ಚಿಕ್ಕಬಳ್ಳಾಪುರದಲ್ಲಿ ಬಿಸಿಲು ಮೋಡದಾಟ: ರೇಷ್ಮೆ ಬೆಳೆಗೆ ಮಾರಕವಾದ ಥಂಡಿ ವಾತಾವರಣ!
ಚಿಕ್ಕಬಳ್ಳಾಪುರ ಡಿಸೆಂಬರ್ 20: ಕಳೆದ ಎರಡು ವಾರಗಳಿಂದ ವಾತಾವರಣದಲ್ಲಿ ಏರು ಪೇರಾಗುತ್ತಿದೆ. ಕೆಲವೊಮ್ಮೆ ದಿನಪೂರ್ತಿ ಮೋಡ ಕವಿದ ವಾತಾವರಣ, ಆಗಾಗ ಅಪರೂಪಕ್ಕೆ ಕಾಣಿಸಿಕೊಂಡು ಹಾಗೆಯೇ ಮಾಯವಾಗುವ ಬಿಸಿಲು. ಮಧ್ಯಾಹ್ನದ ಸಮಯದಲ್ಲೂ ಬಿಸಿಲು ಬದಲಿಗೆ ಹೆಚ್ಚುತ್ತಿರುವ ಥಂಡಿ, ಸೂರ್ಯನ ದರ್ಶನವೇ ಇಲ್ಲದಂತ ಪರಿಸ್ಥಿತಿ ಯಿಂದಾಗಿ ಚಳಿಯ ಪ್ರಮಾಣ ಹೆಚ್ಚಳದಿಂದ ರೇಷ್ಮೆ ಬೆಳೆಗೆ ಮಾರಕವಾಗಿದೆ.
ಈ ರೀತಿಯ ವೈಪರೀತ್ಯ ವಾತಾವರಣದಿಂದ ರೇಷ್ಮೆ ಹುಳುಗಳಲ್ಲಿ ಹಾಲು ತೊಂಡೆ ರೋಗ ಹೆಚ್ಚುತ್ತಿದೆ. ಸುಣ್ಣಕಟ್ಟು ರೋಗ ವ್ಯಾಪಿಸುತ್ತಿದೆ. ಜೀವನ ಚಕ್ರದ ಅವಧಿ ಮುಗಿದಾದ ಮೇಲೆ ಮೂರಲ್ಕು ದಿನಕ್ಕೆ ಹಣ್ಣಾಗುತ್ತಿರುವ ರೇಷ್ಮೆ ಹುಳು. ಇದರಿಂದ ರೇಷ್ಮೆ ಹುಳು ಸಾಕಣೆಗೆ ಬೀಳುವ ವೆಚ್ಚ ದುಪ್ಪಟ್ಟಾಗುತ್ತಿದೆ.

ಚಳಿಯಿಂದ ಹೆಚ್ಚಿದ ಥಂಡಿ ವಾತಾವರಣದಲ್ಲಿ ರೇಷ್ಮೆಹುಳು ಹಣ್ಣಾಗುವುದು ಮೂರಾಲ್ಕು ಒಮ್ಮೊಮ್ಮೆ ನಾಲೈದು ದಿನಗಳಷ್ಟು ತಡವಾಗುತ್ತಿದೆ. ತಡವಾದಷ್ಟೂ ಹೆಚ್ಚಿನ ಪ್ರಮಾಣದಲ್ಲಿ ಹಿಪ್ಪುನೇರಳೆ ಸೊಪ್ಪನ್ನು ಒದಗಿಸಬೇಕಾಗುತ್ತದೆ. ಅಷ್ಟೇ ಅಲ್ಲವಾತಾವರಣದಲ್ಲಿನ ಥಂಡಿಯಿಂದ ರೇಷ್ಮೆಹುಳು ಸರಿಯಾಗಿ ರೇಷ್ಮೆಗೂಡನ್ನು ಕಟ್ಟುವುದಿಲ್ಲ.
ಕಳಪೆ ಗುಣಮಟ್ಟದ ರೇಷ್ಮೆಗೂಡಿಗೆ ಸೂಕ್ತ ಬೆಲೆಯೂ ಸಿಗದು. ಒಂದು ಕಡೆ ಸೂಕ್ತ ಬೆಲೆ ಸಿಗದು ಇನ್ನೊಂದು ಕಡೆ ದುಪ್ಪಟ್ಟು ಬಂಡವಾಳ ಹಾಕಬೇಕಾದ ಸ್ಥಿತಿ ರೈತನದ್ದು. ಇದಿಷ್ಟೆ ಅಲ್ಲ ಇದೇ ರೀತಿಯ ಥಂಡಿ ವಾತಾವರಣ ಇನ್ನೊಂದಷ್ಟು ದಿನವೂ ಮುಂದುವರಿದರೆ ಹಿಂಗಾರು ಮಳೆಗಾಲದಲ್ಲಿ ಬಿತ್ತನೆ ಮಾಡಿದ ರಾಗಿ ಕಾಳು ಕಟಾವು ಮಾಡುವ ಹಂತಕ್ಕೆ ಬಂದಿದ್ದು ಅದು ಕೂಡ ಹಾಳಾಗುವ ಆತಂಕ ರೈತರಲ್ಲಿ ಮನೆ ಮಾಡಿದೆ.
