525 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾದ ನಂದಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ವಿವರ
ಚಿಕ್ಕಬಳ್ಳಾಪುರ, ಮಾರ್ಚ್ 28: ಚಿಕ್ಕಬಳ್ಳಾಪುರದ ಅರೂರು ಗ್ರಾಮದಲ್ಲಿ ನಂದಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಭವ್ಯ ಕಟ್ಟಡವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಲೋಕಾರ್ಪಣೆಗೊಳಿಸಿದರು. ಆರೋಗ್ಯ ಸಚಿವ ಡಾ.ಸುಧಾಕರ್ ಅವರ ಮಹಾತ್ವಕಾಂಕ್ಷೆಯ ಯೋಜನೆಯಾಗಿದ್ದ ನಂದಿ ವೈದ್ಯಕೀಯ ಕಾಲೇಜಿನ ವಿಶೇಷತೆ ಬಗ್ಗೆ ಮಾಹಿತಿ ಇಲ್ಲಿದೆ.
ಚಿಕ್ಕಬಳ್ಳಾಪುರದ ಅರೂರು ಗ್ರಾಮದಲ್ಲಿ 2019ರ ನವೆಂಬರ್ 8 ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಂದಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. 525 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಲೇಜು ನಿರ್ಮಾಣವಾಗಿದ್ದು, 4 ಬೋಧನಾ ಕೊಠಡಿ, ಡಿಜಿಟಲ್ ಗ್ರಂಥಾಲಯಗಳು, ಲ್ಯಾಬ್‌ಗಳು, ಪರೀಕ್ಷಾ ಕೊಠಡಿ, ಸಿಬ್ಬಂದಿ ಕೊಠಡಿ, 330 ಹಾಸಿಗೆಗಳ ಒಳರೋಗಿ ವಿಭಾಗ, ಐಸಿಯು ಲಭ್ಯವಿದೆ. 373 ವಿದ್ಯಾರ್ಥಿಗಳಿಗೆ, 373 ವಿದ್ಯಾರ್ಥಿನಿಯರಿಗಾಗಿ ಹಾಸ್ಟೆಲ್ ವ್ಯವಸ್ಥೆ ಮಾಡಲಾಗಿದೆ.

ಈ ಬಗ್ಗೆ ಮಾತನಾಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್,ಬಿಜೆಪಿಯು ಜನರಿಗೆ ಯಾವುದೇ ಟೊಳ್ಳು ಭರವಸೆಗಳನ್ನು ನೀಡಿಲ್ಲ. ಆದರೆ ಭರವಸೆಯಲ್ಲಿ ಇಲ್ಲದ ಹೊಸ ಯೋಜನೆಗಳನ್ನು ಕೂಡ ನೀಡಲಾಗಿದೆ. ಬಿಜೆಪಿಯ ಡಬಲ್ ಎಂಜಿನ್ ಸರ್ಕಾರದಿಂದ ನಂದಿ ಮೆಡಿಕಲ್ ಕಾಲೇಜು ಸೇರಿದಂತೆ ಅನೇಕ ಅಭಿವೃದ್ಧಿಗಳು ನಡೆಯುತ್ತಿವೆ ಎಂದರು.
ಮಾತು ಮಂದುವರಿಸಿದ ಅವರು, ನಂದಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಶೇ.60 ರಷ್ಟು ಕೇಂದ್ರ, ಶೇ.40 ರಷ್ಟು ಅನುದಾನವನ್ನು ರಾಜ್ಯ ಸರ್ಕಾರ ನೀಡಿದೆ. 57 ಎಕರೆ ಪ್ರದೇಶದಲ್ಲಿರುವ ಈ ಕಾಲೇಜಿನಲ್ಲಿ ಸುಸಜ್ಜಿತ ಅಕಾಡೆಮಿಕ್ ಬ್ಲಾಕ್, ಹಾಸ್ಟೆಲ್ ಮೊದಲಾದ ಸೌಲಭ್ಯಗಳಿವೆ. ಚಿಕ್ಕಬಳ್ಳಾಪುರದಲ್ಲಿ ಸತ್ಯ ಸಾಯಿ ಮೆಡಿಕಲ್ ಕಾಲೇಜು ಕೂಡ ಆರಂಭವಾಗಿದೆ. ಎರಡು ಮೆಡಿಕಲ್ ಕಾಲೇಜುಗಳಿರುವ ಈ ಜಿಲ್ಲೆಯ ಜನರು ಅದೃಷ್ಟವಂತರು. ಕೋವಿಡ್ ಸಮಯದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ಉತ್ತಮವಾಗಿ ಆಡಳಿತ ನೀಡಿದ್ದರು. ಹಾಗೆಯೇ ಈ ಕಾಲೇಜು ನಿರ್ಮಾಣಕ್ಕೆ ಎಲ್ಲಾ ಸಹಕಾರ ನೀಡಿದ್ದರು ಎಂದರು.
ನಂದಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಉದ್ಘಾಟನೆ ವೇಳೆ ವಿವಿಧ ಕಾರ್ಯಕ್ರಮ, ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ಯೋಜನೆಯಡಿ, 22 ಲಕ್ಷ ಕಾರ್ಡ್‌ಗಳ ವಿತರಣೆಗೆ ಚಾಲನೆ ನೀಡಲಾಗಿದೆ.

