ಶಿಕ್ಷಕರು, ಪೋಷಕರಿಂದಲೇ ಅಭಿವೃದ್ಧಿ ಹೊಂದಿದ ಸರ್ಕಾರಿ ಶಾಲೆ: ಆಟದ ಮೈದಾನಕ್ಕಾಗಿ ಸರ್ಕಾರಕ್ಕೆ ಮನವಿ
ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ ಹೋಬಳಿ ಅಡ್ಡಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ನಲ್ಲಪ್ಪನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೊಳಗೆ ಹೆಜ್ಜೆ ಇಟ್ಟರೆ ಮಲೆನಾಡಿನ ಅನುಭವವಾಗುತ್ತದೆ. ಈ ಸರ್ಕಾರಿ ಶಾಲೆಯ ಸಂಪೂರ್ಣ ವಿವರ ಇಲ್ಲಿದೆ.
ಚಿಕ್ಕಬಳ್ಳಾಪುರ, ಫೆಬ್ರವರಿ 25: ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಹಾಗೂ ಎಸ್.ಡಿ.ಎಂ.ಸಿ ಸಮಿತಿಯ ಬೆಂಬಲ ಹಾಗೂ ಅಚಲವಾದ ನಂಬಿಕೆಯೊಂದಿದ್ದರೆ ಕುಗ್ರಾಮದಲ್ಲಿದ್ದರೂ ಆ ಶಾಲೆಯನ್ನು ಹೇಗೆಲ್ಲಾ ಅಭಿವೃದ್ಧಿ ಗೊಳಿಸಬಹುದು ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಹೇಗೆಲ್ಲಾ ಪ್ರೋತ್ಸಾಹ ನೀಡಿ ಅವರಲ್ಲಿ ಸಾಧನೆಯ ಮಹಾದಾಸೆಯನ್ನು ಮೂಡಿಸಬಹುದು ಎಂಬುದಕ್ಕೆ ಬೆಟ್ಟಗುಡ್ಡಗಳಿಂದ ಆವೃತವಾಗಿರುವ ಹಳ್ಳಿಯೆ ಇದಕ್ಕೆ ಸಾಕ್ಷಿಯಾಗಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ ಹೋಬಳಿ ಅಡ್ಡಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ನಲ್ಲಪ್ಪನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೊಳಗೆ ಹೆಜ್ಜೆ ಇಟ್ಟರೆ ಮಲೆನಾಡಿನ ಅನುಭವವಾಗುತ್ತದೆ. ಸುತ್ತಲೂ ಫಸಲು ಬಿಟ್ಟ ಬಾಳೆಗಿಡಗಳು, ಹಚ್ಚಹಸಿರಿನಿಂದ ಕಂಗೊಳಿಸುವ ವಿವಿಧ ಬಗೆಯ ಗಿಡಗಳು ಮದ್ಯದಲ್ಲಿ ನೀರಿನ ಕಾರಂಜಿ ಹಾಗೂ ಕೆಳಿದ ಪ್ರಶ್ನೆಗಳಿಗೆ ವಿನಯದಿಂದ ಪಟಪಟನೆ ಉತ್ತರಿಸುವ ವಿದ್ಯಾರ್ಥಿಗಳು ಇವು ಈ ಶಾಲೆಯ ವಿಶೇಷತೆಯಾಗಿದೆ.

ಶಾಲೆಯ ಶಿಕ್ಷಕರಾದ ಅಕ್ಕಲಪ್ಪ ಮತ್ತು ಲಕ್ಷ್ಮೀನಾರಾಯಣ ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷ ಗಂಗಾಧರಪ್ಪ ನವರ ವಿಶೇಷ ಕಾಳಜಿ ಹಾಗೂ ಪ್ರೋತ್ಸಾಹದಿಂದ ಶಾಲೆಯಲ್ಲಿ 1 ನೇ ತರಗತಿಯಿಂದ 7 ನೇ ತರಗತಿಯ ತನಕ 40 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಗೆ ಬೇಕಾದ ಕಲಿಕೋಪಕರಣಗಳನ್ನು ಒದಗಿಸಲಾಗಿದೆ.
ಶಿಕ್ಷಕರಾಗಿ ಪ್ರಮಾಣಿಕವಾಗಿ ಸೇವೆ ಸಲ್ಲಿಸಿದ್ದರೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆಯಬಹುದು. ಆದರೆ, ಮುಂಬರುವ ಮಕ್ಕಳಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಶಾಲಾ ಪರಿಸರವನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಬೇಕಾದ ಪರಿಸರವನ್ನು ಕಲ್ಪಿಸುವ ಮೂಲಕ ಶಾಲೆಯು ಗಮನ ಸೆಳೆಯುತ್ತಿದೆ.

