ಬಾಂದವ್ಯ ಬೆಸುಗೆಯ ಹೊಸದ್ಯಾವರ ಹಬ್ಬ: ಮೊರಸು ಒಕ್ಕಲಿಗರ ಸಾಂಪ್ರದಾಯಿಕ ಆಚರಣೆಯ ವಿವರ ಇಲ್ಲಿದೆ
ಚಿಕ್ಕಬಳ್ಳಾಪುರ, ನವೆಂಬರ್ 19: ಮೊರಸು ಒಕ್ಕಲಿಗರು ಸರಿ ಸುಮಾರು ಏಳು ನೂರು ವರ್ಷಗಳಿಗೂ ಹಿಂದಿನಿಂದ ಆಚರಿಸಿಕೊಂಡು ಬರುತ್ತಿರುವ ಸ್ತ್ರೀಪ್ರಾಧಾನ್ಯತೆಯ ವಿಶಿಷ್ಟವಾದ 'ಹೊಸದ್ಯಾವರ'. ಈ ಹಬ್ಬದ ಆಚರಣೆಯನ್ನು ರಾಜ್ಯದ ಹಲವು ಜಿಲ್ಲೆಗಳು ಸೇರಿದಂತೆ ತಾಲೂಕಿನ ಮೊರಸು ಒಕ್ಕಲಿಗರು ತಮ್ಮ ಕುಲದೇವತೆಯಾದ ಕೆಂಪಾಂಬೆ(ದೊಡ್ಡಾಂಬೆ)ಯನ್ನು ವರ್ಷಕ್ಕೊಮ್ಮೆ ಆರಾಧಿಸುವ ಆಚರಣೆಯೇ ಹೊಸದ್ಯಾವರ. ಇದನ್ನು ದೊಡ್ಡಮ್ಮ(ಪೆದ್ದಮ್ಮ) ಆರಾಧನೆ ಅಥವಾ ಕೊತ್ತದ್ಯಾವರ ಎಂದು ಕೂಡ ಕರೆಯುವರು.
ದೀಪಾವಳಿ ಹಬ್ಬದ ನಂತರ ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ತಾಲೂಕಿನಲ್ಲಿ ಸಂಪ್ರದಾಯಬದ್ಧವಾಗಿ ವಿಶಿಷ್ಟ ರೀತಿಯಲ್ಲಿ ಆಚರಿಸುವ ಹೊಸ ದ್ಯಾವರ ಹಬ್ಬ ಭಾನುವಾರ ಗುಡಿಬಂಡೆ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಸಂಭ್ರಮ ಸಡಗರದಿಂದ ಹೆಣ್ಣು ಮಕ್ಕಳೆಲ್ಲ ಒಂದೆಡೆ ಸೇರಿ ಹಬ್ಬದ ಆಚರಣೆಯ ಮೂಲಕ ಬಾಂಧವ್ಯದ ಬೆಸುಗೆ ಮೂಡಿಸಿತು.

ದೀಪಾವಳಿ ನಂತರ ಮೊದಲ ಅಥವಾ ಎರಡನೇ ಭಾನುವಾರದಲ್ಲಿ ಹೊಸ ದ್ಯಾವರ ಹಬ್ಬ ಆಚರಿಸಲಾಗುತ್ತಿದೆ. ಈ ಹಬ್ಬದಲ್ಲಿ ಪಾಲ್ಗೊಳ್ಳಲೆಂದೇ ಮಹಿಳೆಯರು ಒಂದು ದಿನದ ಮುಂಚೆಯೇ ಸಕಲ ಸಿದ್ಧತೆ ಮಾಡಿಕೊಂಡಿರುತ್ತಾರೆ. ಈ ಎಲ್ಲ ವಿಶಿಷ್ಟ ಆಚರಣೆ ಹಿಂದೆ ಒಂದು ಆಸಕ್ತಿಮಯ ಕತೆಯೂ ಇದೆ.