ಸದ್ಯ 1.37 ರೂಪಾಯಿ ಕೋಟಿ ಕಾರ್ಡ್‌ಗಳನ್ನು ಜನರೇಟ್ ಮಾಡಿದ್ದು, 21.79 ಲಕ್ಷ ಕಾರ್ಡ್‌ಗಳು ಮುದ್ರಣಗೊಂಡು ವಿತರಣೆಗೆ ಸಿದ್ಧವಾಗಿದೆ. ರಾಜ್ಯದಲ್ಲಿ ಒಟ್ಟು 5.09 ಕೋಟಿ ಫಲಾನುಭವಿಗಳಿಗೆ 2023 ರ ಆಗಸ್ಟ್ ಒಳಗಾಗಿ ಕಾರ್ಡ್ ವಿತರಿಸುವ ಗುರಿಯನ್ನು ಸರ್ಕಾರ ಹೊಂದಿದೆ
ಮಹಿಳೆಯರಿಗಾಗಿ ಮೀಸಲಾದ ಮಹಿಳಾ ಸ್ವಾಸ್ಥ್ಯ ಕ್ಲಿನಿಕ್-ಆಯುಷ್ಮತಿ ಕ್ಲಿನಿಕ್‌ಗಳಿಗೆ ಚಾಲನೆ ದೊರೆತಿದ್ದು, ಎನ್‌ಎಚ್‌ಎಂ ಹಾಗೂ 15 ನೇ ಹಣಕಾಸು ಆಯೋಗದ ಕಾರ್ಯಕ್ರಮದಡಿ ಈ ಯೋಜನೆ ಜಾರಿಯಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 57 ಹಾಗೂ ಇತರೆ ಜಿಲ್ಲೆಗಳಲ್ಲಿ 71 ಸೇರಿದ ಒಟ್ಟು 128 ಕ್ಲಿನಿಕ್‌ಗಳು ಆರಂಭವಾಗಿವೆ. ತಜ್ಞ ವೈದ್ಯರ ಸೇವೆ, 30 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಕ್ಯಾನ್ಸರ್ ಮೊದಲಾದ ಅಸಾಂಕ್ರಾಮಿಕ ರೋಗಗಳ ತಪಾಸಣೆ, ಆಪ್ತ ಸಮಾಲೋಚನೆ, ಲ್ಯಾಬ್ ಪರೀಕ್ಷೆ, ಉಚಿತ ಔಷಧಿ, ಯೋಗ ಮತ್ತು ಧ್ಯಾನ, ರೆಫರಲ್ ಸೇವೆಗಳು ಉಚಿತವಾಗಿ ಲಭ್ಯವಿದೆ.
ಶ್ರವಣದೋಷ ಮುಕ್ತ ಕರ್ನಾಟಕ ನಿರ್ಮಣಕ್ಕೆ ಈ ಯೋಜನೆ ಜಾರಿಯಾಗಿದ್ದು, 32 ಕೋಟಿ ರೂ. ಮೀಸಲಿಡಲಾಗಿದೆ. 500 ಮಕ್ಕಳಿಗೆ ಈ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. 5 ಕೋಟಿ ರೂ. ವೆಚ್ಚದಲ್ಲಿ 92 ಮಕ್ಕಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇದಕ್ಕೂ ಹಿಂದೆಯೇ ಎಸ್‌ಸಿಪಿ/ಟಿಎಸ್‌ಪಿ ಅಡಿ 67 ಮಕ್ಕಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇದು ಸೇರಿ ಒಟ್ಟು 159 ಮಕ್ಕಳು ಯೋಜನೆಯ ಲಾಭ ಪಡೆದಿದ್ದಾರೆ. ಈ ವರ್ಷದ 500 ರ ಗುರಿಯಲ್ಲಿ 92 ಆಗಿದ್ದು, ಇನ್ನೂ 408 ಮಕ್ಕಳಿಗೆ ಶಸ್ತ್ರಚಿಕಿತ್ಸೆ ಮಾಡಬೇಕಿದೆ. 528 ಮಕ್ಕಳಿಗೆ ತಪಾಸಣೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಒಟ್ಟು 438 ʼನಮ್ಮ ಕ್ಲಿನಿಕ್ʼ (ನಗರ ಆರೋಗ್ಯ ಮತ್ತು ಕ್ಷೇಮ ಕೇಂದ್ರ) ಆರಂಭಿಸಲು ಯೋಜನೆ ಜಾರಿಯಾಗಿದ್ದು, ಈಗಾಗಲೇ 298 ಕಾರ್ಯಾರಂಭವಾಗಿದೆ. ಉಳಿದ ಕ್ಲಿನಿಕ್‌ಗಳ ಆರಂಭಕ್ಕೆ ಚಾಲನೆ ನೀಡಲಾಗಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.












Click it and Unblock the Notifications