ಆಯುಧ ಪೂಜೆಗೆ ಎಲ್ಲವೂ ದುಬಾರಿ: ಇಲ್ಲಿದೆ ಚಿಕ್ಕಬಳ್ಳಾಪುರ ಮಾರುಕಟ್ಟೆಯ ಹೂವು-ಹಣ್ಣುಗಳ ಬೆಲೆಯ ವಿವರ
ಚಿಕ್ಕಬಳ್ಳಾಪುರ, ಅಕ್ಟೋಬರ್, 23: ಆಯುಧ ಪೂಜೆ-ವಿಜಯದಶಮಿ ಸಂಭ್ರಮಕ್ಕೆ ಬರದ ಗರ ಬಡಿದಿರುವ ಜೊತೆಗೆ, ಹಬ್ಬ ಆಚರಣೆಗೆ ಹೂವು, ಹಣ್ಣು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿ ಜನ ಸಾಮಾನ್ಯರಿಗೆ ತಟ್ಟಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲ ತಾಲೂಕುಗಳ ಮಾರುಕಟ್ಟೆಗಳಲ್ಲಿ ಬಾಳೆ ಕಂಬ ಹಾಗೂ ಬೂದು ಕುಂಬಳ ಕಾಯಿವನ್ನು ರಾಶಿ ಹಾಕಿಕೊಂಡು ವ್ಯಾಪಾರ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಅದರಲ್ಲೂ ಬೂದುಗುಂಬಳ ಕಾಯಿ ಮಾರುಕಟ್ಟೆಗೆ ನಿರೀಕ್ಷೆ ಮೀರಿ ಬಂದಿರುವ ಪರಿಣಾಮ ಬೆಲೆ ಇಲ್ಲದಂತಾಗಿದ್ದು 5 ರಿಂದ 8 ಕೆಜಿ ಒಳಗಿನ ಕಾಯಿಯನ್ನು ಕೇವಲ 50 ರೂಪಾಯಿಗೆ ಪ್ರಮುಖ ರಸ್ತೆಗಳ ಬದಿಯಲ್ಲಿ ಮಾರಾಟ ಮಾಡಲಾಗುತ್ತಿದೆ.

ಬೆಲೆ ಏರಿಕೆ ಬಿಸಿಯಿಂದ ಜನರು ಹೂವು, ತರಕಾರಿ, ಹಣ್ಣು ಹಂಪಲು ಖರೀದಿ ಮಾಡುವಾಗ ಅಳೆದು ತೂಗಿ ಖರೀದಿ ಮಾಡುವಂತಾಗಿದೆ. ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ನಗರದ ಬಿ.ಬಿ ರಸ್ತೆ, ಸಂತೆ ಮಾರುಕಟ್ಟೆ, ಬಜಾರ್ ರಸ್ತೆ, ಎಂ.ಜಿ ರಸ್ತೆ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರ ಹಾಗೂ ನಗರದ ಪ್ರಮುಖ ರಸ್ತೆಗಳಲ್ಲಿ ಕಳೆದ ಎರಡು ದಿನಗಳಿಂದ ಖರೀದಿ ನಡೆಯುತ್ತಿದೆ.
ಆಯುಧ ಪೂಜೆಗೆ ಎಲ್ಲವೂ ದುಬಾರಿ
ಆಯುಧ ಪೂಜೆ ಮತ್ತು ವಿಜಯ ದಶಮಿಯನ್ನು ಪ್ರತಿಯೊಬ್ಬರೂ ಆಚರಿಸುತ್ತಾರೆ. ಎಲ್ಲ ಅಂಗಡಿಗಳು, ಮನೆ, ದೇಗುಲ ಹೀಗೆ ಎಲ್ಲೆಡೆ ಸಡಗರ ಮನೆ ಮಾಡಿರುತ್ತದೆ. ವಾಹನ, ಆಯುಧಗಳು, ಯಂತ್ರೋಪಕರಣ, ದೇವರ ಉತ್ಸವಗಳು ನಡೆಯುತ್ತವೆ. ಹೂವಿನ ಅಲಂಕಾರವೇ ಈ ಹಬ್ಬದ ವಿಶೇಷ. ಹೀಗಾಗಿ ಕಳೆದ ಕೆಲವು ದಿನಗಳಿಂದ ಪಾತಾಳಕ್ಕೆ ಕುಸಿದಿದ್ದ ಹೂವಿನ ಬೆಲೆ, ಈಗ ಗಗನಕ್ಕೇರಿದೆ. ಇನ್ನೊಂದೆಡೆ ಹಣ್ಣು ಮತ್ತು ತರಕಾರಿಗಳ ಬೆಲೆಯೂ ದುಬಾರಿಯಾಗಿದೆ.