ಸೂಕ್ತ ಶೌಚಾಲಯ ವ್ಯವಸ್ಥೆ
ವಿದ್ಯಾರ್ಥಿಗಳಿಗೆ ಅವಶ್ಯಕತೆಗೆ ಅನುಗುಣವಾಗಿ ಶೌಚಾಲಯಗಳಿದ್ದು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯಗಳ ವ್ಯವಸ್ಥೆಯಿದೆ. ಸಮರ್ಪಕ ನೀರಿನ ವ್ಯವಸ್ಥೆ ಇದ್ದು ಶಿಕ್ಷಕರೆ ಪೈಪ್‍ಲೈನ್ ಹಾಕಿ ಸಿಂಟೆಕ್ಸ್ ಅಳವಡಿಸಿದ್ದಾರೆ. ಬಿಸಿಯೂಟ ಮಾಡಿದ ವಿದ್ಯಾರ್ಥಿಗಳಿಗೆ ಕೈ ತೊಳೆಯಲು ನಳದ ವ್ಯವಸ್ಥೆ ಸಹ ಕಲ್ಪಿಸಲಾಗಿದೆ.
ಶಾಲೆಯ ಆವರಣ ಗೋಡೆಗೆ ಕಿಂಚಿತ್ತು ಜಾಗ ಬಿಡದ ಹಾಗೆ ಕಲಿಕೆಗೆ ಯೋಗ್ಯವಾದ ಮಗ್ಗಿ, ಗಣಿತ ಸೂತ್ರ, ದೇಶ, ರಾಜ್ಯಗಳ ಮಾಹಿತಿ, ನದಿಗಳ ಮಾಹಿತಿ, ಭಾರತೀಯ ಭಾಷೆಗಳ ಪರಿಚಯ, ಇಂಗ್ಲೀಷ್ ವ್ಯಾಕರಣ, ಹೀಗೆ 'ನಲಿ-ಕಲಿ' ಭೋದನಾ ಪದ್ದತಿಗೆ ಪೂರಕವಾದ ಎಲ್ಲ ಮಾಹಿತಿಗಳನ್ನು ಬರೆಯಲಾಗಿದೆ.
ಶಾಲಾ ಕೊಠಡಿಗಳ ಒಳಾಂಗಣದಲ್ಲಿ ಸರಳ ಪದ, ವಾರ, ತಿಂಗಳು, ಸಾರಿಗೆ ವ್ಯವಸ್ಥೆಯ ಪರಿಚಯ, ನೀರಿನ ಮೂಲಗಳು ಕಾಗುಣಿತಾಕ್ಷರ, ವಿವಿಧ ಪ್ರಾಣಿಗಳ ಮುಖವಾಡಗಳು, ವಾಚಕಗಳ ಬರವಣಿಗೆ ಸೇರಿ 'ನಲಿ-ಕಲಿ' ಭೋದನಾ ಪದ್ದತಿಗೆ ಪೂರಕವಾದ ಅಂಶಗಳು ನೋಡುಗರನ್ನು ಆಕರ್ಷಿಸುತ್ತಿವೆ. ಕಿಟಕಿ, ಕಂಬ, ಬಾಗಿಲು, ಗೋಡೆ, ನೆಲದ ಮೇಲೆಯೂ 'ನಲಿ-ಕಲಿ'ಯ ಸಂಗತಿಗಳನ್ನು ಬರೆದಿರುವುದರಿಂದ ಶಾಲೆಯಲ್ಲಿ ಪ್ರವೇಶಿಸಿದರೆ ಸಾಕು ಜ್ಞಾನ ದೇಗುಲ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಶಾಲೆ ಸುತ್ತ ಹಸಿರು ವಾತವರಣ
ಶಾಲಾ ಆವರಣದಲ್ಲಿ ಗಿಡಗಳನ್ನು ನೆಟ್ಟು ಸುತ್ತಲೂ ನೀರಿನ ಕಾರಂಜಿಗಳನ್ನು ನಿರ್ಮಿಸಲಾಗಿದೆ, ಈ ಕಟ್ಟೆಯು ಮಕ್ಕಳಿಗೆ ಪ್ರತೀದಿನ ಕಾಮನಬಿಲ್ಲಿನ ವೀಕ್ಷಣೆಗೆ ಸಹಕಾರಿಯಾಗಿದೆ. ಶಾಲಾ ಕಾಂಪೌಂಡಿನಲ್ಲಿ ಬಾಳೆಗಿಡಗಳು, ಸೀತಾಫಲ, ನುಗ್ಗೆ ಗಿಡ ಸೇರಿದಂತೆ ವಿವಿಧ ಗಿಡ ಮರಗಳು, ಹೂವಿನ ಗಿಡಗಳು, ಅಶೋಕ ವೃಕ್ಷಗಳು ಬೆಳೆದು ಹಸಿರು ಸೂಸುತ್ತಿದ್ದು, ವಿವಿಧ ಗಿಡಗಳ ಪೋಷಣೆಯ ಜವಾಬ್ದಾರಿಯನ್ನು ವಿದ್ಯಾರ್ಥಿಗಳು ವಹಿಸಿಕೊಂಡಿದ್ದಾರೆ.
