ಕ್ರಿಕೆಟ್ ಟೀಂ ಕಟ್ಟುವಷ್ಟು ಕಾಂಗ್ರೆಸ್‌ನಲ್ಲಿ ಸಿಎಂ ಆಕಾಂಕ್ಷಿಗಳಿದ್ದಾರೆ..!
ರಾಜ್ಯ ಕಾಂಗ್ರೆಸ್‌ನಲ್ಲಿರುವ ಸಿಎಂ ಕುರ್ಚಿ ಕಿತ್ತಾಟದ ಬಗ್ಗೆ ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ವ್ಯಂಗ್ಯ ಮಾಡಿದ್ದಾರೆ. ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಇದರ ಪಟ್ಟಿಯನ್ನು ಗಮನಿಸಿದರೆ ಒಂದು ಕ್ರಿಕೆಟ್ ಟೀಂ ಕಟ್ಟಬಹುದು ಎಂದು ಸುಧಾಕರ್ ಹೇಳಿದ್ದಾರೆ.
ಇನ್ನು ರಾಜಕೀಯದಲ್ಲಿ ಅಧಿಕಾರದಲ್ಲಿದ್ದಾಗ ಒಂದು ತರದ ಬಣ ಇದ್ದರೆ, ಅಧಿಕಾರ ಇಲ್ಲದಿದ್ದಾಗ ಮತ್ತೊಂದು ರೀತಿಯ ಬಣ, ಕಾಂಗ್ರೆಸ್ ನಲ್ಲಿ ಎಷ್ಟು ಬಣಗಳಿವೆ ಎಂದು ಸುಧಾಕರ್ ಪ್ರಶ್ನಿಸಿದ್ದಾರೆ. ಬೈ ಎಲೆಕ್ಷನ್‌ನಲ್ಲಿ ಕಾಂಗ್ರೆಸ್ ಮೂರು ಕ್ಷೇತ್ರಗಳನ್ನು ಗೆದ್ದಿದೆ, ಆದ್ರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಏಕೆ ಸೋಲು ಕಂಡಿತು. ಈಗ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಎಲೆಕ್ಷನ್ ನಡೆಸಿದ್ರೆ ಯಾರು ಗೆಲ್ಲೋದು ಅನ್ನೋದು ಗೊತ್ತಾಗುತ್ತೆ ಎಂದಿದ್ದಾರೆ.

ಕಾಂಗ್ರೆಸ್ ಸರ್ಕಾರ ಈ ಭಯದಿಂದಲೇ ಬಿಬಿಎಂಪಿ ಚುನಾವಣೆ ಹಾಗು ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಲು ಹಿಂದೇಟು ಹಾಕುತ್ತಿದೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಒಗ್ಗಟ್ಟಿನಿಂದ ಹೋರಾಡಿದರೆ ಜನರು ಬಯಸಿದಂತೆ ಈ ಕೆಟ್ಟ ಕಾಂಗ್ರೆಸ್ ಸರ್ಕಾರವನ್ನು ಇಲ್ಲದಂತೆ ಮಾಡಬಹುದು ಎಂದು ಹೇಳಿದ್ದಾರೆ.
ಅದಾನಿ ವಿಚಾರವಾಗಿ ಪರೋಕ್ಷವಾಗಿ ಮಾತನಾಡಿರುವ ಸಂಸದ ಕೆ.ಸುಧಾಕರ್, ಕೇವಲ ಒಂದು ವ್ಯಕ್ತಿಯ ವಿಷಯ ಮುಂದಿಟ್ಟುಕೊಂಡು ಲೋಕಸಭೆ ಹಾಗೂ ರಾಜ್ಯ ಸಭೆ ಕಲಾಪಗಳ ಸಮಯ ಹಾಳು ಮಾಡುತ್ತಿದ್ದಾರೆ. ಅವರ ವಿರುದ್ಧ ಎಫ್‌ಐಆರ್ ದಾಖಲಾಗಿರೋದು ಅಮೇರಿಕಾದಲ್ಲಿ ಹಾಗೂ ಆ ವಿಚಾರವನ್ನು ಅವರೇ ನೋಡಿಕೊಳ್ಳುತ್ತಾರೆ. ಅದನ್ನು ಇವರೇಕೆ ಸಂಸತ್‌ನಲ್ಲಿ ಚರ್ಚಿಸಿ, ಸಮಯ ಹಾಳು ಮಾಡುತ್ತಿದ್ದಾರೋ ಅರ್ಥವಾಗುತ್ತಿಲ್ಲ ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