ಕಳೆದ ಬಾರಿ ಆಗಾಗ ಮಳೆ ಸುರಿಯುತ್ತಿದ್ದರಿಂದ ಸೇವಂತಿಗೆ, ಕನಕಾಂಬರ, ಚೆಂಡು ಹೂವು ಹಾಗೂ ಗುಲಾಬಿ ಹೂಗಳು ಹಾಳಾಗಿ ಬೆಲೆ ಹೆಚ್ಚಾಗಿತ್ತು. ಆದರೆ, ಈ ಬಾರಿ ಕಳೆದ ಕೆಲವು ದಿನಗಳಿಂದ ತೀವ್ರ ಬೆಲೆ ಕುಸಿತದ ಹಿನ್ನೆಲೆ ರೈತರು ಬೆಳೆಗಳನ್ನು ನಾಶಪಡಿಸಿದ್ದರಿಂದ ಈಗ ಹೂವಿಗೆ ಬೆಲೆ ಬಂದಿದೆ. ಇನ್ನೊಂದೆಡೆ ಇರುವ ಬೆಳೆಗಳಿಗೆ ನಾನಾ ಕಾಯಿಲೆಗಳು ಆವರಿಸಿದ್ದು, ಹೆಚ್ಚಿನ ಫಸಲು ಪಡೆಯಲು ಆಗುತ್ತಿಲ್ಲ. ಜೊತೆಗೆ ನೀರಿನ ಸಮಸ್ಯೆಯೂ ಇದ್ದು ನಿರೀಕ್ಷಿತ ಪ್ರಮಾಣದಲ್ಲಿ ಹೂ ಮಾರುಕಟ್ಟೆಗೆ ಬರುತ್ತಿಲ್ಲ.
ಶ್ರಾವಣ ಮಾಸ ಹಾಗೂ ಪಿತೃಪಕ್ಷದ ವೇಳೆ ಹೂವುಗಳನ್ನು ಕೇಳುವವರಿಲ್ಲದೇ ಮಾರುಕಟ್ಟೆಯಲ್ಲಿ ರೈತರು ರಾಶಿ ರಾಶಿ ಸುರಿದಿದ್ದರು. ಹೂವಿನ ಬೆಲೆ ಕೆ.ಜಿ.ಗೆ 20-50ರೂ. ವರೆಗೂ ಇತ್ತು. ಆದರೆ, ಆಯುಧ ಪೂಜೆ ಮತ್ತು ವಿಜಯದಶಮಿಗೆ ಹೂವಿನ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಅದರಲ್ಲೂ ಮಲ್ಲಿಗೆ ಮತ್ತು ಕನಕಾಂಬರ ಬೆಲೆ 1200 ರೂ., ಗುಲಾಬಿ ಹೂ ಬೆಲೆ 400 ರೂ. ಗಡಿ ದಾಟಿದೆ.
ಗಗನಕ್ಕೇರಿದ ಹೂವಿನ ಬೆಲೆ (1 ಕೆ.ಜಿ.ಗೆ)
ಮಲ್ಲಿಗೆ- 900-1200 ರೂಪಾಯಿ.
ಕನಕಾಂಬರ- 1,000-1,300 ರೂಪಾಯಿ.
ಕಾಕಡ- 600-800 ರೂಪಾಯಿ.
ಸೇವಂತಿಗೆ- 200-450 ರೂಪಾಯಿ.
ಸಣ್ಣ ಗುಲಾಬಿ- 300-500 ರೂಪಾಯಿ.
ಚೆಂಡೂ ಹೂ- 50-90 ರೂಪಾಯಿ.
ಬಟನ್ಸ್ ಹೂ- 180-310 ರೂಪಾಯಿ.
ಬಾಳೆಕಂಬ ಜೋಡಿಗೆ- 50 ರೂಪಾಯಿ.
ಹಣ್ಣಿನ ದರ(1 ಕೆ.ಜಿಗೆ)
ಸೇಬು- 180 ರೂಪಾಯಿ.
ದಾಳಿಂಬೆ- 220 ರೂಪಾಯಿ.
ಕಿತ್ತಳೆ - 75 ರೂಪಾಯಿ.
ಸೀಬೆ - 70 ರೂಪಾಯಿ.
ಮುಸಂಬಿ - 80 ರೂಪಾಯಿ.
ಈ ಬಗ್ಗೆ ಹೂವಿನ ವ್ಯಾಪಾರಿ ಕಿರಣ್ ಮಾತನಾಡಿದ್ದು,"ಆಯುಧ ಪೂಜೆ ಮತ್ತು ವಿಜಯ ದಶಮಿಗೆ ಹೂವಿಗೆ ಒಳ್ಳೆಯ ಬೇಡಿಕೆ ಇದೆ. ಉತ್ತಮ ಬೆಲೆ ಸಿಕ್ಕಿದೆ. ಇತ್ತೀಚೆಗೆ ಬೆಲೆ ಕುಸಿತದಿಂದ ಸಾಕಷ್ಟು ಮಂದಿ ಹೂವಿನ ಬೆಳೆಯನ್ನೇ ಕಿತ್ತುಹಾಕಿದ್ದರು. ಜೊತೆಗೆ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಇರುವುದರಿಂದ ಮಾರುಕಟ್ಟೆಗೆ ಹೆಚ್ಚಿನ ಹೂ ಬರುತ್ತಿಲ್ಲ. ಹೀಗಾಗಿ ಹಬ್ಬಕ್ಕೆ ಬೆಲೆ ಏರಿಕೆಯಾಗಿದೆ." ಎಂದರು.
ಇನ್ನು ಹಿಂದಿನ ವರ್ಷ ಭಾರೀ ಮಳೆಯಿಂದ ಹೂವಿನ ಬೆಳೆಗಳು ಹಾಳಾಗಿದ್ದವು. ಆದರೆ, ಈ ಬಾರಿ ನಾನಾ ಕಾಯಿಲೆಗಳು ಆವರಿಸಿದ್ದು, ಹೂವಿನ ಫಸಲೇ ಬರುತ್ತಿಲ್ಲ. ವಿದ್ಯುತ್ ಸಮಸ್ಯೆಯಿಂದ ಸರಿಯಾಗಿ ನೀರು ಹರಿಸಲಾಗುತ್ತಿಲ್ಲ. ಹೀಗಾಗಿ ಬೆಲೆ ಹೆಚ್ಚಾದರೂ ಫಸಲು ಬಾರದ ಕಾರಣ ನಮಗೇನೂ ಲಾಭವಿಲ್ಲ ಎಂದು ಹೂ ಬೆಳೆಗಾರರು ಹೇಳಿದ್ದಾರೆ.












Click it and Unblock the Notifications