ಚಿಕ್ಕಬಳ್ಳಾಪುರ: ಮೆಗಾ ಡೇರಿಯಲ್ಲಿ 50 ಕೋಟಿ ರೂ. ವೆಚ್ಚದ ಹಾಲಿನ ಪ್ಯಾಕೆಟ್ ತಯಾರಿಕಾ ಘಟಕ ಸ್ಥಾಪನೆಗೆ ಸಿದ್ಧತೆ

ಚಿಕ್ಕಬಳ್ಳಾಪುರ, ಅಕ್ಟೋಬರ್‌, 30: ಪ್ರತ್ಯೇಕ ಹಾಲು ಒಕ್ಕೂಟ ರಚನೆ ಸಂಬಂಧ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸುವುದಾಗಿ ಮಾಜಿ ಸಚಿವ ಡಾ.ಕೆ.ಸುಧಾಕರ್ ಘೋಷಿಸಿದ್ದಾರೆ. ನವೆಂಬರ್ ಅಂತ್ಯದ ಗಡುವು ಕೊಟ್ಟಿದ್ದಾರೆ. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಕೋಚಿಮುಲ್ ಪ್ರತ್ಯೇಕ ಹಾಲು ಒಕ್ಕೂಟ ರಚನೆಗೆ ಅತ್ಯಗತ್ಯವಾಗಿ ಬೇಕಾಗಿರುವ ಹಾಲಿನ ಪ್ಯಾಕೆಟ್ ತಯಾರಿಕಾ ಘಟಕ ಸ್ಥಾಪನೆಗೆ ಸಿದ್ಧತೆ ನಡೆಸಿದೆ. ಸುಮಾರು 50 ಕೋಟಿ ರೂಪಾಯಿ ವೆಚ್ಚದಲ್ಲಿ ಘಟಕ ನಿರ್ಮಾಣಕ್ಕೆ ನಿರ್ಧರಿಸಿದೆ.

ಬಿಜೆಪಿ ಸರ್ಕಾರದಲ್ಲಿ ಮಾಜಿ ಸಚಿವ ಡಾ.ಕೆ. ಸುಧಾಕರ್ ಅವರ ನೇತೃತ್ವದಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಘೋಷಣೆ ಮಾಡಲಾಗಿತ್ತು. ಆದರೆ, ಪ್ರತ್ಯೇಕ ಒಕ್ಕೂಟಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ಹಾಲಿನ ಪ್ಯಾಕೆಟ್ ತಯಾರಿಕೆಯ ಘಟಕವೇ ಇರಲಿಲ್ಲ. ಹಾಲಿನ ಪ್ಯಾಕೆಟ್ ಮಾಡಲು ಬೇರೆ ಒಕ್ಕೂಟಗಳ ಮೊರೆ ಹೋಗಬೇಕಿತ್ತು. ಅಲ್ಲದೇ ತಯಾರಿಕಾ ವೆಚ್ಚವೂ ಹೆಚ್ಚಾಗಲಿದೆ ಎಂಬ ಆರೋಪವೂ ಇತ್ತು. ಯಾವುದೇ ಮೂಲ ಸೌಲಭ್ಯಗಳಿಲ್ಲದೆ ಪ್ರತ್ಯೇಕ ಒಕ್ಕೂಟ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು.

Preparation for A 50 Crore Worth Milk Refinery Plant to Be Established in Chikkaballapur District

