವತಿಸಬೇಕು. ಜೊತೆಗೆ ಕನ್‌ವರ್ಷನ್ ಮಾಡಿಸಿದರೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ನೀಡಿದ ನಂತರ ನಿವೇಶನಗಳನ್ನು ಮಾರಾಟ ಮಾಡಬೇಕು ಎಂಬ ನಿಯಮಗಳಿದ್ದು ಇವುಗಳಿಂದ ತಪ್ಪಿಸಿಕೊಳ್ಳಲು ೫ ಗುಂಟೆಗಿಂತ ಹೆಚ್ಚು ಅಭಿವೃದ್ಧಿ ಮಾಡಿ, ಮಾರಾಟ ಮಾಡಿ ಸರಕಾರದ ನಿಯಮಗಳಿಂದ ತಪ್ಪಿಸಿಕೊಳ್ಳುವ ಉಪಾಯ ಇದಾಗಿದೆ.

ಹೊರಗಿನವರೆ ಖರೀದಿಗೆ ಮುಂದು:
ತಾಲೂಕಿನಲ್ಲಿ ರಿಯಲ್ ಎಸ್ಟೇಟ್ ಮಾಫೀಯಾದವರು ಮಾಡಿರುವ ೫ ಗುಂಟೆಗಳಂತೆ ಜಮೀನು ಮಾರಾಟ ಮಾಡುತ್ತಿರುವುದರಲ್ಲಿ ವಿಲ್ಲಾಗಳನ್ನು ನಿರ್ಮಿಸಲು ರಾಜ್ಯ ಮಾತ್ರವಲ್ಲದೆ, ಅನ್ಯ ರಾಜ್ಯಗಳ ಹಾಗೂ ವಿದೇಶಿಗರು ಸಹ ಅಭಿವೃದ್ಧಿಗೊಳಿಸಿರುವ ವಿಲ್ಲಾ ಕಟ್ಟಲು ಯೋಗ್ಯವಾಗಿರುವ ಜಮೀನುಗಳನ್ನು ಖರೀದಿಸುತ್ತಿದ್ದಾರೆಂದು ಸ್ಥರಿಯರು ತಿಳಿಸುತ್ತಿದ್ದಾರೆ.
ಒಟ್ಟಾರೆ ತಾಲೂಕಿನಲ್ಲಿ ರಿಯಲ್ ಎಸ್ಟೇಟ್ ಮಾಫೀಯಾದವರು ಹಾವಳಿ ಹೆಚ್ಚಾಗಿದ್ದು, ತಾಲೂಕಿನಲ್ಲಿ ಪರಿಸರವನ್ನು ನಾಶ ಮಾಡುತ್ತಿದ್ದಾರೆ. ಎಷ್ಟೆಲ್ಲ ಮಾಡುತ್ತಿದ್ದರು ಸಹ ತಾಲೂಕಿನ ಅಧಿಕಾರಿಗಳು ಮೌನವಾಗಿದ್ದಾರೆಂದು ಅವರ ಮೌನಕ್ಕೆ ಕಾರಣವಾದರೂ ಏನು ಎಂದು ಸ್ಥಳಿಯರು ಪ್ರಶ್ನಿಸುತ್ತಿದ್ದಾರೆ.
'ಸದಾಶಿವನಹಳ್ಳಿ ಗ್ರಾಮವು ಅತ್ಯಂತ ಚಿಕ್ಕ ಹಾಗೂ ಬಡವರು ವಾಸಿಸುತ್ತಿರುವ ಗ್ರಾಮ, ಗ್ರಾಮದ ಸುತ್ತಮುತ್ತಲು ಖಾಸಗಿಯವರು ಜಮೀನು ಖರೀದಿಸಿ ಅಭಿವೃದ್ಧಿ ಮಾಡುವ ಜೊತೆಗೆ ಗ್ರಾಮದ ಜನಸಾಮಾನ್ಯರಿಗೆ ಅನುಕೂಲವಾಗುವ ಹುಲ್ಲುಗಾವಲು ಪ್ರದೇಶ, ಸರಕಾರಿ ಬಂಜರು ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದು ಮುಂದಿನ ಪೀಳಿಗೆಗಾಗಿ ಸರಕಾರಿ ಜಮೀನನ್ನು ಉಳಿಸಿ ದನಕರುಗಳಿಗೆ ಅನುಕೂಲ ಮಾಡಿಕೊಡಬೇಕು' ಎಂದು ಸದಾಶಿವನಹಳ್ಳಿ ಗ್ರಾಮಸ್ಥ ಸುಬ್ಬರಾಯಪ್ಪ ಹೇಳಿದರು.












Click it and Unblock the Notifications