ಶಾಲೆಯ ಬಾಹ್ಯ ಅಂದವನ್ನು ಹೆಚ್ಚಿಸಿರುವ ಶಿಕ್ಷಕರು ಮಕ್ಕಳ ಆಂತರಿಕ ಪ್ರೌಢಿಮೆಯನ್ನು ಸಹ ಹೆಚ್ಚಿಸುವಲ್ಲಿ ಶ್ರಮಿಸುತ್ತಿದ್ದಾರೆ. ಇಂಗ್ಲೀಷ್ ಕಂಠ ಪಾಠ ಸ್ಪರ್ಧೆಯಲ್ಲಿ ತಾಲೂಕಿನ ವಿವಿಧ ಖಾಸಗೀ ಶಾಲೆಗಳನ್ನು ಮಣಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುವಂತೆ ಶ್ರಮಿಸಿದ್ದಾರೆ. ರಸಪ್ರಶ್ನೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಹೊಂದಿದ ಸರಕಾರಿ ಶಾಲೆ ಎಂಬ ಹಿರಿಮೆಗೆ ಪಾತ್ರವಾಗುವ ಮೂಲಕ ಬೆಟ್ಟ ಗುಡ್ಡಗಳ ಸಾಲಿನ ಶಾಲೆಯು ಜಿಲ್ಲಾ ಮಟ್ಟದಲ್ಲಿ ಹೆಸರು ಮಾಡಿದೆ.
ಶೈಕ್ಷಣಿಕವಾಗಿ ಸಾಧನೆ ಮಾಡಿರುವ ವಿದ್ಯಾರ್ಥಿಗಳು ದೈಹಿಕವಾಗಿ ಸಾಧನೆ ಮಾಡಲು ಬೇಕಾದ ಆಟದ ಮೈದಾನದ ಕೊರತೆ ಇದ್ದು ಕನಿಷ್ಠ 10 ಅಡಿ ಜಾಗವೂ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಯಾವುದೇ ಕ್ರೀಡೆಗಳಲ್ಲಿ ಸಾಧನೆ ಮಾಡಲಾಗುತ್ತಿಲ್ಲ ಆದ್ದರಿಂದ ತಮಗೆ ಆಟದ ಮೈದಾನಕ್ಕೆ ಸರ್ಕಾರಿ ಜಮೀನು ಗುರುತಿಸಿಕೊಡುವಂತೆ ಶಾಲಾ ಮಕ್ಕಳು ಸರಕಾರಿ ಇಲಾಖೆಗಳ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕ ಡಾ.ಕೆ.ಸುಧಾಕರ್ ಅವರಲ್ಲಿ ವಿನಂತಿಸಿಕೊಂಡಿದ್ದಾರೆ.
ವಿದ್ಯಾರ್ಥಿಗಳಿಗೆ ಅವಶ್ಯಕತೆಗೆ ಅನುಗುಣವಾಗಿ ಶೌಚಾಲಯಗಳಿದ್ದು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯಗಳ ವ್ಯವಸ್ಥೆಯಿದೆ. ಸಮರ್ಪಕ ನೀರಿನ ವ್ಯವಸ್ಥೆ ಹಾಗೂ ಶೌಚಾಲಯದ ಸುತ್ತಮುತ್ತಲು ಗಿಡಮರಗಳನ್ನು ಬೆಳಸಲಾಗಿದ್ದು, ಪೈಪ್‍ಲೈನ್ ಹಾಕಿ ಸಿಂಟೆಕ್ಸ್ ಅಳವಡಿಸಿ ನಗರ ಪ್ರದೇಶಗಳ ಶಾಲೆಗಳನ್ನು ಮೀರಿಸುವಂತೆ ಮಾಡಿದ್ದಾರೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ












Click it and Unblock the Notifications