ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆ ಜಿಲ್ಲಾಧಿಕಾರಿಗಳಿಂದ ನಿಷೇಧಾಜ್ಞೆ ಜಾರಿ
ಚಿಕ್ಕಬಳ್ಳಾಪುರ ಮೇ 19: ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆಯ ಮತದಾನವು ಜೂನ್ 3 ರಂದು ನಿಗದಿಯಾಗಿರುವ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 144 ಅಡಿಯಲ್ಲಿ ಹಲವು ಆದೇಶಗಳನ್ನು ಪಾಲನೆ ಮಾಡಲು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು ಆದೇಶ ಹೊರಡಿಸಿದ್ದಾರೆ.
ಜೂನ್ 1 ರ ಸಂಜೆ 5 ಗಂಟೆಯಿಂದ ಜೂನ್ 3 ರ ಮಧ್ಯ ರಾತ್ರಿ 12 ಗಂಟೆಯವರೆಗೆ ಕಾನೂನುಬಾಹಿರವಾಗಿ ಗುಂಪು ಗೂಡುವುದು, ಮೆರವಣಿಗೆ, ರ್ಯಾಲಿ ನಿಷೇಧಿಸಲಾಗಿದೆ. ಸಾರ್ವತ್ರಿಕ ಸ್ಥಳಗಳಲ್ಲಿ, ಬೀದಿಗಳಲ್ಲಿ ಐವರು ಹಾಗೂ ಅದಕ್ಕಿಂತ ಹೆಚ್ಚು ವ್ಯಕ್ತಿಗಳು ಗುಂಪು ಗೂಡುವಂತಿಲ್ಲ. ಘೋಷಣೆಗಳನ್ನು ಕೂಗುವಂತಿಲ್ಲ. ಸಾರ್ವಜನಿಕರ ಶಾಂತಿ ಹಾಗೂ ನೆಮ್ಮದಿಗೆ ಭಂಗತರುವುದನ್ನು ನಿಷೇಧಿಸಲಾಗಿದೆ.

ಮತದಾನದ ಮುಕ್ತಾಯದ ಸಮಯದ ಕೊನೆಗೊಳ್ಳುವ 48 ಗಂಟೆಗಳ ಅವಧಿಯಲ್ಲಿ ಚುನಾವಣೆಯ ಉದ್ದೇಶಕ್ಕಾಗಿ ಯಾವುದೇ ಧ್ವನಿವರ್ಧಕ ಬಳಸಲು ಅನುಮತಿಸಲಾಗುವುದಿಲ್ಲ.
ಯಾವುದೇ ಹಣ, ಉಡುಗೊರೆ ಅಥವಾ ಮದ್ಯದ ವಿತರಣೆ ತಪ್ಪಿಸಲು ಮತ್ತು ಕಾನೂನು ಸುವ್ಯವಸ್ಥೆಗಳ ಸಮಸ್ಯೆಗಳನ್ನು ತಡೆಗಟ್ಟುವ ಉದ್ದೇಶದಿಂದ ಚುನಾವಣಾ ದಿನದಂದು ಅಭ್ಯರ್ಥಿಗಳು ಚುನಾವಣೆಗಾಗಿ ಅನುಮತಿ ಪಡೆದುಕೊಂಡಿರುವ ವಾಹನಗಳನ್ನು ಮಾತ್ರ ಬಳಕೆ ಮಾಡಬೇಕು. ಹಣ, ಉಡುಗೊರೆ, ಮದ್ಯ ವಿತರಣೆಯನ್ನು ತಪ್ಪಿಸುವ ಸಲುವಾಗಿ ಎಲ್ಲಾ ಖಾಸಗಿ ವಾಹನಗಳನ್ನು ನಿಯಮಾನುಸಾರ ಪರಿಶೀಲಿಸಲಾಗುತ್ತದೆ.
