ನೈತಿಕ ಪೊಲೀಸ್ ಗಿರಿ ಆರೋಪ, ಇಬ್ಬರು ಯುವಕರು ಅಂದರ್!
ಚಿಕ್ಕಬಳ್ಳಾಪುರ: ಇದಕ್ಕೆ ಅಲ್ವೆ ಹೇಳೋದು 'ಮಾಡಿದ್ದುಣ್ಣೋ ಮಹರಾಯ' ಅಂತ? ಇಲ್ಲೂ ಹಾಗೇ ಹಾಗಿದೆ. ನೈತಿಕ ಪೊಲೀಸ್ ಗಿರಿ ತೋರಿಸಲು ಹೋದ ಯುವಕರು ಈಗ ಕಂಬಿ ಹಿಂದೆ ಬಿದ್ದಿದ್ದಾರೆ. ತಮಗೆ ಸಂಬಂಧ ಇಲ್ಲದ ವಿಚಾರದಲ್ಲಿ ಮೂಗು ತೂರಿಸಲು ಹೋಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾದ್ರೆ ಈ ಘಟನೆ ನಡೆದಿದ್ದು ಎಲ್ಲಿ? ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿಯೋಣ.
ಚಿಕ್ಕಬಳ್ಳಾಪುರ ನಗರದಲ್ಲಿ ಅನ್ಯಕೋಮಿನ ಯುವತಿ & ಹಿಂದೂ ಯುವಕ ಹೋಟೆಲ್‌ಗೆ ಬಂದ ಹಿನ್ನೆಲೆಯಲ್ಲಿ ಯುವಕರ ಗುಂಪು ಹಿಂದೂ ಯುವಕನ ಮೇಲೆ ಹಲ್ಲೆಗೆ ಯತ್ನಿಸಿದೆ ಎಂದು ಆರೋಪಿಸಲಾಗಿತ್ತು. ಇನ್ನು ಘಟನೆ ಸಂಬಂಧ ಒಂದು ವಿಡಿಯೋ ಕೂಡ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿ ಎಲ್ಲೆಡೆ ಹರಿದಾಡಿತ್ತು. ಕೂಡಲೇ ಅಲರ್ಟ್ ಆದ ಪೊಲೀಸರು, ವಿಡಿಯೋದಲ್ಲಿ ಕೃತ್ಯ ಎಸಗಿದ್ದ ಆರೋಪಿಗಳ ಚಹರೆ ಮೂಲಕ ಬಂಧನಕ್ಕೆ ಬಲೆ ಬೀಸಿದ್ದರು. ಇದೀಗ ಇಬ್ಬರನ್ನು ಖಾಕಿ ಪಡೆ ಕಂಬಿ ಹಿಂದೆ ತಳ್ಳಿದೆ.

ಘಟನೆ ನಡೆದಿದ್ದು ಹೇಗೆ?
ಕಳೆದ ಬುಧವಾರ ಸಂಜೆ ಚಿಕ್ಕಬಳ್ಳಾಪುರದ ಚಾಟ್ ಸೆಂಟರ್‌ನಲ್ಲಿ ಯುವಕರ ಗುಂಪು ಬೇರೆ ಬೇರೆ ಧರ್ಮದ ಹುಡುಗಿ ಮತ್ತು ಹುಡುಗನಿಗೆ ಬೆದರಿಕೆ ಹಾಕಿತ್ತು ಎಂದು ಆರೋಪಿಸಲಾಗಿತ್ತು. ಯುವಕ & ಯುವತಿ ಚಾಟ್ ಸೆಂಟರ್‌ಗೆ ಬಂದ ಸಂದರ್ಭದಲ್ಲಿ ಘಟನೆ ನಡೆದಿತ್ತು. ನೈತಿಕ ಪೊಲೀಸ್ ಗಿರಿಯ ವಿಡಿಯೋ ವೈರಲ್ ಆಗಿ ಆಕ್ರೋಶ ಕೂಡ ವ್ಯಕ್ತವಾಗಿತ್ತು. ಅಲ್ಲದೆ ಹಿಂದೂ ಯುವಕನ ಜೊತೆ ಅನ್ಯಕೊಮಿನ ಯುವತಿ ಬಂದಿದ್ದ ಹಿನ್ನೆಲೆ, ಹುಡುಗಿಯಿಂದ ದೂರ ಇರುವಂತೆ ಬೆದರಿಕೆ ಹಾಕಲಾಗಿತ್ತು ಎಂದು ಆರೋಪಿಸಲಾಗಿದೆ.
ಮಾತು ಕೇಳಲಿಲ್ಲ ಅಂತಾ ಹಲ್ಲೆ?