ವಿಶೇಷವಾಗಿ ಮೊರಸು ಒಕ್ಕಲಿಗ ಮಹಿಳೆಯರು ಆಚರಿಸುವ ಹೊಸದ್ಯಾವರ ಹಬ್ಬದಲ್ಲಿ ಭಾಗವಹಿಸಿದ ಮಹಿಳೆಯರೆಲ್ಲ ಬಿಳಿಯ ಬಣ್ಣದ ಕೆಲವೆಡೆ, ವಿವಿಧ ಬಣ್ಣದ ಹೊಸ ಸೀರೆಯನ್ನು ತೊಟ್ಟು ಬೆರಳಿಗೆ ಬೆಳ್ಳಿಯ ಉಂಗುರ ಹಾಕಿಕೊಂಡಿದ್ದರು. ತಲೆಯ ಮೇಲೆ ಮಡಿಕೆ ಮತ್ತು ತಂಬಿಟ್ಟಿನ ದೀಪ ಹೊರುವ ಮೂಲಕ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.
100 ವರ್ಷದ ಹಿರಿಯ ಅಜ್ಜಿಯಿಂದ ಮೊದಲುಗೊಂಡು, ಕುಟುಂಬಕ್ಕೆ ಹೊಸದಾಗಿ ಸೇರ್ಪಡೆಯಾದ ನವ ವಿವಾಹಿತೆವರೆಗೆ ಎಲ್ಲರೂ ಪಾಲ್ಗೊಳ್ಳಲು ಅವಕಾಶವಿರುವ ಈ ಹಬ್ಬದಲ್ಲಿ ಹಲವಾರು ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಪೂರ್ವಜರ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಲ್ಲಿ ಅಲ್ಪಸ್ವಲ್ಪವೂ ಬದಲಾವಣೆಗಳು ಆಗಬಾರದು. ಏನಾದರೂ ಸ್ವಲ್ಪ ಎಡವಟ್ಟು ಘಟಿಸಿದರೂ ಅದನ್ನು ಅಪಶಕುನವೆಂದೇ ಭಾವಿಸಲಾಗುತ್ತದೆ.
ಈ ಕಾರಣದಿಂದಲೇ ಈ ಹಬ್ಬದ ಆಚರಣೆಯಲ್ಲಿ ಪಾಲ್ಗೊಳ್ಳುವ ಮಹಿಳೆಯರು ತಮ್ಮ ಕುಟುಂಬದ ಹಿರಿಯರಿಂದ ಮೊದಲೇ ತರಬೇತಿ ಪಡೆಯುತ್ತಾರೆ. ವರ್ಷಕ್ಕೊಮ್ಮೆ ಮಾತ್ರ ನಡೆಯುವ ಈ ರೀತಿಯ ವಿಶಿಷ್ಟ ಪದ್ಧತಿಯಲ್ಲಿ ಭಾಗಿದಾರರಾಗಲು ಮನೆತನದ ಕುಟುಂಬ ಸದಸ್ಯರೆಲ್ಲ ಒಂದೆಡೆ ಸೇರುತ್ತಾರೆ.
ಏನಿದು ಹೊಸ ದ್ಯಾವರ ಹಬ್ಬ..?
ಮದುವೆಯಾದ ಹೆಣ್ಣು ಮಕ್ಕಳು ಕುಟುಂಬಸ್ಥರ ಸಮೇತ ತವರು ಮನೆಗೆ ಬಂದು ಪ್ರಕೃತಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿ ಹಿರಿಯರನ್ನು ನೆನೆಯುವುದು ಹೊಸ ದ್ಯಾವರ ಹಬ್ಬ ಆಚರಣೆಯ ಮುಖ್ಯ ಉದ್ದೇಶ. ಈ ವೇಳೆ ಹೆಣ್ಣು ಮಕ್ಕಳು ತಲೆಯೆ ಮೇಲೆ ದೀಪ ಹೊತ್ತುಕೊಂಡು ಅವುಗಳು ಆರದಂತೆ ನಾಲ್ಕು ದಿಕ್ಕುಗಳಿಗೆ ನೀರನ್ನು ಚೆಲ್ಲುತ್ತಾ ಪೂಜೆ ಸಲ್ಲಿಸಿ ಸೂರ್ಯನಿಗೆ ನಮಸ್ಕರಿಸಿ ಹಬ್ಬ ಆಚರಿಸುತ್ತಾರೆ.
