Pradeep Eshwar: ಸುಧಾಕರ್ ಲೋಕಸಭೆ ಚುನಾವಣೆ ನಿಂತ್ರೆ ಅಲ್ಲೂ ಸೋಲಿಸ್ತೇವೆ: ಪ್ರದೀಪ್ ಈಶ್ವರ್ ಸವಾಲು
ಡಾ. ಎಂ.ಸಿ. ಸುಧಾಕರ್ ಅವರು ಅದ್ಭುತವಾದ ರಾಜಕೀಯ ಇತಿಹಾಸ ಹೊಂದಿದ್ದಾರೆ. ಅವರ ತಂದೆ ಗೃಹ ಸಚಿವರಾಗಿದ್ದರು. ಚಿಂತಾಮಣಿ ಕ್ಷೇತ್ರಕ್ಕೆ ಅವರ ತಾತ ಮೊದಲ ಶಾಸಕರಾಗಿದ್ದವರು, ಅಂತಹ ರಾಜಕೀಯ ಹಿನ್ನಲೆ ಇರುವ ಕುಟುಂಬದಿಂದ ಬಂದಿರುವವರು, ನಮ್ಮ ಜಿಲ್ಲೆಗೆ ಒಳ್ಳೆಯ ಕೆಲಸ ಮಾಡುತ್ತಾರೆ ಎನ್ನುವ ನಂಬಿಕೆ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಡಾ. ಎಂ.ಸಿ. ಸುಧಾಕರ್ ಅವರಿಗೆ ಅಪಾರವಾದ ರಾಜಕೀಯ ಅನುಭವ ಇದೆ, ಅವರ ಜೊತೆಯಲ್ಲಿ ಕೆಲಸ ಮಾಡಲು ನನಗೂ ಖುಷಿ ಇದೆ. ನಮ್ಮ ಜಿಲ್ಲೆಯನ್ನು ದೇಶವೇ ತಿರುಗಿ ನೋಡುವಂತೆ ಅಭಿವೃದ್ಧಿ ಮಾಡಬೇಕು ಎನ್ನುವ ಆಸೆ ಇದೆ. ಹಾಗೆ ಮಾಡಿ ತೋರಿಸ್ತೇವೆ ಎಂದು ಭರವಸೆ ನೀಡಿದರು.

ಎಂ.ಸಿ. ಸುಧಾಕರ್ ಅವರೇ ಚಿಕ್ಕಬಳ್ಳಾಪುರ ಜಿಲ್ಲೆಗೆ ಉಸ್ತುವಾರಿ ಆಗುತ್ತಾರೆ ಎನ್ನುವ ನಂಬಿಕೆ ಇದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮಾತಿಗಿಂತ ಕೆಲಸ ಮಾಡುವುದು ಉತ್ತಮ, ನಾವು ಬದಲಾವಣೆ ತರುತ್ತೇವೆ. ಸದ್ಯ ಸರ್ಕಾರಿ ಶಾಲೆಗಳನ್ನು ಯಾವ ರೀತಿ ಸುಧಾರಣೆ ಮಾಡಬಹುದು ಎಂದು ಯೋಚಿಸುತ್ತಿದ್ದೇನೆ. 10ನೇ ತರಗತಿ ಶಾಲೆಗಳ ಬಗ್ಗೆ ಒಂದು ಸಭೆ ಕರೆದಿದ್ದೇನೆ, 14 ಸರ್ಕಾರಿ ಶಾಲೆಯಲ್ಲಿ 10ನೇ ತರಗತಿಯಲ್ಲಿ 900 ವಿದ್ಯಾರ್ಥಿಗಳಿದ್ದಾರೆ, ಅವರಿಗೆ ವಿಶೇಷವಾಗಿ ವೇಳಾಪಟ್ಟಿ ಸಿದ್ಧ ಮಾಡ್ತಿದ್ದೇನೆ, ಪ್ರತಿ ವಾರ ಪರೀಕ್ಷೆ ಏರ್ಪಡಿಸುತ್ತೇವೆ, 14 ಶಾಲೆಗಳನ್ನು ನಾನೇ ಮೇಲ್ವಿಚಾರಣೆ ಮಾಡುತ್ತೇನೆ ಎಂದರು.
ಸರ್ಕಾರಿ ಶಾಲೆಗಳಿಗೆ ನಾನೂ ಕೂಡ ಹೋಗಿ ಪಾಠ ಮಾಡ್ತೀನಿ, ಈ ಬಾರಿ 10ನೇ ತರಗತಿ ಪರೀಕ್ಷೆಯಲ್ಲಿ ರ್‍ಯಾಂಕ್ ವಿದ್ಯಾರ್ಥಿ ನನ್ನ ಕ್ಷೇತ್ರದಿಂದ ಬರಬೇಕು, ಅದು ನನ್ನ ಕನಸು ಅದನ್ನು ಮಾಡಿ ತೋರಿಸ್ತೇನೆ. ಸರ್ಕಾರಿ ಶಾಲೆಗಳು ಯಾವುದಕ್ಕೂ ಕಡಿಮೆ ಇಲ್ಲ ಎಂದು ಸಾಬೀತುಪಡಿಸುವುದಾಗಿ ಹೇಳಿದರು.
ಲೋಕಸಭೆಯಲ್ಲಿ ಸುಧಾಕರ್ ಅವರನ್ನು ಸೋಲಿಸ್ತೇವೆ
ಮಾಜಿ ಜಿಲ್ಲಾ ಉಸ್ತುವಾರಿ ಮತ್ತು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ಲೋಕಸಭೆ ಚುನಾವಣೆಯಲ್ಲಿ ನಿಲ್ಲುತ್ತಾರೆ ಎಂದು ಹೇಳಲಾಗುತ್ತಿದೆ ಒಂದು ವೇಳೆ ಅವರು ಚುನಾವಣೆಗೆ ನಿಂತರೆ ಅಲ್ಲಿಯೂ ಅವರನ್ನು ಸೋಲಿಸಿ ಮುಖಭಂಗ ಮಾಡ್ತೀವಿ ಎಂದು ಸವಾಲು ಹಾಕಿದರು.
ಅವರು ಕೋಲಾರದಲ್ಲಿ ಚುನಾವಣೆಗೆ ನಿಂತರೂ ಸೋಲಿಸ್ತೇನೆ, ಇದು ದ್ವೇಷದಿಂದ ಹೇಳುತ್ತಿರುವ ಮಾತಲ್ಲ, ಅಂತಹ ವ್ಯಕ್ತಿಗಳು ಸಮಾಜಕ್ಕೆ ಬೇಕಾಗಿಲ್ಲ. ಸಮಾಜಕ್ಕೆ ಕೆಟ್ಟದ್ದು ಮಾಡುವವರನ್ನು ನಿಯಂತ್ರಿಸುವುದು ಒಳ್ಳೆಯದಲ್ಲವಾ ಎಂದು ಪ್ರಶ್ನಿಸಿದರು. ನಾನು ಅಭಿವೃದ್ಧಿ ಮಾಡಬೇಕು, ದ್ವೇಷ ರಾಜಕಾರಣ ಮಾಡಲ್ಲ, ಅವರು ಚುನಾವಣೆಗೆ ಬಂದ್ರೆ ಸೋಲಿಸ್ತೇನೆ ಎಂದರು.












Click it and Unblock the Notifications