ಇಷ್ಟೇ ಅಲ್ಲ, ಯುವಕನ ತಮ್ಮ ಮಾತು ಕೇಳಲಿಲ್ಲ ಹಾಗೂ ತಮ್ಮ ಮಾತನ್ನು ನಿರ್ಲಕ್ಷಿಸಿ ಹೊರಟಿದ್ದಾನೆಂದು ಆತನ ಮೇಲೆ ಹಲ್ಲೆಗೂ ಯತ್ನಿಸಿದ್ದಾರೆ ಪುಂಡರು ಎಂದು ಆರೋಪಿಸಲಾಗಿತ್ತು. ಇನ್ನು ಈ ಕುರಿತಾಗಿ ಸಂತ್ರಸ್ತ ಯುವತಿ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಹಾಗೇ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿ ಸರ್ಚಿಂಗ್ ಶುರು ಮಾಡಿದ್ದರು. ಇದೀಗ ಇಬ್ಬರು ಆರೋಪಿಗಳನ್ನ ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ. ಏನೋ ಮಾಡಲು ಹೋಗಿ ಇದೀಗ ಇಬ್ಬರು ಕಂಬಿ ಹಿಂದೆ ಬಿದ್ದಿದ್ದಾರೆ. ಹಾಗಾದ್ರೆ ಬಂಧಿತ ಯುವಕರು ಯಾರು? ಮುಂದೆ ಓದಿ.
ಮೂವರಲ್ಲಿ ಇಬ್ಬರು ಲಾಕ್.. ಒಬ್ಬ ಎಸ್ಕೇಪ್!
ಹೌದು, ಈ ಘಟನೆ ನಡೆದಾಗ ಒಟ್ಟು ಮೂವರು ಸ್ಥಳದಲ್ಲಿ ಇದ್ರು ಎನ್ನಲಾಗಿದೆ. ಆದರೆ ಈಗ ಮೂವರ ಪೈಕಿ ಇಬ್ಬರು ಮಾತ್ರ ಲಾಕ್ ಆಗಿದ್ದಾರೆ. ಮತ್ತೊಂದ್ಕಡೆ ಇನ್ನೊಬ್ಬ ಆರೋಪಿ ಎಸ್ಕೇಪ್ ಆಗಿದ್ದಾನೆ ಎನ್ನಲಾಗುತ್ತಿದೆ. ಬಂಧಿತರನ್ನ ವಾಯಿದ್ ಮತ್ತು ಸದ್ದಾಂ ಎಂದು ಗುರುತಿಸಲಾಗಿದೆ. ಇಬ್ಬರೂ 20 ವರ್ಷದ ಯುವಕರಾಗಿದ್ದು, ಪರಾರಿ ಆಗಿರುವ ಇನ್ನೊಬ್ಬ ಆರೋಪಿಗೂ ಬಲೆ ಬೀಸಲಾಗಿದೆ. ಬಂಧಿತರು ಮಾಂಸದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯ ಸರ್ಕಾರದ ವಾರ್ನಿಂಗ್!
ಈಗಾಗಲೇ ಹೊಸ ಸರ್ಕಾರ ನೈತಿಕ ಪೊಲೀಸ್ ಗಿರಿ ವಿರುದ್ಧ ಖಡಕ್ ಎಚ್ಚರಿಕೆ ರವಾನಿಸಿದೆ. ತಪ್ಪು ಯಾರೇ ಮಾಡಿದರೂ ಶಿಕ್ಷೆ ಕಟ್ಟಿಟ್ಟಬುತ್ತಿ ಎಂದು ಹೊಸ ಸರ್ಕಾರ ಎಚ್ಚರಿಕೆ ನಿಡಿದೆ. ಹೀಗೆ ಸಿದ್ದರಾಮಯ್ಯ ಸರ್ಕಾರ ಎಚ್ಚರಿಕೆ ನೀಡಿರುವ ಕೆಲವೇ ದಿನದಲ್ಲಿ ಇಂತಹ ಘಟನೆ ನಡೆದಿದ್ದು, ಆರೋಪಿಗಳನ್ನ ಕಂಬಿಹಿಂದೆ ತಳ್ಳಿದ್ದಾರೆ ಪೊಲೀಸರು. ಮತ್ತೊಂದ್ಕಡೆ ಎಸ್ಕೇಪ್ ಆಗಿರುವ ಮತ್ತೊಬ್ಬನಿಗೂ ಹುಡುಕಾಟ ತೀವ್ರಗೊಂಡಿದ್ದು ಪ್ರಕರಣವನ್ನ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.
ಒಟ್ನಲ್ಲಿ ಯಾರದ್ದೋ ವಿಚಾರದಲ್ಲಿ ಮೂಗು ತೂರಿಸಲು ಹೋಗಿ, ನೈತಿಕ ಪೊಲೀಸ್ ಗಿರಿ ತೋರಿದ ಇಬ್ಬರಿಗೆ ಈಗ ಜೈಲು ದರ್ಶನವಾಗಿದೆ. ಇದರ ಜೊತೆಗೆ ಹೊಸ ಸರ್ಕಾರದಿಂದ ನೈತಿಕ ಪೊಲೀಸ್ ಗಿರಿ ವಿರುದ್ಧ ಖಡಕ್ ಮೆಸೇಜ್ ಕೂಡ ರವಾನೆ ಆದಂತೆ ಕಾಣುತ್ತಿದೆ. ಪೊಲೀಸ್ ಇಲಾಖೆ ಇಂತಹ ಘಟನೆ ನಡೆಯದಂತೆ ಕಡಿವಾಣ ಹಾಕಲು ಸಕಲ ಸಿದ್ಧತೆ ಕೈಗೊಂಡಿದೆ.












Click it and Unblock the Notifications