ಮುಸ್ಲಿಂ ಸಮುದಾಯದವರ ಮತದಾನ ಹಕ್ಕು ರದ್ದು ಮಾಡುವ ಹೇಳಿಕೆ ನೀಡಿರುವ ಒಕ್ಕಲಿಗ ಸಂಸ್ಥಾನದ ಚಂದ್ರಶೇಖರ ಸ್ವಾಮೀಜಿ ಮೇಲೆ ಎಫ್‌ಐಆರ್ ದಾಖಲಾಗಿರುವ ವಿಚಾರವಾಗಿಯೂ ಸುಧಾಕರ್ ಮಾತನಾಡಿದ್ದಾರೆ. ಕಾಂಗ್ರೆಸ್‌ನವರು ಮಾತೆತ್ತಿದರೆ ವಾಕ್ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಎಂದು ಉದ್ದುದ್ದ ಭಾಷಣ ಬಿಗೀತಾರೆ. ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆದರೆ, ಅದು ಸರಿಯೋ ತಪ್ಪೋ ಎಂಬುದನ್ನು ನಾನು ಮಾತನಾಡೋದಿಲ್ಲ ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಕೂಡ ಚಂದ್ರಶೇಖರ ಸ್ವಾಮೀಜಿ ಅವರ ಪ್ರಕರಣದಲ್ಲಿ ಪೊಲೀಸರು ಕಾನೂನಿನ ದೃಷ್ಟಿಯಲ್ಲಿ ಏನು ಮಾಡಬೇಕೋ ಅದನ್ನು ಮಾಡುತ್ತಾರೆ. ಕಾನೂನಿನ ಚೌಕಟ್ಟಿನೊಳಗೆ ಬಂದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇಲ್ಲವಾದರೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಒಕ್ಕಲಿಗ ವಿರೋಧಿ ಕಾಂಗ್ರೆಸ್ ಸರ್ಕಾರದಿಂದ ಒಕ್ಕಲಿಗ ಸ್ವಾಮೀಜಿಗೆ ಅವಮಾನವಾಗಿದೆ. ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರು ತಮ್ಮ ಹೇಳಿಕೆಯನ್ನು ವಾಪಾಸ್ ಪಡೆದಿದ್ದರೂ, ಅವರ ವಿರುದ್ದ ಕ್ರಮ ಕೈಗೊಳ್ಳಲು ಮುಂದಾಗಿರುವುದು ಕಾಂಗ್ರೆಸ್‌ನ ಒಕ್ಕಲಿಗ ವಿರೋಧಿ ಮನಸ್ಥಿತಿಗೆ ನಿದರ್ಶನ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತ್ತು.
ಬಾಗೇಪಲ್ಲಿ ಕ್ಷೇತ್ರ ಪ್ರವಾಸ ಮಾಡಿದ ಸುಧಾಕರ್: ಇನ್ನು ಸಂಸದ ಸುಧಾಕರ್ ಅವರು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಚೇಳೂರು ತಾಲೂಕಿನ ಚಾಕವೇಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಸ್ಥಳೀಯ ಸಮಸ್ಯೆಗಳು ಹಾಗು ಕುಂದುಕೊರತೆಗಳ ಬಗ್ಗೆ ಅಹವಾಲು ಸ್ವೀಕರಿಸಿದರು.
ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಪ್ರವಾಸದ ಸಂದರ್ಭದಲ್ಲಿ ದಾಸಿರಿವಾಂಡ್ಲಪಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಮನೆ ಮನೆಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಯ ಪರಿವೀಕ್ಷಣೆ ನಡೆಸಿದರು. ಇದೇ ವೇಳೆ ಸ್ಥಳೀಯ ಗ್ರಾಮಸ್ಥರು ಬೇಡಿಕೆಯಂತೆ ಗ್ರಾಮದಲ್ಲಿ ಅಂಗನವಾಡಿ ಉಪಕೇಂದ್ರ ಸ್ಥಾಪಿಸುವುದರ ಬಗ್ಗೆ ಚರ್ಚೆ ನಡೆಸಿದರು.












Click it and Unblock the Notifications