ಆಚರಣೆಗೆ ಹೊಸ ಬಟ್ಟೆಗಳು, ಮಡಿಕೆಗಳು, ಸೇರಿದಂತೆ ಎಲ್ಲಾ ವಸ್ತುಗಳನ್ನು ಹೊಸದಾಗಿಯೇ ಖರೀದಿಸಿರುತ್ತಾರೆ. ಹೆಣ್ಣು ಮಕ್ಕಳು ಪೂಜೆಗೆ ಕುಂಬಳಕಾಯಿ, ರಾಗಿ ತೆನೆ, ನವಣೆ, ಸಜ್ಜೆ, ನುಗ್ಗೆ ಸೊಪ್ಪು, ಗೀರಿಕಾಯಿ, ಕಾಸಿ, ಕಬ್ಬು, ಸೇವಂತಿಗೆ ಹೂವು ಹಾಗೂ ಬಾಳೆ ಎಲೆಯನ್ನು ಪೂಜೆಗೆ ಇಡುತ್ತಾರೆ.
ಮಹಿಳೆಯರು ಶುಕ್ರವಾರದಿಂದಲೇ ಉಪವಾಸವಿದ್ದು ಭಾನುವಾರ ಮಧ್ಯಾಹ್ನದ ವೇಳೆಗೆ ಹೊಸ ದ್ಯಾವರಗಳನ್ನು ಶಾಸ್ತೋಕ್ತವಾಗಿ ಮುಗಿಸಿದ ನಂತರ ಕುಟುಂಬಸ್ಥರೆಲ್ಲರೂ ಸೇರಿ ಊಟ ಸವಿಯುತ್ತಾರೆ. ಇದಕ್ಕಾಗಿ ವಿಶೇಷ ಖಾದ್ಯಗಳನ್ನು ಸಹ ಸಿದ್ಧಪಡಿಸಲಾಗುತ್ತದೆ.
ಅತ್ತೆ ಮನೆಯಲ್ಲಿ ದೀಪಾವಳಿ ಮುಗಿಸಿಕೊಂಡು ತವರು ಮನೆಗೆ ಬಂದು 'ಹೊಸ ದ್ಯಾವರು' ಆಚರಿಸುವ ಹೆಣ್ಣು ಮಕ್ಕಳಿಗೆ ತಾಯಿ ಮನೆಯವರು ಹೊಸ ಹೊಸ ಬಟ್ಟೆ ನೀಡಿ ಬಾಗಿನ ಅರ್ಪಿಸುತ್ತಾರೆ.
ಹಿರಿಯರ ಸ್ಮರಣೆ
ಹರಿದು ಹಂಚಿ ಹೋಗಿರುವ ದೂರದ ಸಂಬಂಧಗಳನ್ನು ಒಂದು ಕಡೆಗೆ ಸೇರಿಸಿ ವರ್ಷಕೊಮ್ಮೆ ಹಿರಿಯರನ್ನು ನೆನೆಯುವುದು ಹೊಸ ದ್ಯಾವರ ಹಬ್ಬದ ಉದ್ದೇಶವಾಗಿದೆ. ಈ ಸಂಪ್ರದಾಯ ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ವಿಶೇಷವಾಗಿ ಹೊಸ ದ್ಯಾವರ ಹಬ್ಬ ಮನೆಯ ಹೆಣ್ಣು ಮಕ್ಕಳಲ್ಲಿ ಬಾಂಧವ್ಯದ ಬೇಸುಗೆಯನ್ನು ಮೂಡಿಸುತ್ತದೆ ಎಂದು ಹಿರಿಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಅವಿಭಕ್ತ ಕುಟುಂಬಗಳೆ ಕಣ್ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಹೊಸದ್ಯಾವರ ಆಚರಣೆ ವೇಳೆ ಕುಟುಂಬದ ಎಲ್ಲರೂ ಒಂದೆಡೆ ಸೇರುವುದೆ ವಿಶೇಷ. ಆ ಕ್ಷಣ ಪೂರ್ವಿಕರ ಕಾಲದಲ್ಲಿದ್ದ ಅವಿಭಕ್ತ ಕುಟುಂಬ ಕಣ್ಮುಂದೆ ಬರಲಿದೆ. ಕುಟುಂಬದ ಸದಸ್ಯರು ಒಂದೆಡೆ ಸೇರಿ ಊಟವನ್ನು ತಯಾರಿಸಲಾಗುತ್ತದೆ. ಇದು ವೈಯಕ್ತಿಕವಾಗಿ ಸಮುದಾಯದ ಆಯಾ ಕುಟುಂಬಗಳು ಆಚರಿಸುವುದಾದರೂ, ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ಮೂಡಿಸುತ್ತದೆ.
