ಎಂಜಿಆರ್ ಕನಸು ನನಸು ಮಾಡುವುದಾಗಿ ಕಮಲ್ ಘೋಷಣೆ
ಚೆನ್ನೈ, ಡಿ. 13: ತಮಿಳುನಾಡು ವಿಧಾನಸಭಾ ಚುನಾವಣೆ ಅಧಿಕೃತವಾಗಿ ಪ್ರಚಾರ ಆರಂಭಿಸಿರುವ ನಟ ಕಮಲ್ ಹಾಸನ್ ಅವರು ಮೊದಲ ದಿನವೇ ಭರ್ಜರಿ ಆಶ್ವಾಸನೆ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ದಿವಂಗತ ಎಂಜಿ ರಾಮಚಂದ್ರನ್ ಅವರ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರಾಚೀನ ನಗರಿ ಮದುರೈಯನ್ನು ತಮಿಳುನಾಡಿನ ಎರಡನೇ ರಾಜಧಾನಿ ಮಾಡುವುದಾಗಿ ಮಕ್ಕಳ್ ನೀತಿ ಮಯ್ಯಂ(ಎಂಎನ್ಎಂ) ಮುಖ್ಯಸ್ಥ ಕಮಲ್ ಹಾಸನ್ ಘೋಷಿಸಿದ್ದಾರೆ.
Recommended Video
ತಮಿಳುನಾಡಿನ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಆಡಿಟೋರಿಯಂನಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿ ಮಾತನಾಡಿ, ಎಂಜಿ ರಾಮಚಂದ್ರನ್(ಎಐಎಡಿಎಂಕೆ ಸ್ಥಾಪಕ) ಅವರು ಮದುರೈಯನ್ನು ಎರಡನೇ ರಾಜಧಾನಿಯಾಗಿ ಅಭಿವೃದ್ಧಿಪಡಿಸುವ ಕನಸು ಹೊಂದಿದ್ದರು. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಎಂಜಿಆರ್ ಕನಸು ನನಸು ಮಾಡುತ್ತೇನೆ ಎಂದರು.

ಯುವ ಜನತೆ ಮೇಲೆ ರಾಜಕೀಯ ಭಾರಿ ಪ್ರಭಾವ ಬೀರುತ್ತಿದೆ. ಎಲ್ಲರೂ ರಾಜಕೀಯ ರಂಗಕ್ಕೆ ಧುಮುಕಬೇಕೆಂದು ನಾನು ಕರೆ ನೀಡಲ್ಲ, ಮತದಾನ ಮಾಡುವ ಮೂಲಕ ನಿಮ್ಮ ಹಕ್ಕು ಚಲಾಯಿಸುವುದು, ನಿಮ್ಮ ನಾಡು ನುಡಿ ಬಗ್ಗೆ ಅಭಿಮಾನ ಹೊಂದಿರುವುದು, ಆಡಳಿತದಲ್ಲಿರುವವರನ್ನು ಎಚ್ಚರಿಸುವುದನ್ನುರೂಢಿಸಿಕೊಂಡರೆ ಸಾಕು ಎಂದರು.
ಮದ್ಯಪಾನ ನಿಷೇಧ ಸರಿಯಲ್ಲ: ಮದ್ಯಪಾನ ನಿಷೇಧದಿಂದ ಅಕ್ರಮ ಮದ್ಯ, ಕಳಪೆ ಮದ್ಯ ಮಾರಾಟವೇ ಅಧಿಕವಾಗುತ್ತದೆ. ಹೀಗಾಗಿ ಸರ್ಕಾರಿ ಮಳಿಗೆ ಜೊತೆಗೆ ಖಾಸಗಿ ಸಂಸ್ಥೆಗಳಿಗೂ ಸಬ್ಸಿಡಿ ದರದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡುವುದೇ ಒಳ್ಳೆ ಉಪಾಯ ಎಂದರು.
ನೂತನ ಸಂಸತ್ ಭವನ ಏಕೆ?: ಇಡೀ ದೇಶ ಆರ್ಥಿಕ ಸಂಕಷ್ಟದಲ್ಲಿರುವಾಗ ಹೊಸ ಸಂಸತ್ ಭವನ ನಿರ್ಮಾಣಕ್ಕೆ ಪ್ರಧಾನಿ ಮೋದಿ ಅವರು ಶಂಕುಸ್ಥಾಪನೆ ಮಾಡಿದ್ದೇಕೆ ಎಂದು ಕಮಲ್ ಹಾಸನ್ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.

ನೂತನ ಸಂಸತ್ ಭವನದ ಕಟ್ಟಡಕ್ಕೆ ಇತ್ತೀಚೆಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ಮೋದಿಯವರಿಗೆ ದೇಶ ಆರ್ಥಿಕ ಸಂಕಷ್ಟದಲ್ಲಿರುವಾಗ ಹೊಸ ಸಂಸತ್ ಭವನದ ನಿರ್ಮಾಣ ಬೇಕೇ? ಎಂದು ಟ್ವಿಟರ್ ನಲ್ಲಿ ಪ್ರಶ್ನಿಸಿದ್ದಾರೆ. ಕೊರೊನಾದಿಂದ ದೇಶದ ಜನತೆ ಸಂಕಷ್ಟದಲ್ಲಿರುವಾಗ ಸುಮಾರು 1000 ಕೋಟಿ ರೂ. ಸಂಸತ್ ಭವನದ ನಿರ್ಮಾಣ ನಿರ್ಧಾರ ಸರಿಯೇ? ಗ್ರೇಟ್ ವಾಲ್ ಆಫ್ ಚೈನಾ ನಿರ್ಮಾಣ ಮಾಡುವಾಗ ಸಾವಿರಾರು ಜನ ಸಾವನ್ನಪ್ಪಿದ್ದನ್ನು ಅಲ್ಲಿನ ಆಡಳಿತಗಾರರು ಸಮರ್ಥಿಸಿಕೊಂಡಿದ್ದರು. ನೂತನ ಸಂಸತ್ ಭವನ ನಿರ್ಮಾಣ ಮಾಡಿ ಯಾರನ್ನು ರಕ್ಷಿಸುತ್ತೀದ್ದೀರಿ, ಯಾವ ರೀತಿ ಸಮರ್ಥನೆ ನೀಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ಡಿ. 13 ರಿಂದ 16ರವರೆಗೆ ಮೊದಲ ಹಂತದಲ್ಲಿ ಕಮಲ್ ಹಾಸನ್ ಅವರು ಪ್ರಚಾರ ನಡೆಸಲಿದ್ದಾರೆ. ನಾಲ್ಕು ದಿನಗಳ ಅವಧಿಯ ಪ್ರಚಾರದಲ್ಲಿ ಅವರು ಮದುರೈ, ಥೇಣಿ, ದಿಂಡಿಗಲ್, ವಿರುದ್ಧನಗರ್, ತಿರುನೆಲ್ವೇಲಿ, ತೂತುಕುಡಿ ಮತ್ತು ಕನ್ಯಾಕುಮಾರಿ ಜಿಲ್ಲೆಗಳಲ್ಲಿ ಪ್ರಚಾರ ನಡೆಸಲಿದ್ದಾರೆ.












Click it and Unblock the Notifications