ಹೆಚ್ಚಿದ ಬಿಸಿಲ ಝಳ: ಜಾನುವಾರುಗಳಿಗೆ ಮೇವಿನ ಕೊರತೆ- ಹಸಿ ಮೇವಿಗೆ ಬರ- ರಾಗಿ, ಜೋಳದ ಸಪ್ಪೆ, ಭತ್ತದ ಹುಲ್ಲಿಗೆ ಡಿಮ್ಯಾಂಡ್
ಚಿಕ್ಕಬಳ್ಳಾಪುರ ಮೇ 1: ಬಿಸಿಲಿನ ತಾಪ ಏರುತ್ತಿರುವ ನಡುವೆಯೇ ಪೂರ್ವ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬಾರದ ಕಾರಣ ಹಸಿ ಮೇವಿನ ಕೊರತೆಯಿಂದ ಗ್ರಾಮೀಣ ಪ್ರದೇಶದಲ್ಲಿ ಹೈನುಗಾರಿಕೆಯನ್ನೆ ನೆಚ್ಚಿಕೊಂಡಿರುವ ರೈತಾಪಿ ವರ್ಗ ಒಣ ಮೇವು ಸಂಗ್ರಹಕ್ಕೆ ಮುಂದಾದ ಪರಿಣಾಮ ರಾಗಿ, ಜೋಳದ ಸಪ್ಪೆ, ಭತ್ತದ ಹುಲ್ಲಿಗೆ ಡಿಮ್ಯಾಂಡ್ ಸೃಷ್ಟಿಯಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ಭಾಗಗಳು ಸೇರಿದಂತೆ ಗುಡಿಬಂಡೆ ತಾಲೂಕಿನಾದ್ಯಂತ ರೈತರು ಹೈನೋದ್ಯಮವನ್ನೇ ಉಪ ಕಸುಬನ್ನಾಗಿ ನೆಚ್ಚಿಕೊಂಡಿದ್ದು, ಬೇಸಿಗೆ ಆರಂಭವಾದರೆ ಸಾಕು ಜಾನುವಾರುಗಳ ಪರಿಸ್ಥಿತಿ ಹೇಳತೀರದು. ಅವುಗಳಿಗೆ ತಿನ್ನಲು ಮೇವು ಕೂಡ ಸಿಗದ ಪರಿಸ್ಥಿತಿ ಗ್ರಾಮೀಣ ಪ್ರದೇಶದಲ್ಲಿ ನಿರ್ಮಾಣವಾಗುತ್ತದೆ. ಇದಕ್ಕಾಗಿಯೇ ರೈತರು ಮುಂದಾಲೋಚನೆ ಮಾಡಿ ಬೇಸಿಗೆಯ ಆರಂಭದಲ್ಲಿಯೇ ಜಾನುವಾರುಗಳಿಗಾಗಿ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರು. ಆದರೆ ಈ ವರ್ಷ ಅದಕ್ಕೂ ರೈತರು ಪರಿತಪಿಸುವಂತಾಗಿದೆ.

ಗ್ರಾಮೀಣ ಭಾಗದ ರೈತರಿಗೆ ಜಾನುವಾರು ಸಾಕುವುದು, ಬೆಳೆಸುವುದು ಸವಾಲಾಗಿದೆ. ರೈತರು ವರ್ಷ ಪೂರ್ತಿ ಜಾನುವಾರುಗಳಿಗೆ ಮೇವಿನ ಕೊರತೆ ಕಾಡದಿರಲಿ ಎಂಬ ಕಾರಣಕ್ಕೆ ಪ್ರತಿ ಮಳೆಗಾಲದ ಬೆಳೆಯ ಹುಲ್ಲಿನ ಬಣವೆಗಳನ್ನು ಬೇಸಿಗೆ ವೇಳೆಗೆ ಸಂಗ್ರಹ ಮಾಡುವುದು ಕಾಯಕವಾಗಿದ್ದು, ಪೂರ್ವ ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಒಣ ಹುಲ್ಲಿನ ಬೆಲೆಯೂ ದುಪ್ಪಟ್ಟು ಹೆಚ್ಚಳಗೊಂಡಿದೆ.