50 ಕೋಟಿ ರೂಪಾಯಿ ವೆಚ್ಚದಲ್ಲಿ ಘಟಕ

ಪ್ರತ್ಯೇಕ ಹಾಲು ಒಕ್ಕೂಟವನ್ನು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ರದ್ದುಪಡಿಸಿದ ನಂತರ ಕೋಚಿಮುಲ್ ಈಗ ನಂದಿ ಕ್ರಾಸ್ ಬಳಿಯಿರುವ ಮೆಗಾಡೇರಿ ಆವರಣದಲ್ಲಿ ಹಾಲಿನ ಪ್ಯಾಕೆಟ್ ತಯಾರಿಕಾ ಘಟಕ ಸ್ಥಾಪನೆಗೆ ಮುಂದಾಗಿದೆ. ಸುಮಾರು 50 ಕೋಟಿ ವೆಚ್ಚದಲ್ಲಿ ಘಟಕ ನಿರ್ಮಾಣವಾಗಲಿದ್ದು, ಸದ್ಯದಲ್ಲೇ ಶಂಕುಸ್ಥಾಪನೆ ನೆರವೇರಲಿದೆ. ಈ ಘಟಕ ನಿರ್ಮಾಣವಾದರೆ ಪ್ರತ್ಯೇಕ ಹಾಲು ಒಕ್ಕೂಟವಾದರೂ ಬೇರೆ ಒಕ್ಕೂಟಗಳನ್ನು ಅವಲಂಬಿಸಬೇಕಾದ ಅವಶ್ಯಕತೆ ಇರುವುದಿಲ್ಲ. ಸ್ವಾವಲಂಬನೆಯಿಂದ ಪ್ರತ್ಯೇಕ ಹಾಲು ಒಕ್ಕೂಟವನ್ನು ನಿರ್ವಹಿಸಬಹುದು.

ತೋಟಗಾರಿಕೆ ಇಲಾಖೆ ಜಾಗ ಪಡೆಯಲು ಪ್ರಯತ್ನ

ಸದ್ಯ ಮಗಾಡೇರಿ ಆವರಣದಲ್ಲಿ ಟೆಟ್ರಾಪ್ಯಾಕ್, ತುಪ್ಪ, ಪನ್ನೀರ್ ಹೀಗೆ ಹಲವು ಉತ್ಪಾದನಾ ಘಟಕಗಳಿವೆ. ಸದ್ಯ ಹಾಲಿನ ಪ್ಯಾಕೆಟ್ ತಯಾರಿಕಾ ಘಟಕ ಸ್ಥಾಪನೆಗೆ ಅಗತ್ಯವಾದಷ್ಟು ಜಾಗದ ಕೊರತೆ ಇದೆ. ಆಡಳಿತ ವಿಭಾಗದ ಕಟ್ಟಡದ ಎದುರಿನ ಜಾಗದಲ್ಲಿ ಘಟಕ ಸ್ಥಾಪನೆಗೆ ಚಿಂತಿಸಲಾಗಿದೆಯಾದರೂ ಜಾಗ ಕಿರಿದಾಗಿದೆ.

ಹೀಗಾಗಿ ಮಗಾಡೇರಿ ಪಕ್ಕದಲ್ಲೇ ಇರುವ ತೋಟಗಾರಿಕೆ ಇಲಾಖೆಗೆ ಸೇರಿದ 10 ಎಕರೆ ಜಾಗ ಪಡೆಯಲು ಕೋಚಿಮುಲ್ ಮುಂದಾಗಿದೆ. ಈಗಿರುವ ಜಾಗದಲ್ಲಿ ಘಟಕ ಮಾಡಿದರೆ ಮುಂದೆ ಸಮಸ್ಯೆಗಳು ಎದುರಾಗಲಿವೆ. ಹೀಗಾಗಿ ಹೆಚ್ಚುವರಿ ಜಾಗ ಪಡೆಯಲು ಯತ್ನಗಳು ನಡೆದಿವೆ.