ಯಾವುದೇ ಮದ್ಯದಂಗಡಿ, ಹೋಟೆಲ್ ರೆಸ್ಟೋರೆಂಟ್, ಕ್ಲಬ್ ಗಳು, ಮದ್ಯ ಮಾರಾಟ/ವಿತರಣೆ ಮಾಡುವ ಇತರೆ ಎಷ್ಟಾಬ್ಲಿಷ್ ಮೆಂಟ್ ಗಳು ಸೂಚಿಸಲಾಗಿರುವ ದಿನ ಹಾಗೂ ಅವಧಿಗಳಲ್ಲಿ ಮದ್ಯ ಮಾರಾಟ ಮಾಡಬಾರದು. ಸ್ವಾಮ್ಯದ ಕ್ಲಬ್ ಗಳು, ಸ್ಟಾರ್ ಹೋಟೆಲ್ ಗಳು, ರೆಸ್ಟೋರೆಂಟ್ ಗಳು ಇತ್ಯಾದಿ ಮತ್ತು ಮದ್ಯದ ಪೂರೈಕೆಗಾಗಿ ವಿವಿಧ ವರ್ಗಗಳ ಪರವಾನಗಿಗಳನ್ನು ಪಡೆದಿದ್ದರೂ ಸಹ ಸೂಚಿಸಲಾಗಿರುವ ದಿನ ಹಾಗೂ ಸಮಯದಲ್ಲಿ ಮದ್ಯ ಪೂರೈಕೆಗೆ ಅನುಮತಿಸಲಾಗುವುದಿಲ್ಲ.
ಮತದಾನ ನಡೆಯುವ ಎಲ್ಲಾ ಕ್ಷೇತ್ರಗಳಲ್ಲಿ ಮತದಾನದ ದಿನಕ್ಕಿಂತ 72 ಗಂಟೆಗಳ ಮೊದಲು ಯಾವುದೇ ಸ್ಥಳದಲ್ಲಿ ಬೈಕ್ ರ್ಯಾಲಿ ನಡೆಸಲು ಅನುಮತಿಸಲಾಗುವುದಿಲ್ಲ.
ಮತದಾನ ಕೊನೆಗೊಳ್ಳುವ 48 ಗಂಟೆಗಳ ಹಿಂದಿನ ಅವಧಿಯಲ್ಲಿ ಪ್ರಜಾಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 126ರ ಅಡಿಯಲ್ಲಿ ಯಾವುದೇ ಸಾರ್ವಜನಿಕ ಸಭೆ, ಮೆರವಣಿಗೆ, ಸಂಗೀತ ಕಛೇರಿಗಳು, ರ್ಯಾಲಿಗಳು ಅಥವಾ ಯಾವುದೇ ರೀತಿಯ ಚುನಾವಣ ಪ್ರಚಾರಕ್ಕೆ ಅವಕಾಶವಿರುವುದಿಲ್ಲ. ಆದಾಗ್ಯೂ ಈ ಅವಧಿಯಲ್ಲಿ ಮನೆಮನೆ ಪ್ರಚಾರಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ.
ಆದೇಶದ ಉಲ್ಲಂಘನೆಯು ಐಪಿಸಿ ಸೆಕ್ಷನ್ 188 ಮತ್ತು ಕಾನೂನಿನಿಂದ ಇತರೆ ಸಂಬಂಧಿತ ನಿಬಂಧನೆಗಳಡಿಯಲ್ಲಿ ಶಿಕ್ಷಾರ್ಹವಾಗಿರುತ್ತದೆ. ಆದೇಶವು ಧಾರ್ಮಿಕ ಕಾರ್ಯಗಳು, ಮದುವೆ, ಅಂತ್ಯಕ್ರಿಯೆ ಕಾರ್ಯಗಳಿಗೆ ಅನ್ವಯಿಸುವುದಿಲ್ಲ ಹಾಗೂ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಈ ಆದೇಶವು ಅನ್ವಯಿಸುವುದಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಪಿ.ಎನ್. ರವೀಂದ್ರ ಅವರು ಆದೇಶದಲ್ಲಿ ತಿಳಿಸಿದ್ದಾರೆ.












Click it and Unblock the Notifications