ಚಿಕ್ಕಬಳ್ಳಾಪುರ ಮಾತ್ರವಲ್ಲ, ರಾಜ್ಯದ ಅಭಿವೃದ್ಧಿಗೆ ಸಹಕರಿಸಿ: ಸಚಿವ ಸುಧಾಕರ್ ಪರ ನಟ ದರ್ಶನ್ ಮತ ಬೇಟೆ
ಚಿಕ್ಕಬಳ್ಳಾಪುರ, ಮೇ 05: ಮೇ 10ರಂದು ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರಿಗೆ ಮತ ನೀಡುವ ಮೂಲಕ ಚಿಕ್ಕಬಳ್ಳಾಪುರ ಮಾತ್ರವಲ್ಲದೆ, ಇಡೀ ರಾಜ್ಯದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಸ್ಯಾಂಡಲ್‌ವುಡ್ ನಟ ದರ್ಶನ್ ಮನವಿ ಮಾಡಿದರು.
ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಪರ ನಗರದಲ್ಲಿ ಪ್ರಚಾರ ನಡೆಸಿದ ಅವರು, ತಾವು ಯಾವುದೇ ಪಕ್ಷ, ಜಾತಿ ವಿಚಾರಕ್ಕಾಗಿ ಇಲ್ಲಿಗೆ ಬಂದಿಲ್ಲ, ಕೇವಲ ಸ್ನೇಹಕ್ಕೆ ಬೆಲೆ ನೀಡಿ ಬಂದಿದ್ದೇನೆ. ಡಾ.ಕೆ. ಸುಧಾಕರ್ ಅವರು ತಮಗೆ ಒಳ್ಳೆಯ ಸ್ನೇಹಿತರು ಹಾಗಾಗಿ ಅವರ ಪರವಾಗಿ ಮತ ಯಾಚಿಸುತ್ತಿದ್ದೇನೆ. ನೀವು ಮತ್ತೊಮ್ಮೆ ಅವರಿಗೆ ಆಶೀರ್ವಾದ ಮಾಡಿದರೆ ಮತ್ತೆ ಅವರು ಸಚಿವರಾಗಿ ಚಿಕ್ಕಬಳ್ಳಾಪುರ ಕ್ಷೇತ್ರ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಸೇವೆ ಮಾಡಲಿದ್ದಾರೆ ಎಂದು ಹೇಳಿದರು.

ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಮಾತಿದೆ. ಅದಕ್ಕೆ ಮತ್ತೊಂದು ಸೇರಿಸಿ, ಮಾನ ಮರ್ಯಾದೆ ಇರೋನಿಗೆ ಇಡೀ ಜೆಗತ್ತೆಲ್ಲ ಎಂದಂತೆ ಎಲ್ಲರೂ ಸುಧಾಕರ್ ಅವರನ್ನು ಬೆಂಬಲಿಸುವ ಮೂಲಕ ರಾಜ್ಯದ ಅಭಿವೃದ್ಧಿಗೆ ಸಹಕರಿಸುವಂತೆ ದರ್ಶನ್ ಮನವಿ ಮಾಡಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮಾತನಾಡಿದ್ದು, ಚಿಕ್ಕಬಳ್ಳಾಪುರವನ್ನು ಈಗಾಗಲೇ ಬ್ರಾೃಂಡ್ ಆಗಿ ಪರಿವರ್ತನೆ ಮಾಡಲಾಗಿದೆ. ಬೆಂಕಿ ಉಪಕಾರಕ್ಕೂ ಬಳಸಬಹುದು. ಅದೇ ಬೆಂಕಿ ಮನೆ ಹಾಳು ಮಾಡುವ ಕೆಲಸವೂ ಮಾಡಲಿದೆ. ಅದೇ ರೀತಿ ನಾವು ಆಡುವ ಮಾತಿನಿಂದ ವ್ಯಕ್ತಿಯ ಸಂಸ್ಕಾರ ತಿಳಿಯಲಿದೆ. ಇದು ಈ ಚುನಾವಣೆಯ ಸಾರಾಂಶವಾಗಿದ್ದು, ಮಾತುಗಾರನಿಗೆ ಮಣೆ ಹಾಕದೆ ಕೆಲಸಗಾರನಾದ ಬೆಂಬಲಿಸುವಂತೆ ಮನವಿ ಮಾಡಿದರು.
ಈ ಚುನಾವಣೆ ಧರ್ಮ ಯುದ್ಧವಾಗಿದ್ದು, ಸತ್ಯ, ಧರ್ಮದ ಪರ ನಿಮ್ಮ ಮತ ಇರಬೇಕು. ಅಭಿವೃದ್ಧಿಗೆ ನಿಮ್ಮ ಮತ ನೀಡಬೇಕು. ಆಗ ಮುಂದಿನ ಐದು ವರ್ಷದಲ್ಲಿ ಚಿಕ್ಕಬಳ್ಳಾಪುರವನ್ನು ರಾಜ್ಯದಲ್ಲಿಯೇ ಮಾದರಿಯಾಗಿ ಪರಿವರ್ತನೆ ಮಡಾಲಾಗುವುದು ಎಂದು ಭರವಸೆ ನೀಡಿದರು.