ಅಭಿವೃದ್ಧಿಗೆ ಕಂಕಣ

ಸದ್ಯಕ್ಕೆ ಕೋಚಿಮುಲ್‌ನಲ್ಲಿ 200 ಕೋಟಿ ರೂಪಾಯಿಗಳನ್ನು ಅಭಿವೃದ್ಧಿಗೆಂದೇ ಮೀಸಲಿರಿಸಿದ್ದು, ಇದೇ ಹಣದಲ್ಲೇ ಹಾಲಿನ ಪ್ಯಾಕೆಟ್ ತಯಾರಿಕಾ ಘಟಕ ಸ್ಥಾಪನೆಗೆ ಸಿದ್ಧತೆಗಳು ನಡೆದಿವೆ. ಮತ್ತೊಂದೆಡೆ ಚಿಂತಾ ಮಣಿಯಲ್ಲಿ 50 ಕೋಟಿ ರೂಪಾಯಿ ವೆಚ್ಚದಲ್ಲಿ ಐಸ್ ಕ್ರೀಂ ಫ್ಯಾಕ್ಟರಿ, ಗುಡಿ ಬಂಡೆಯಲ್ಲಿ 2 ಕೋಟಿ ರೂಪಾಯಿ ವೆಚ್ಚದಲ್ಲಿ ಶಿಬಿರ ಕಚೇರಿ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿ ಹಾಗೂ ಹಾಲಿನ ಉತ್ಪಾದನೆ ಹೆಚ್ಚಳಕ್ಕೆ ಹಲವು ಕ್ರಮಗಳನ್ನು ಕೋಚಿಮುಲ್ ತೆಗೆದುಕೊಳ್ಳಲು ಮುಂದಾಗಿದೆ.

ಹೋರಾಟದ ಕಹಳೆ

ಪ್ರತ್ಯೇಕ ಹಾಲು ಒಕ್ಕೂಟ ರದ್ದುಪಡಿಸಿರುವುದರ ವಿರುದ್ಧ ಮಾಜಿ ಸಚಿವ ಡಾ.ಕೆ.ಸುಧಾಕರ್ ಹೋರಾಟದ ಕಹಳೆ ಮೊಳಗಿಸಿದ್ದಾರೆ. ನವೆಂಬರ್ ಅಂತ್ಯದೊಳಗೆ ಪ್ರತ್ಯೇಕ ಒಕ್ಕೂಟ ಮಾಡದಿದ್ದರೆ, ಬಾಗೇಪಲ್ಲಿ ತಾಲೂಕಿನ ಗಡಿದಂನಿಂದ ವಿಧಾನಸೌಧ ಚಲೋ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಮತ್ತೊಂದೆಡೆ ಕೋಚಿಮುಲ್ ಅಧ್ಯಕ್ಷರು, ಹೋರಾಟದಿಂದ ಪ್ರತ್ಯೇಕ ಒಕ್ಕೂಟ ಆಗಲ್ಲ. ಮೊದಲೇ ಎಲ್ಲ ಸೌಲಭ್ಯ ಕಲ್ಪಿಸಿ ಪ್ರತ್ಯೇಕ ಒಕ್ಕೂಟ ಮಾಡಿದ್ದರೆ ಈ ಸಮಸ್ಯೆಯೇ ಬರುತ್ತಿರಲಿಲ್ಲ. ಈಗ ಒಕ್ಕೂಟಕ್ಕೆ ಅಗತ್ಯವಿರುವ ಸೌಲಭ್ಯ ಕಲ್ಪಿಸಲಾಗುವುದು. ಆನಂತರ ಪ್ರತ್ಯೇಕ ಒಕ್ಕೂಟ ಮಾಡುತ್ತೇವೆ. ಗಡುವಿಗೆಲ್ಲಾ ನಾವು ಹೆದರಲ್ಲ ಎಂದು ತಿರುಗೇಟು ನೀಡಿದ್ದಾರೆ.

ಕೆಎಂಎಫ್ ಅಧ್ಯಕ್ಷರ ವಾದ ಏನು?

