ಚಿಕ್ಕಬಳ್ಳಾಪುರ: 13 ದಿನಗಳ ಬಳಿಕ 20 ಅಡಿ ಬೈಪಾಸ್ ಗಣೇಶ ವಿಸರ್ಜನೆ, ಅದ್ಧೂರಿ ಮೆರವಣಿಗೆ
ಚಿಕ್ಕಬಳ್ಳಾಪುರ , ಅಕ್ಟೋಬರ್ 02:ಚಿಕ್ಕಬಳ್ಳಾಪುರ ನಗರದಲ್ಲಿ ಒಂದೇ ಜಪ, ಅದುವೇ ಗಣಪತಿ ಬಪ್ಪಾ ಮೋರಯಾ. ಮಹರಾಜಕೀ ಜೈ. ಬೈಪಾಸ್ ವೃತ್ತದಲ್ಲಿ ಶ್ರೀ ವಿದ್ಯಾಗಣಪತಿ ಯುವಕರ ಸಂಘದವರು ಪ್ರತಿಷ್ಠಾಪಿಸಿರುವ 20 ಅಡಿ ಎತ್ತರದ ಶ್ರೀ ಮಹಾರಾಜ ಸಿಂಹಾಸನ ಗಣಪತಿ 13ನೇ ದಿನ ಭವ್ಯ ಮೆರವಣಿಗೆಯೊಂದಿಗೆ ವಿಸರ್ಜನೆಗೊಂಡಿತು.
ಗಣೇಶ ವಿಸರ್ಜನೆಯ ನಿಮಿತ್ತ ಸಂಪೂರ್ಣ ನಗರದಲ್ಲಿ ವಿಘ್ನನಿವಾರಕನ ಗಾಯನ, ನೃತ್ಯ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು. ಗಣೇಶ ವಿಸರ್ಜನೆಯ ಭವ್ಯ ಮೆರವಣಿಗೆ ನೋಡಲು ಕಣ್ಣೆರಡೂ ಸಾಲದು ಎಂಬಂತಿತ್ತು. ಸಾಗರೋಪಾದಿಯಲ್ಲಿ ನೆರೆದಿದ್ದ ಜನರ ನಡುವೆ ಸಾಗಿದ್ದ ಗಣೇಶನ ಮೆರವಣಿಗೆ ಅದ್ಧೂರಿಯೋ ಅದ್ಧೂರಿ. ಗಣೇಶ ವಿಗ್ರಹ ನೋಡುವುದೇ ಹಬ್ಬವಾಗಿತ್ತು.

ನಗರದ ಪ್ರಮುಖ ಬೀದಿಗಳಲ್ಲಿ ಹೊರಟ ಮೆರವಣಿಗೆ ನಗರದ ಹೃದಯ ಭಾಗವಾಗಿರುವ ಮಹಾತ್ಮ ಗಾಂಧಿವೃತ್ತದಿಂದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಸಾಗಿ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಕಲ್ಲೂಡಿ ಬಳಿ ವಿಗ್ರಹ ವಿಸರ್ಜಿಸಲಾಗುತ್ತದೆ.
ಗಣೇಶ ವಿಸರ್ಜನೆಗೆ ವಿವಿಧ ಜಾನಪದ ಕಲಾ ತಂಡಗಳು, ವಾದ್ಯ ವೃಂದಗಳು, ಝಾಂಜ್ ಮೇಳ, ಜಾನಪದ ಕಲಾ ತಂಡಗಳು ಮೆರಗು ತಂದಿದ್ದವು. ಧ್ವನಿ ವರ್ಧಕಗಳಿಂದ ಹೊರ ಹೊಮ್ಮುತ್ತಿದ್ದ ಹಾಡಿಗೆ ತಕ್ಕಂತೆ ಯುವಕ-ಯುವತಿಯರು, ಮಹಿಳೆಯರು, ಮಕ್ಕಳು ಹೆಜ್ಜೆ ಹಾಕಿ ಸಂಭ್ರಮಿಸಿದರು. ಗಣೇಶ ನಾಮ ಸ್ಮರಣೆ, ಗಣೇಶನ ಜಯ ಘೋಷ ಹಾಕುತ್ತಾ ಕುಳಿದು ಕುಪ್ಪಳಿಸಿದರು. ಇನ್ನು ವಿವಿಧ ವೇಷಭೂಷಣಗಳು ಧರಿಸಿದ್ದು ಗಮನ ಸೆಳೆಯಿತು.
ಗಣೇಶನಿಗೆ ವೈಭವದ ವಿದಾಯ ಹೇಳಲು ಮೆರವಣಿಗೆಯಲ್ಲಿ ಕುಳಿದು ಕುಪ್ಪಳಿಸುವ ಜನ ಒಂದೆಡೆಯಾದರೆ ಗಣೇಶ ವಿಸರ್ಜನೆಯ ಅವಿಸ್ಮರಣೀಯ ದೃಶ್ಯ ಕಣ್ತುಂಬಿಕೊಳ್ಳಲು ಅದಕ್ಕೂ ಹೆಚ್ಚು ಜನ ನೆರೆದಿದ್ದರು.ಡಾ ಬಾಬ ಸಾಹೇಬ್ ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಸಾಗಿ ಬರುತ್ತಿದ್ದ ಗಣೇಶ ಮೆರವಣಿಗೆ ನೋಡಲು ಸಾಯಂಕಾಲ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದರು. ಮನೆ ಅಂಗಡಿ ಸೇರಿದಂತೆ ಕಟ್ಟಡದ ತುತ್ತ ತುದಿಯಲ್ಲಿ ನಿಂತು ಜನರು ಗಣೇಶ ವಿಸರ್ಜನೆಯ ವೈಭವವನ್ನು ವೀಕ್ಷಿಸಿದರು.

ಗಣೇಶ ಹಬ್ಬ ಎಂದ ಮೇಲೆ ಕೇಳಬೇಕೇ ಪಟಾಕಿ ಸದ್ದು ಇದ್ದೇ ಇರುತ್ತದೆ. ಪರಿಸರ ಹಾನಿ ಎಂದು ಎಷ್ಟೇ ಜಾಗೃತಿ ಮೂಡಿಸಿದರೂ ಪಟಾಕಿ ಸದ್ದು ಮಾತ್ರ ಅಡಗಲಿಲ್ಲ. ಬಾನಂಗಳದಲ್ಲಿ ಚಿತ್ತಾರ ಮೂಡಿಸುವ ಪಟಾಕಿಗಳು ಆಕರ್ಷಕವಾಗಿದ್ದವು.
ಮೆರವಣಿಗೆಯ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. 150ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಬಂದೋಬಸ್ತ್‌ಗೆ ನಿಯೋಜನೆಗೊಳಿಸಲಾಗಿತ್ತು. ಸೂಕ್ಷ್ಮ ಪ್ರದೇಶಗಳಲ್ಲಿ ಡಿಎಆರ್ ಪೊಲೀಸ್ ಪಡೆ ನೇಮಿಸಲಾಗಿತ್ತು.












Click it and Unblock the Notifications