ಮುಂಜಾನೆ ನಂದಿ ಬೆಟ್ಟಕ್ಕೆ ಬಂದವರು ನಿರಾಸೆಯಿಂದ ವಾಪಸ್!
ಚಿಕ್ಕಬಳ್ಳಾಪುರ, ಜೂನ್ 14 : ಲಾಕ್ ಡೌನ್ ಸಡಿಲಿಕೆಯಾಗಿದೆ, ಪ್ರವಾಸಿ ತಾಣಗಳು ಬಾಗಿಲು ತೆರೆದಿವೆ ಎಂದು ನಂದಿ ಬೆಟ್ಟಕ್ಕೆ ಹೋದವರು ನಿರಾಸೆಯಿಂದ ವಾಪಸ್ ಆದರು. ಚಿಕ್ಕಬಳ್ಳಾಪುರದ ಪ್ರಸಿದ್ಧ ಪ್ರವಾಸಿ ತಾಣ ನಂದಿ ಬೆಟ್ಟಕ್ಕೆ ಪ್ರವಾಸಿಗರ ಭೇಟಿ ನಿಷೇಧಿಸಲಾಗಿದೆ.
ಶನಿವಾರ ಮತ್ತು ಭಾನುವಾರ ನಂದಿ ಬೆಟ್ಟಕ್ಕೆ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಅದರಲ್ಲಿಯೂ ಬೆಂಗಳೂರು ನಗರ ಜನರು ವಾರಾಂತ್ಯದಲ್ಲಿ ನಂದಿ ಬೆಟ್ಟಕ್ಕೆ ಸೂರ್ಯೋದಯ ನೋಡಲು ಹೋಗುತ್ತಾರೆ. ಪ್ರೇಮಿಗಳಿಗೆ ನಂದಿ ಬೆಟ್ಟ ನೆಚ್ಚಿನ ತಾಣ.
ಇಂದು ಭಾನುವಾರ ನಂದಿ ಬೆಟ್ಟದಲ್ಲಿನ ಪಾಕೃತಿಕ ಸೌಂದರ್ಯ ಸವಿಯಲು ಮುಂಜಾನೆಯೇ ಎದ್ದು ಹೋದವರಿಗೆ ನಿರಾಸೆ ಕಾದಿತ್ತು. ಪೊಲೀಸರು ಎಲ್ಲರನ್ನೂ ವಾಪಸ್ ಕಳಿಸಿದ್ದು, ಯಾರಿಗೂ ನಂದಿ ಬೆಟ್ಟದ ಸೌಂದರ್ಯ ಸವಿಯುವ ಅವಕಾಶ ಸಿಗಲಿಲ್ಲ.

ಲಾಕ್ ಡೌನ್ ನಿಯಮ ಸಡಿಲಿಕೆಯಾಗಿದೆ, ಹಲವು ಪ್ರವಾಸಿ ತಾಣಗಳಲ್ಲಿ ಜನರ ಭೇಟಿಗೆ ಅವಕಾಶ ನೀಡಲಾಗಿದೆ. ಆದರೆ, ಚಿಕ್ಕಬಳ್ಳಾಪುರದ ನಂದಿ ಬೆಟ್ಟಕ್ಕೆ ಪ್ರವಾಸಿಗರನ್ನು ಯಾವ ದಿನವೂ ಬಿಡುತ್ತಿಲ್ಲ. ಜೂನ್ 30ರ ತನಕ ಬಿಡುವುದಿಲ್ಲ ಎಂದು ತೋಟಗಾರಿಕಾ ಇಲಾಖೆ ಹೇಳಿದೆ.
ವಾರಂತ್ಯದಲ್ಲಿ ನಂದಿ ಬೆಟ್ಟಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಆದ್ದರಿಂದ, ಸಾಮಾಜಿಕ ಅಂತರ ಕಾಪಾಡುವುದು ಕಷ್ಟ ಎಂಬ ಕಾರಣಕ್ಕೆ ಪ್ರವಾಸಿಗರ ಭೇಟಿಗೆ ಅವಕಾಶ ನಿರಾಕರಿಸಲಾಗಿದೆ.
ಲಾಕ್ ಡೌನ್ ಮುಗಿದ ಮೇಲೆಯೂ ವಾರಾಂತ್ಯದಲ್ಲಿ ಬೆಳಗ್ಗೆ 8ಗಂಟೆಯ ಬಳಿಕವೇ ನಂದಿ ಬೆಟ್ಟಕ್ಕೆ ಪ್ರವಾಸಿಗರನ್ನು ಬಿಡುವ ಕುರಿತು ತೋಟಗಾರಿಕಾ ಇಲಾಖೆ ಚಿಂತನೆ ನಡೆಸಿದೆ.












Click it and Unblock the Notifications