ಬಲಿಜ ಸಮುದಾಯ ಬೆಂಬಲಿಸಬೇಕು: ಸುಧಾಕರ್
1994ರಲ್ಲಿ ಕಾಂಗ್ರೆಸ್ ಕಸಿದುಕೊಂಡ ಮೀಸಲಾತಿಯನ್ನು 2011ರಲ್ಲಿ ಯಡಿಯೂರಪ್ಪ ಅವರು ನೀಡಿದರು, ಇಂತಹ ಅನ್ಯಾಯ ಮಾಡಿದ ಕಾಂಗ್ರೆಸ್ ಗೆ ಬಲಿಜ ಸಮುದಾಯ ಮತ ನೀಡದೆ, ಬಲಿಜ ಸಮುದಾಯಕ್ಕಾಗಿ ಹತ್ತಾರು ಅನುಕೂಲ ಮಾಡಿರುವ ಬಿಜೆಪಿ ಬೆಂಬಲಿಸುವಂತೆ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಡಾ.ಜಿ.ವಿ. ಮಂಜುನಾಥ್ ಮನವಿ ಮಾಡಿದರು.
ಕೈವಾರ ತಾತಯ್ಯನವರ ಜಯಂತಿ, ತಾತಯ್ಯನವರ ಅಧ್ಯಯನ ಪೀಠ ಮತ್ತು ಬಲಿಜ ಅಬಿವೃದ್ಧಿ ನಿಗಮ ನೀಡಿದ್ದು ಬಿಜೆಪಿ ಸರ್ಕಾರ. ಇವುಗಳಿಗಾಗಿ ಸಂಸದ ಪಿ.ಸಿ. ಮೋಹನ್ ಮತ್ತು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರ ಶ್ರಮ ಹೆಚ್ಚಾಗಿದ್ದು, 2ಸಿ ಮೀಸಲಾತಿಯಡಿ ಶೇ.2 ರಷ್ಟು ಮೀಸಲಾತಿ ಹೆಚ್ಚಿಸಿದ್ದು ಕೂಡಾ ಬಿಜೆಪಿ ಸರ್ಕಾರ ಎಂಬುದನ್ನು ಮರೆಯಬಾರದು ಎಂದು ಹೇಳಿದರು.
ಅನುಕಂಪದ ಆಧಾರದ ಮೇಲೆ ಬಲಿಜ ಸಮುದಾಯವನ್ನು ಮರಳು ಮಾಡುವ ಯತ್ನ ನಡೆಯುತ್ತಿದೆ. ಇದು ರಾಜಕೀಯ ಕುತಂತ್ರವಾಗಿದೆ. ಇದೇ ಸುಧಾಕರ್ ಅವರ ವಿರುದ್ಧ ತಾವು ಸ್ಪರ್ಧೆ ಮಾಡಿ, ಅವರ ವಿರುದ್ಧ ಪ್ರತಿನಿತ್ಯ ಅನೇಕ ಟೀಕೆ ಮಾಡಿದರೂ ಯಾಕೆ ಪ್ರಕರಣ ದಾಖಲಿಸಲಿಲ್ಲ. ಟೀಕೆಗಳು ಆರೋಗ್ಯಕರವಾಗಿರಬೇಕು ಮತ್ತು ವೈಯಕ್ತಿಕ ನಿಂದನೆಗಳಾಗಬಾರದು. ಅದರ ಎಲ್ಲೇ ಮೀರಿದರೆ ಯಾರು ಬೇಕಾದರೂ ಪ್ರಕರಣ ದಾಖಲಿಸಲು ಸಾಧ್ಯವಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ಅವರಿಗೆ ತಿರುಗೇಟು ನೀಡಿದರು.

ಇದನ್ನೇ ಹೇಳಿಕೊಂಡು ಓಡಾಡುತ್ತಿರುವವರ ಮಾತು ನಂಬಬೇಡಿ, ಪ್ರಧಾನಿ ನರೇಂದ್ರ ಮೋದಿ ಅವರು 67 ಯೋಜನೆಗಳನ್ನು ಮಹಿಳೆಯರಿಗಾಗಿಯೇ ನೀಡಿದ್ದಾರೆ, 740 ಯೋಜನೆಗಳು ದೇಶದ ಎಲ್ಲ ವರ್ಗದ ಜನರಿಗೆ ನೀಡಿದ್ದಾರೆ. ಬಲಿಜ ಅಬಿವೃದ್ಧಿ ನಿಗಮಕ್ಕೆ 500 ಕೋಟಿ ನೀಡುವ ಬಗ್ಗೆ ಭರವಸೆ ನೀಡಿದ್ದು, ಇದರಿಂದ ಸಮುದಾಯಕ್ಕೆ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದರು.
ರಾಜ್ಯದ್ಲಲಿ ಸ್ಥಿರ ಸರ್ಕಾರ ಇದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ, ಹಾಗಾಗಿ ಈ ಬಾರಿ ರಾಜ್ಯದ್ಲಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಸತ್ಯ. ಒಂದು ಸಮುದಾಯದಿಂದ ಯಾರೂ ಗೆಲ್ಲಲು ಸಾಧ್ಯವಿಲ್ಲ, ಎಲ್ಲ ಸಮುದಾಯಗಳನ್ನು ಒಟ್ಟಾಗಿ ಕೊಂಡೊಯ್ದಾಗ ಮಾತ್ರ ಗೆಲುವು ಸಾಧ್ಯ, ಆ ಕೆಲಸವನ್ನು ನಾವು ಮಾಡುತ್ತಿದ್ದು, ನಮ್ಮ ಕೈ ಬಲಪಡಿಸುವ ಕೆಲಸವಾಗಬೇಕು ಎಂದು ಹೇಳಿದರು.












Click it and Unblock the Notifications