ಕೈಕೊಟ್ಟ ಮಳೆ:
ಪ್ರತಿ ಬಾರಿ ಮಾರ್ಚ್, ಏಪ್ರಿಲ್ ತಿಂಗಳ ಅಂತ್ಯಕ್ಕೆ ನಾಲ್ಕೈದು ಬಾರಿ ಹದ ಮಳೆಯಾಗುತ್ತಿತ್ತು. ಬಿಸಿಲು ಸಹ ಅಷ್ಟೇನು ಕಾಣಿಸುತ್ತಿರಲಿಲ್ಲ. ಆದರೆ, ಈ ಬಾರಿ ಬಿಸಿಲು ಹೆಚ್ಚಾಗಿರುವುದರ ಜತೆಗೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಪರಿಣಾಮ ಮನೆಯಲ್ಲಿಯೇ ಜಾನು ವಾರುಗಳನ್ನು ಕಟ್ಟಿ ಮೇವು ಒದಗಿಸು ವಂತಹ ಅನಿವಾರ್ಯತೆ ಕೃಷಿಕರಿಗೆ ಎದುರಾಗಿದೆ.

ಹಸಿರು ಕಣ್ಣರೆ:
ಜಿಲ್ಲೆಯಲ್ಲಿ ಬಿಸಿಲ ಝಳ ದಿನೆ ದಿನೇ ಹೆಚ್ಚಾಗುತ್ತಿದ್ದು ಗೋಮಾಳ, ಬಯಲು ಪ್ರದೇಶ, ಗುಡ್ಡಗಾವಲಿನಲ್ಲಿ ಹಸಿರು ಹುಲ್ಲು ಒಣಗಿದ ಪರಿಣಾಮ ಜಾನುವಾರುಗಳಿಗೆ ಹಸಿರು ಮೇವಿನ ಸಮಸ್ಯೆ ಎದುರಾಗಿದೆ. ಪರಿಣಾಮ ಒಣ ಮೇವಿಗೂ ಡಿಮ್ಯಾಂಡ್ ಬಂದಿದ್ದು, ಹಾಲಿನ ಉತ್ಪತ್ತಿಯಲ್ಲಿ ಇಳಿಮುಖವಾಗಿದೆ.
ಆಪತ್ತು ತಂದ ಆಧುನಿಕ ಕೃಷಿ ಪದ್ಧತಿ:
ಆಧುನಿಕ ಕೃಷಿ ಪದ್ದತಿ ಪರಿಣಾಮ ಗ್ರಾಮೀಣ ಪ್ರದೇಶದಲ್ಲಿ ರೈತರು ತಮ್ಮ ಹೊಲಗಳಿಗೆ ಕಳೆನಾಶಕ ಸಿಂಪಡಿಸಿದ್ದರಿಂದ 3 ತಿಂಗಳು ಮೇವು ಹುಟ್ಟದೇ ಇರುವುದು, ಪದೇ ಪದೇ ಕಳೆನಾಶಕ ಬಳಸುತ್ತಿರುವುದು ಮೇವಿನ ಕೊರತೆಗೆ ಪ್ರಮುಖ ಕಾರಣವಾಗಿದೆ. ಜೊತೆಗೆ, ಹೊಲಗದ್ದೆಗಳನ್ನು ತೋಟಗಳನ್ನಾಗಿ ಮಾರ್ಪಡಿಸುತ್ತಿರುವುದು, ಗೋಮಾಳ, ಕೆರೆಗಳ ಒತ್ತುವರಿ, ಯಂತ್ರಗಳ ಬಳಕೆಯಿಂದ ಮೇವು ಉತ್ಪಾದನೆ ಕುಂಠಿತಗೊಂಡಿದ್ದು ರಾಗಿ ಹಾಗೂ ಭತ್ತದ ಹುಲ್ಲಿಗೆ ಬೇಡಿಕೆ ಹೆಚ್ಚಾಗಿದೆ.

ಜೋಳದ ಸಪ್ಪೆ ಬೆಲೆ ಮೂರು ಪಟ್ಟು ಹೆಚ್ಚು:
ಈ ಹಿಂದೆ ಕೇವಲ 2-3 ಸಾವಿರ ರೂಪಾಯಿಗಳಿಗೆ ಒಂದು ಟ್ರ್ಯಾಕ್ಟರ್ ಮಾರಾಟವಾಗುತ್ತಿದ್ದ ಜೋಳದ ಸಪ್ಪೆಯು ಈಗ ಮೂರು ಪಟ್ಟು ಹೆಚ್ಚಿಗೆ ಆಗಿದ್ದು ಒಂದು ಟ್ಯಾಕ್ಟರ್ ಜೋಳದ ಸಪ್ಪೆಯು 8 ಸಾವಿರಕ್ಕಿಂತ ಹೆಚ್ಚು ಹಣ ನೀಡಬೇಕಿದೆ. ಅಷ್ಟು ಹಣ ಕೊಟ್ಟರೂ ಕೆಲವರಿಗೆ ಕಣಕಿ ಸಿಗುತ್ತಿದೆ. ಇನ್ನೂ ಕೆಲವರಿಗೆ ಸಿಗುತ್ತಿಲ್ಲ. ಯಾಕೆಂದರೆ ಜೋಳ ಬೆಳೆಯುವ ರೈತರ ಸಂಖ್ಯೆ ತೀರಾ ಕಡಿಮೆ ಆಗಿದೆ.