ಹೊಸದ್ಯಾವರ ಹಬ್ಬ ಎಂಬುದು ಇತ್ತೀಚಿನ ವರ್ಷದ್ದಲ್ಲ, ಪೂರ್ವಜರ ಕಾಲದಿಂದಲೂ ಆಚರಣೆಯಲ್ಲಿರುವ ಪದ್ಧತಿ. ಇದರ ಆಚರಣೆಗೆಂದೇ ಹೊಚ್ಚಹೊಸ ಮಡಕೆ ತಂದು ಅದರೊಳಗೆ ತುಪ್ಪದ ದೀಪ ಇಟ್ಟು ಅದು ಆರದಂತೆ ಎಚ್ಚರವಹಿಸಿ ಪೂಜೆ ಮಾಡುತ್ತಾರೆ. ಒಂದು ಕುಟುಂಬದ ಮಹಿಳೆಯರು ಹೊರ ಆವರಣದಲ್ಲಿನ ಬಂಡೆಯ ಮೇಲೆ ಹಬ್ಬವನ್ನು ಆಚರಿಸುವುದು ರೂಢಿ. ಒಬ್ಬೊಬ್ಬರಾಗಿ ತಲೆಯ ಮೇಲೆ ಮಡಕೆ ಹೊತ್ತುಕೊಂಡು, ಕೈಯಲ್ಲಿ ವೀಳ್ಯದ ಎಲೆ ಹಿಡಿದು ಅದರ ಮೇಲೆ ಸ್ವಲ್ಪ ಸ್ವಲ್ಪ ನೀರು ಸುರಿದು ಶ್ರದ್ಧಾ ಭಕ್ತಿಯಿಂದ ಹಬ್ಬವನ್ನು ಆಚರಿಸುತ್ತಾರೆ.
ಒಕ್ಕಲಿಗ ಸಮುದಾದಯ ಕುಟುಂಬಗಳಲ್ಲಿ ಹೆಣ್ಣು ಮತ್ತು ಗಂಡಿನ ಮದುವೆಯ ಸಂದರ್ಭದಲ್ಲಿ ಹೊಸ ದ್ಯಾವರ, ಬಂಡಿದ್ಯಾವರ ಆಚರಣೆಯನ್ನು ಪರಿಗಣಿಸಲಾಗುತ್ತದೆ. ಹೊಸದ್ಯಾವರ, ಬಂಡಿದ್ಯಾವರ ಆಚರಣೆ ಇರುವ ಕುಟುಂಬದವರಿಗೆ ಮಾತ್ರ ತಮ್ಮ ಮಕ್ಕಳನ್ನು ಕೊಟ್ಟು ವಿವಾಹ ಮಾಡಲಾಗುತ್ತದೆ. ಇಲ್ಲವಾದರೆ ನಿರಾಕರಿಸಲಾಗುತ್ತದೆ. ಸಂಪ್ರದಾಯ ನೋಡಿ ವಿವಾಹ ಮಾಡುವುದು ಇಂದಿಗೂ ರೂಢಿಯಲ್ಲಿರುವುದನ್ನು ಕಾಣಬಹುದಾಗಿದೆ.












Click it and Unblock the Notifications