ಟ್ವೀಟ್ ಮೂಲಕ ಆಶೀರ್ವಾದ ಕೋರಿದ ಶಾಸಕ ಕೆ. ಸುಧಾಕರ್
ಚಿಕ್ಕಬಳ್ಳಾಪುರ, ನವೆಂಬರ್ 13 : ಶಾಸಕರ ಅನರ್ಹತೆ ಬಗ್ಗೆ ಸುಪ್ರೀಂಕೋರ್ಟ್ ಇಂದು ತೀರ್ಪು ನೀಡಲಿದೆ. ಚಿಕ್ಕಬಳ್ಳಾಪುರ ಕ್ಷೇತ್ರದ ಅನರ್ಹ ಶಾಸಕ ಡಾ. ಕೆ. ಸುಧಾಕರ್ ಟ್ವೀಟ್ ಮೂಲಕ ಜನರ ಆಶೀರ್ವಾದ ಕೇಳಿದ್ದಾರೆ.
ನ್ಯಾಯಮೂರ್ತಿ ಎನ್. ವಿ. ರಮಣ ನೇತೃತ್ವದ ತ್ರಿ ಸದಸ್ಯ ಪೀಠ ಬುಧವಾರ ಬೆಳಗ್ಗೆ 10.30ಕ್ಕೆ ಅನರ್ಹ ಶಾಸಕರ ಅರ್ಜಿಯ ತೀರ್ಪು ಪ್ರಕಟಿಸಲಿದೆ. ಅನರ್ಹಗೊಂಡ ಶಾಸಕರು ಈಗಾಗಲೇ ದೆಹಲಿಗೆ ತಲುಪಿದ್ದು, ತೀರ್ಪಿಗಾಗಿ ಕಾದು ಕುಳಿತಿದ್ದಾರೆ.

ಚಿಕ್ಕಬಳ್ಳಾಪುರ ಕ್ಷೇತ್ರದ ಅನರ್ಹ ಶಾಸಕ ಡಾ. ಕೆ. ಸುಧಾಕರ್ ಬುಧವಾರ ಬೆಳಗ್ಗೆ ಸರಣಿ ಟ್ವೀಟ್‌ಗಳನ್ನು ಮಾಡಿದ್ದು, "ನನಗೆ ನಿಮ್ಮ ಆಶೀರ್ವಾದ ಬೇಕಾಗಿದೆ. ನನ್ನ ವಿಜಯೋತ್ಸವಕ್ಕೆ ಪ್ರಾರ್ಥಿಸಿ"ಎಂದು ಕರೆ ನೀಡಿದ್ದಾರೆ.
ಡಾ. ಕೆ. ಸುಧಾಕರ್ ಪರವಾಗಿ ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡನೆ ಮಾಡುವಾಗ ವಕೀಲರು, ಶಾಸಕರು ಪಕ್ಷವನ್ನು ಬಿಟ್ಟಿಲ್ಲ. ಮುಖ್ಯಮಂತ್ರಿಗಳ ಕಾರ್ಯ ವೈಖರಿಯಿಂದ ಬೇಸತ್ತು ರಾಜೀನಾಮೆ ನೀಡಿದ್ದಾರೆ. ಅವರಿಗೆ ಶಾಸಕತ್ವ ಬೇಕಾಗಿರಲಿಲ್ಲ ಎಂದು ವಾದಿಸಿದ್ದರು.
ನನ್ನ ರಾಜೀನಾಮೆಯ ನಂತರ ನಾನು ಕಳೆದ 123 ದಿನಗಳಲ್ಲಿ ಯಾರು ನನ್ನ ನಿಜವಾದ ಆತ್ಮೀಯರು ಹಾಗೂ ಹಿತೈಷಿಗಳು ಎಂಬುದನ್ನು ಅರಿತಿದ್ದೇನೆ. ನನ್ನ ಕಷ್ಟದ ದಿನಗಳಲ್ಲಿ ನನ್ನೊಂದಿಗಿದ್ದ ಅವರಿಗೆ ನಾನು ಅಪಾರ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ಸೂರ್ಯಾಸ್ತಮ ಮುಗಿಯುತ್ತಿದ್ದು ನೂತನ ಸೂರ್ಯೋದಯಕ್ಕೆ ನಾನು ಕಾಯುತ್ತಿದ್ದೇನೆ. pic.twitter.com/w0EGdh4xV7
— Dr Sudhakar K (@mla_sudhakar) November 13, 2019
ನಾನು ಬೇರೆ ಪಕ್ಷ ಸೇರಿಲ್ಲ, ಸುಪ್ರೀಂಕೋರ್ಟ್ ತೀರ್ಪಿನ ಕಾರಣ ವಿಪ್ ಅನ್ವಯವಾಗುವುದಿಲ್ಲ. ಸ್ಪೀಕರ್ ಕಳಿಸಿದ ನೋಟಿಸ್‌ಗೆ ಉತ್ತರ ನೀಡಲು 7 ದಿನದ ಬದಲು 3 ದಿನ ಮತ್ರ ಸಮಯ ನೀಡಿದ್ದು ಸರಿಯಲ್ಲ ಮುಂಬೈ ಪ್ರವಾಸಕ್ಕೂ ರಾಜೀನಾಮೆಗೆ ಸಂಬಂಧವಿಲ್ಲ ಎಂದು ವಾದ ಮಂಡಿಸಿದ್ದರು.
ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಡಿಸೆಂಬರ್ 5ರಂದು ಉಪ ಚುನಾವಣೆ ನಡೆಯಲಿದೆ. ಅನರ್ಹ ಶಾಸಕರು ಚುನಾವಣಾ ಕಣಕ್ಕಿಳಿಯಬಹುದೇ? ಎಂಬುದು ತೀರ್ಪಿನ ಮೇಲೆ ನಿಂತಿದೆ.












Click it and Unblock the Notifications