ಜನ -ಜಾನುವಾರು ತತ್ತರ:-
ಸಾಮಾನ್ಯವಾಗಿ ಕಳೆದ ವರ್ಷ ಮಾರ್ಚ ನಲ್ಲಿ 30 ರಿಂದ 31 ಡಿಗ್ರಿ ಸೆಲ್ಸಿಯಸ್ ಇಪ್ಪತಾಪಮಾನ, ಪ್ರಸ್ತುತ 36 ಡಿಗ್ರಿ ವರೆಗೆ ಏರಿಕೆ ಕಂಡಿದೆ. ಇದರಿಂದ ಎಮ್ಮೆ, ಕುರಿ, ಮೇಕೆ, ದನ-ಕರುಗಳ ಬಯಲಲ್ಲಿ ಮೇಯಿಸಲು ಹೋಗುವ ಸಾಕಾಣೆ ರೈತರು -ಜಾನುವಾರುಗಳು ಬಿಸಿಲಿನ ಬೇಗೆಗೆ ನಲುಗಿಹೋಗಿವೆ. ಗೋವನ್ನು ಮಾರುತ್ತಿರುವುದು, ಗೋಶಾಲೆಗೆ ಬಿಡುವುದು ಮೇವಿನ ಅಭಾವಕ್ಕೆ ಕನ್ನಡಿ ಹಿಡಿದಂತಿದೆ.
ಲೋಡ್ ರಾಗಿ ಹುಲ್ಲಿಗೆ 10 ರಿಂದ 12 ಸಾವಿರ ರೂ.ನಿಗದಿ. ಒಂದು ಟ್ರ್ಯಾಕ್ಟರ್ ರಾಗಿ ಹುಲ್ಲು ತರುವಷ್ಟರಲ್ಲಿ 10 ರಿಂದ ಮತ್ತು 12 ಸಾವಿರ ರೂ. ಖರ್ಚಾಗಲಿದೆ. ಹಸು, ಎಮ್ಮೆಗಳಿಗೆ ಹೆಚ್ಚಾಗಿ ರಾಗಿ ಮತ್ತು ಭತ್ತದ ಹುಲ್ಲು ನೀಡಲಾಗುತ್ತದೆ. ಭತ್ತದ ಹುಲ್ಲು ನೀದುವುದರಿಂದ ಹಾಲಿನ ಪ್ರಮಾಣ ಸ್ವಲ್ಪ ಹೆಚ್ಚಳವಾಗುವ ಸಾಧ್ಯತೆ ಇದೆ. ಹೀಗಾಗಿ ರೈತರು ಹೆಚ್ಚು ಭತ್ತದ ಹುಲ್ಲು ಸಂಗ್ರಹ ಮಾಡುತ್ತಿದ್ದಾರೆ ಎಂದು ದೆವೇಂದ್ರಪ್ಪ ಇಡ್ರಹಳ್ಳಿ ಹೇಳಿಕೊಂಡರು.
ಹಿಂದಿನ ವರ್ಷ ಬಿದ್ದ ಅಕಾಲಿಕ ಮಳೆಯಿಂದ ಮಳೆಯಾದಾರಿತ ಬೆಳೆಗಳಾದ ಜೋಳ, ರಾಗಿ ಸೇರಿದಂತೆ ಹಲವು ಬೆಳೆಗಳು ಮಳೆಗೆ ಆಹುತಿಯಾಗಿ ಮೇವಿನ ಅಭಾವ ಸೃಷ್ಟಿಯಾಗಿದೆ ಹಾಗಾಗಿ ಜಾನುವಾರುಗಳಿಗೆ ಪ್ರತಿ ನಿತ್ಯ ಮೇವು ಸಂಗ್ರಹಿಸುವುದು ತ್ರಾಸದಾಯಕವಾಗಿದೆ. ಒಣ ಹುಲ್ಲಿನ ಬೆಲೆ ಬೇಸಿಗೆಯಲ್ಲಿ ಗಗನಕ್ಕೇರಿದ್ದು ದನಕರುಗಳನ್ನು ಸಾಕುವುದು ಕಷ್ಟಕರವಾಗಿದೆ ಎಂದು ಉಪ್ಪಗುಟ್ಟಹಳ್ಳಿಯ ಯುವರೈತ ನಾಗರಾಜು ಹೇಳಿದರು.












Click it and Unblock the Notifications