ಹೆಚ್ಚುವರಿ ಹಿಪ್ಪುನೇರಳೆ ಬೇಕು:--
ವಾತಾವರಣದಲ್ಲಿ ಚಳಿ ಹಾಗೂ ಥಂಡಿ ವಾತಾವರಣ ಹೆಚ್ಚುವುದರಿಂದ ರೇಷ್ಮೆ ಹುಳುಗಳು ಸಹಜವಾಗಿಯೇ ಹಣ್ಣಾಗುವುದು ತಡವಾಗುತ್ತದೆ. ಸಾಮಾನ್ಯವಾಗಿ 28 ದಿನಗಳಲ್ಲಿ ಹಣ್ಣಾಗುವ ರೇಷ್ಮೆಹುಳುಗಳು ಈ ವಾತಾವರಣದಿಂದ ನಾಲೈದು ದಿನಗಳು ತಡವಾಗಿ ಹಣ್ಣಾಗುತ್ತವೆ. ಹಣ್ಣಾಗುವುದಕ್ಕೂ ಮೊದಲು ಪ್ರತಿದಿನ 100 ಮೊಟ್ಟೆಯಷ್ಟು ಹುಳುಗಳಿಗೆ ಐದಾರು ಮೂಟೆಗಳಷ್ಟು ಹಿಪ್ಪುನೇರಳೆ ಸೊಪ್ಪನ್ನು ನೀಡಬೇಕಾಗುತ್ತದೆ. ನಾಲೈದು ದಿನಗಳು ಹಣ್ಣಾಗುವುದು ತಡವಾಗುವುದರಿಂದ 20 ಮೂಟ್ಟೆಯಷ್ಟು ಹೆಚ್ಚುವರಿ ಹಿಪ್ಪುನೇರಳೆ ಸೊಪ್ಪು ಬೇಕಾಗುತ್ತದೆ. ಮೂಟೆ ಹಿಪ್ಪುನೇರಳೆ ಸೊಪ್ಪಿಗೆ 400 ರೂ. ಇದ್ದು 20 ಮೂಟೆಗೆ 8 ಸಾವಿರ ರೂ.ಹೆಚ್ಚು ಬಂಡವಾಳ ರೈತನಿಗೆ ಬೀಳುತ್ತದೆ.
ಕೈಗೆ ಬಂದಿದ್ದು ಬಾಯಿಗೆ ಬರದ ಸ್ಥಿತಿ:-
ಇನ್ನು ಈ ವರ್ಷ ಕಾಲ ಕಾಲಕ್ಕೆ ಸರಿಯಾಗಿ ಮಳೆ ಬೀಳದ ಕಾರಣ ಸಕಾಲಕ್ಕೆ ಸಾಕಷ್ಟು ಮಂದಿ ರಾಗಿ ಬಿತ್ತನೆ ಮಾಡಲಾಗಿಲ್ಲ, ಬಹುತೇಕ ಮಂದಿ ಬಹಳಷ್ಟು ತಡವಾಗಿ ಬಿತ್ತನೆ ಮಾಡಿದ್ದು, ಅದು ಇದೀಗ ಕಟಾವಿಗೆ ಬಂದಿದೆ. ಮೋಡ ಮುಸುಕಿದ ಜಡಿ ಮಳೆ ಏನಾದರೂ ಹಿಡಿದುಕೊಂಡರೆ ರಾಗಿ ತೆನೆ ಮೊಳಕೆಯೊಡೆಯುತ್ತದೆ. ಅದೇನೋ ಹೇಳ್ತಾರಲ್ಲಾ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತ ಸ್ಥಿತಿ ರೈತನದ್ದಾಗಲಿದೆ.
ಹೂ ಬೆಳೆಗಾರರ ಸ್ಥಿತಿ ಮತ್ತಷ್ಟು ಶೋಚನೀಯ:-
ಇನ್ನು ಹೂ ಬೆಳೆಯುವ ರೈತರ ಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ, ಜಡಿ ಮಳೆ ಬಿದ್ದರೆ ಹೂವು ಬೇಗನೆ ಹಳಸಿಕೊಂಡು ಬಿಡುತ್ತದೆ. ಸೇವಂತಿ ಗುಲಾಬಿ ಚಂಡು ಹೂವು ಸೇರಿದಂತೆ ಈ ಭಾಗದಲ್ಲಿ ಬೆಳೆಯುವ ಬಹುತೇಕ ತಳಿಯ ಹೂಗಳಿಗೆ ಬಿಸಿಲು ಅಗತ್ಯ. ಆದರೆ, ಬಿಸಿಲಿನ ಕೊರತೆ ಹೆಚ್ಚಿಚಳಿ ಥಂಡಿಯಿಂದಾಗಿ ಆಗೊಮ್ಮೆ ಈಗೊಮ್ಮೆ ಉದುರುವ ಹನಿಗಳಿಂದ ಹೂಗಳಿಗೂ ಹಾನಿಯಾಗುತ್ತಿದೆ.












Click it and Unblock the Notifications