ಟ್ವಿಟರ್ ನಲ್ಲಿ ರಾಜೀನಾಮೆ ಘೋಷಿಸಿದ ದಿ ಹಿಂದೂ ಎಡಿಟರ್
ಚೆನ್ನೈ, ಅ.22: ದೇಶದ ಪ್ರಮುಖ ದಿನಪತ್ರಿಕೆ 'ದಿ ಹಿಂದೂ' ಎಡಿಟರ್ ಸಿದ್ದಾರ್ಥ್ ವರದರಾಜನ್ ಅವರು ಸಂಸ್ಥೆ ತೊರೆದಿದ್ದಾರೆ. ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಮೂಲಕ ಮಂಗಳವಾರ ರಾಜೀನಾಮೆ ಘೋಷಿಸಿದ್ದಾರೆ.
ಕಸ್ತೂರಿ ಹಾಗೂ ಸನ್ಸ್ ಲಿ ಸ್ವಾಮ್ಯದ ದಿ ಹಿಂದೂ ಸಮೂಹ ಪಬ್ಲಿಕೇಷನ್ಸ್ ಸಂಸ್ಥೆ ಚೇರ್ಮನ್ ಎನ್ ರಾಮ್ ಅವರು ಸಂಪಾದಕ ಸಿದ್ದಾರ್ಥ್ ವರದರಾಜನ್ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಅರುಣ್ ಅನಂತ್ ಅವರು ಹಿಂದೂ ಪತ್ರಿಕೆ ಮೌಲ್ಯಗಳಿಗೆ ಧಕ್ಕೆ ಬರುವಂತೆ ನಡೆದುಕೊಂಡಿದ್ದರಿಂದ ಇಬ್ಬರನ್ನು ಸಂಸ್ಥೆಯಿಂದ ಹೊರ ಕಳಿಸಲಾಗಿದೆ ಎಂದಿದ್ದಾರೆ.

ಸುಮಾರು 135 ವರ್ಷ ಇತಿಹಾಸ ಹೊಂದಿರುವ ಇಂಗ್ಲೀಷ್ ದಿನಪತ್ರಿಕೆ ದಿ ಹಿಂದೂವಿನಲ್ಲಿ ಅನೇಕ ಬದಲಾವಣೆಗಳು ಕಾಣಿಸುತ್ತಿದೆ. ಮಂಗಳವಾರ ನಡೆದ ಉನ್ನತ ಮಟ್ಟದ ಸಭೆ ನಂತರ ಪ್ರಧಾನ ಸಂಪಾದಕರಾಗಿದ್ದ ಸಿದ್ದಾರ್ಥ್ ಅವರನ್ನು ಹಿರಿಯ ಅಂಕಣಕಾರ ಹಾಗೂ contributing editor ಸ್ಥಾನಕ್ಕಿಳಿಸಲು ನಿರ್ಧರಿಸಲಾಯಿತು. ಜತೆಗೆ ಸಿಇಒ ಅನಂತ್ ಅವರನ್ನು ಹುದ್ದೆ ತೊರೆಯುವಂತೆ ಸೂಚಿಸಲಾಯಿತು.
ಬೋರ್ಡ್ ನಿರ್ಣಯ ಖಂಡಿಸಿದ ಸಿದ್ದಾರ್ಥ್ ಸಂಜೆ ವೇಳೆಗೆ ಟ್ವಿಟ್ಟರ್ ನಲ್ಲಿ ತಮ್ಮ ರಾಜೀನಾಮೆ ಘೋಷಿಸಿದರು.
With The Hindu's owners deciding to revert to being a family run and edited newspaper, I am resigning from The Hindu with immediate effect.
— Siddharth (@svaradarajan) October 21, 2013
ಹೊಸ ಬದಲಾವಣೆಯಂತೆ ಎನ್ ರವಿ ಅವರು ಹಿಂದೂ ಪತ್ರಿಕೆಗೆ ಎಡಿಟರ್ ಇನ್ ಚೀಫ್ ಹಾಗೂ ಹಿಂದೂ ಸೆಂಟರ್ ಫಾರ್ ಪಾಲಿಟಿಕ್ಸ್ ಹಾಗೂ ಪಬ್ಲಿಕ್ ಪಾಲಿಸಿ ವಿಭಾಗದ ನಿರ್ದೇಶಕಿಯಾಗಿದ್ದ ಮಾಲಿನಿ ಪಾರ್ಥಸಾರಥಿ ಅವರನ್ನು ಎಡಿಟರ್ ಸ್ಥಾನದಲ್ಲಿ ಕೂರಿಸಲಾಗಿದೆ.
ಸಿದ್ದಾರ್ಥ್ ಹಾಗೂ ಅನಂತ್ ಅವರ ಸ್ಥಾನಪಲ್ಲಟಕ್ಕೆ 12 ಮಂದಿ ಬೋರ್ಡ್ ನಲ್ಲಿ 6 ಜನ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಆದರೆ, ಎನ್ ರಾಮ್ ತಮ್ಮ ನಿರ್ಣಯಕ್ಕೆ ಬದ್ಧರಾಗಿ ಪತ್ರಿಕೆಯಲ್ಲಿ ಇಬ್ಬರು ಟಾಪ್ ಅಧಿಕಾರಿಗಳು ಹಿಂದೂ ಸಂಸ್ಥೆ ತೊರೆಯುತ್ತಿರುವ ಬಗ್ಗೆ ಪ್ರಕಟಣೆ ಹೊರಡಿಸಿಬಿಟ್ಟಿದ್ದಾರೆ.












Click it and Unblock the Notifications