ಪ್ರತ್ಯೇಕ ಒಕ್ಕೂಟ ರಚನೆಗೆ ನಮ್ಮ ವಿರೋಧವಿಲ್ಲ. ಹಾಲು ಉತ್ಪಾದಕರ ಹಿತಕ್ಕೆ ಅನುಗುಣವಾಗಿ ಎಲ್ಲ ಮೂಲ ಅವಶ್ಯಕತೆಗಳನ್ನು ಕಲ್ಪಿಸಿ ಪ್ರತ್ಯೇಕ ಒಕ್ಕೂಟ ರಚನೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ನವೆಂಬರ್‌ 30ರೊಳಗೆ ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಹಾಲು ಒಕ್ಕೂಟ ನೀಡದಿದ್ದರೆ ಬಾಗೇಪಲ್ಲಿ ಗಡಿದಂನಿಂದ ವಿಧಾನಸೌಧ ಚಲೋ ಪಾದಯಾತ್ರೆ ನಡೆಸಲಾಗುವುದು. ಪ್ರತ್ಯೇಕ ಒಕ್ಕೂಟ ರಚನೆ ಮಾಡಿದ್ದರೂ ನನ್ನ ಮೇಲಿನ ದ್ವೇಷಕ್ಕೆ ರದ್ದು ಮಾಡಿದ್ದು, ಜಿಲ್ಲೆಯ ಜನರಿಗೆ ಅನ್ಯಾಯ ಮಾಡಲಾಗಿದೆ. ಇದರ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್‌ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೋಚಿಮುಲ್‌ ಅಧ್ಯಕ್ಷರಾದ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಪ್ರತ್ಯೇಕ ಒಕ್ಕೂಟ ಸಂಬಂಧ ಮಾಜಿ ಸಚಿವ ಡಾ.ಕೆ.ಸುಧಾಕರ್‌ ಅವರು ಕೊಟ್ಟಿರುವ ನವೆಂಬರ್‌ ತಿಂಗಳ ಅಂತ್ಯದ ಗಡುವಿನ ಪ್ರಶ್ನೆಗೆ ಉತ್ತರಿಸಿ, ನಾವು ಗಡುವಿಗೆ ಭಯ ಪಡಲ್ಲ. ಹೋರಾಟ ಮಾಡಿದರೆ ಆಗಲ್ಲ. ಮಾಡುವ ರೀತಿಯಲ್ಲಿ ಪ್ರತ್ಯೇಕ ಒಕ್ಕೂಟ ಮಾಡಿದ್ದರೆ ಇಂತಹ ಸಮಸ್ಯೆ ಆಗುತ್ತಿರಲಿಲ್ಲ. ಈಗ ಶಾಸಕರು, ನಿರ್ದೇಶಕರು ಮತ್ತು ಸರಕಾರ ಪ್ರತ್ಯೇಕ ಒಕ್ಕೂಟ ರಚನೆ ಪರವಾಗಿದ್ದು, ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಿ ಪ್ರತ್ಯೇಕ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಚಿಕ್ಕಬಳ್ಳಾಪುರ ಮೆಗಾಡೇರಿಯಲ್ಲಿ ಅತ್ಯಗತ್ಯವಾಗಿ ಆಗಬೇಕಿರುವ ಹಾಲಿನ ಪ್ಯಾಕೆಟ್ ಉತ್ಪಾದನಾ ಘಟಕವನ್ನು ಸುಮಾರು 50 ರೂಪಾಯಿ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಿದ್ದೇವೆ. ಜಾಗದ ಸಮಸ್ಯೆ ಸಂಬಂಧ ಚರ್ಚಿಸಿ ಡೇರಿ ಪಕ್ಕದಲ್ಲಿರುವ ತೋಟಗಾರಿಕೆ ಇಲಾಖೆಗೆ ಸೇರಿದ 10 ಎಕರೆ ಜಾಗ ಪಡೆಯಲು ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಹಾಗೂ ಸರಕಾರದ ಗಮನಕ್ಕೆ ತಂದು ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಪ್ರತ್ಯೇಕ ಒಕ್ಕೂಟ ರಚನೆಯ ಗಡುವಿಗೆ ನಾವು ಹೆದರಲ್ಲ, ಪ್ರತ್ಯೇಕ ಒಕ್ಕೂಟ ಮಾಡಲು ನಮ್ಮ ವಿರೋಧವಿಲ್ಲ, ಎಲ್ಲ ಸೌಲಭ್ಯಗಳನ್ನು ಕಲ್ಪಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+