ನೀಟ್ ವಿರುದ್ಧ 'ಸುಪ್ರೀಂ' ಮೆಟ್ಟಿಲೇರಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ
ಚೆನ್ನೈ, ಸೆಪ್ಟೆಂಬರ್ 1: 'ನೀಟ್' (NEET) ಪರೀಕ್ಷೆ ವಿರುದ್ಧ ಕಾನೂನು ಸಮರ ನಡೆಸುತ್ತಿದ್ದ ತಮಿಳುನಾಡಿನ ವಿದ್ಯಾರ್ಥಿನಿ ಅನಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕೆಯ ಆತ್ಮಹತ್ಯೆ ಹಲವರಿಗೆ ಆಘಾತ ತಂದಿದೆ. ತಮಿಳುನಾಡಿನ ಅರಿಯಲೂರು ಮೂಲದ ಅನಿತಾ NEET 2017 ತಮಿಳುನಾಡಿನಲ್ಲಿ ಜಾರಿ ಮಾಡುವುದರ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.
ಆಕೆ ಹನ್ನೆರಡನೇ ತರಗತಿ ಪರೀಕ್ಷೆಯಲ್ಲಿ 1200 ಅಂಕಗಳಿಗೆ 1176 ಅಂಕ ಪಡೆದಿದ್ದರು. ಕಾರ್ಮಿಕರೊಬ್ಬರ ಮಗಳಾದ ಅನಿತಾ ತೀರಾ ಬಡ ಕುಟುಂಬದ ಹಿನ್ನೆಲೆಯವರಾಗಿದ್ದರು. ತಮಿಳುನಾಡು ರಾಜ್ಯದ ಪಠ್ಯಕ್ರಮವನ್ನು ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಸಿಬಿಎಸ್ ಇ ಪಠ್ಯಕ್ರಮ ಅನುಸರಿಸಿದ ನೀಟ್ ಪರೀಕ್ಷೆ ಕಷ್ಟವಾಗುತ್ತದೆ ಎಂಬುದು ಅನಿತಾ ಅವರ ವಾದವಾಗಿತ್ತು. ಇದಕ್ಕೆ ಇತರ ವಿದ್ಯಾರ್ಥಿಗಳ ಬೆಂಬಲ ಸಹ ಇತ್ತು.

ವೈದ್ಯಕೀಯ ಸೀಟು ಸಿಗದ ಕಾರಣಕ್ಕೆ ಆತ್ಮಹತ್ಯೆಯಂಥ ನಿರ್ಧಾರ ತೆಗೆದುಕೊಂಡ ಅನಿತಾ ಬಗ್ಗೆ ಅನೇಕರು ಮರುಕ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳ ಹಿತ ಕಾಪಾಡಲು ತಮಿಳುನಾಡು ಸರಕಾರ ವಿಫಲವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ತಮಿಳುನಾಡು ಸರಕಾರ ನೀಟ್ ಪರೀಕ್ಷೆಯಿಂದ ವಿದ್ಯಾರ್ಥಿಗಳಿಗೆ ವಿನಾಯಿತಿ ಸಿಗುವಂತೆ ಸುಗ್ರೀವಾಜ್ಞೆ ಹೊರಡಿಸಿತ್ತು.
ಆದರೆ, ಅದಕ್ಕೆ ರಾಷ್ಟ್ರಪತಿಗಳ ಅಂಕಿತ ಪಡೆಯುವಲ್ಲಿ ವಿಫಲವಾಗಿತ್ತು. ಈ ಮಧ್ಯೆ ನೀಟ್ ಪರೀಕ್ಷೆಯ ಅಂಕಗಲ ಆಧಾರದಲ್ಲಿಯೇ ಪ್ರವೇಶ ಪ್ರಕ್ರಿಯೆ ಶುರು ಮಾಡುವಂತೆ ಸುಪ್ರೀಂ ಕೋರ್ಟ್ ತಿಳಿಸಿತ್ತು. ಆಗಸ್ಟ್ ಆರಂಭದಲ್ಲಿ ಉತ್ತಮ ಅಂಕ ಪಡೆದವರ ಪಟ್ಟಿ ಬಿಡುಗಡೆ ಮಾಡಿದ ತಮಿಳುನಾಡು ಸರಕಾರ, ಎಂಬಿಬಿಎಸ್ ಹಾಗೂ ಬಿಡಿಎಸ್ ಕೋರ್ಸ್ ಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭಿಸಿತ್ತು.












Click it and Unblock the Notifications