ದಿನೇಶ್ ಗುಂಡೂರಾವ್ ಅಧ್ಯಕ್ಷರಾದಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ಸತ್ತು ಹೋಯ್ತು: ಕೆ. ಸುಧಾಕರ್
ಚಿಕ್ಕಬಳ್ಳಾಪುರ, ಅಕ್ಟೋಬರ್ 19: ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕವೇ ರಾಜ್ಯದಲ್ಲಿ ಕಾಂಗ್ರೆಸ್ ಸತ್ತುಹೋಯಿತು ಎಂದು ಚಿಕ್ಕಬಳ್ಳಾಪುರ ಅನರ್ಹ ಶಾಸಕ ಕೆ. ಸುಧಾಕರ್ ವಾಗ್ದಾಳಿ ನಡೆಸಿದರು.
ಚಿಕ್ಕಬಳ್ಳಾಪುರದ ಮಂಡಿಕಲ್ ಗ್ರಾಮದಲ್ಲಿ ನೂತನ ಐಟಿಐ ಕಾಲೇಜಿನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸತ್ತು ಹೋಗಿದೆ. ಕೇಂದ್ರದಿಂದ ನೆರೆ ಪರಿಹಾರ ತರುವಲ್ಲಿ ವಿಫಲವಾಗಿದೆ ಎಂಬ ದಿನೇಶ್ ಗುಂಡೂರಾವ್ ಅವರ ಆರೋಪದ ಕುರಿತು ಕೆ. ಸುಧಾಕರ್ ಪ್ರತಿಕ್ರಿಯೆ ನೀಡಿದರು. ದಿನೇಶ್ ಗುಂಡೂರಾವ್ ಮೊದಲು ಕೆಪಿಸಿಸಿ ಅಧ್ಯಕ್ಷರ ಕೆಲಸ ನಿಭಾಯಿಸುವುದನ್ನು ಕಲಿತುಕೊಳ್ಳಲಿ. ಅವರು ತಮ್ಮ ಯೋಗ್ಯತೆ ಅರಿತುಕೊಳ್ಳಲಿ. ಅವರಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ ಅಧೋಗತಿಗೆ ಇಳಿಯಿತು ಎಂದು ಟೀಕಿಸಿದರು.

ಲೋಕಸಭೆ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿ ಕೇವಲ ಒಂದು ಸ್ಥಾನ ಬಂದಾಗಲೇ ದಿನೇಶ್ ಗುಂಡೂರಾವ್ ತಮ್ಮ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ಯಡಿಯೂರಪ್ಪ ಅವರ ಕುರಿತು ಮಾತನಾಡಲು ಅವರಿಗೆ ನೈತಿಕತೆ ಇಲ್ಲ. ಪ್ರವಾಹ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದಾರೆ. ಮಂತ್ರಿಮಂಡಲ ಜನಪರವಾಗಿ ಕೆಲಸ ಮಾಡುತ್ತಿದೆ. ಯಾವುದೇ ಸರ್ಕಾರವನ್ನು ಎರಡು ತಿಂಗಳಲ್ಲಿ ಮೌಲ್ಯಮಾಪನ ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ಸರ್ಕಾರದ ಬೆಂಬಲಕ್ಕೆ ನಿಂತರು.
ಐದು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್, ಕಳೆದ ವಿಧಾನಸಭೆ ಚುನಾವಣೆಯಲ್ಲಿ 129ರಿಂದ 79 ಸ್ಥಾನಕ್ಕೆ ಕುಸಿದಿದೆ. ಲೋಕಸಭೆಯ ಚುನಾವಣೆಯಲ್ಲಿ ಒಂದು ಸ್ಥಾನ ಗಳಿಸಿದೆ. ಇದನ್ನು ಮೌಲ್ಯಮಾಪನ ಮಾಡಬೇಕಲ್ಲವೇ? ಪದಗಳನ್ನು ಬಳಸಲು ಕನ್ನಡ ಭಾಷೆ ಬಂದರೆ ಸಾಕು. ಆದರೆ ಟೀಕೆ ಟಿಪ್ಪಣಿಗಳನ್ನು ಮಾಡುವಾಗ ಅಂಕಿ ಅಂಶಗಳ ಆಧಾರ ಸಹಿತ ಮುಂದಿಡಬೇಕು ಎಂದರು.












Click it and Unblock the Notifications