ಕರುಣಾನಿಧಿ ಅನಾರೋಗ್ಯ: ಆಘಾತ ತಾಳಲಾರದೆ 21 ಡಿಎಂಕೆ ಕಾರ್ಯಕರ್ತರ ಸಾವು
Recommended Video

ಚೆನ್ನೈ, ಆಗಸ್ಟ್ 02: ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಆಘಾತಗೊಂಡ ಅವರ ಅಭಿಮಾನಿಗಳು ಮತ್ತು ಡಿಎಂಕೆ ಕಾರ್ಯಕರ್ತರಲ್ಲಿ 21 ಜನ ಸಾವಿಗೀಡಾಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಜುಲೈ 28 ರಂದು ಅವರು ಆಸ್ಪತ್ರೆಗೆ ಸೇರಿದ ಲಾಗಾಯ್ತೂ ತಮಿಳುನಾಡಿನಾದ್ಯಂತ ಅಲ್ಲಲ್ಲಿ ಅವರ ಅಭಿಮಾನಿಗಳ ಸಾವಿನ ಸುದ್ದಿ ಕೇಳಿಬರುತ್ತಿದ್ದು, ನೆಚ್ಚಿನ ನಾಯಕನ ಅನಾರೋಗ್ಯದ ಆಘಾತದಿಂದ ಇದುವರೆಗೂ ಸಾವಿಗೀಡಾದವರ ಸಂಖ್ಯೆ 21 ಕ್ಕೇರಿದೆ.
ಕಳೆದ ನಾಲ್ಕೈದು ದಿನಗಳಿಂದ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿನ ತೀವ್ರ ನಿಗಾ ಘಟಕದಲ್ಲೇ ಚಿಕಿತ್ಸೆ ಪಡೆಯುತ್ತಿರುವ 94 ವರ್ಷದ ಕರುಣಾನಿಧಿ ಅವರ ಆರೋಗ್ಯ ಸ್ಥಿರವಾಗಿದೆ ಮತ್ತು ಅವರು ಚೇತರಿಸಿಕೊಳ್ಳುತ್ತಿದ್ದಾರೆ, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಕಾವೇರಿ ಆಸ್ಪತ್ರೆಯ ವೈದ್ಯರು ಈಗಾಗಲೇ ತಿಳಿಸಿದ್ದಾರೆ.

ಜ್ವರ ಮತ್ತು ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದ ಕರುಣಾನಿಧಿ ಅವರ ರಕ್ತದೊತ್ತಡ ಕಡಿಮೆಯಾಗಿದ್ದರಿಂದ ಅವರನ್ನು ಜು.28 ರ ಬೆಳಿಗ್ಗೆ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕರುಣಾನಿಧಿ ಅವರನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ನಟ ರಜನೀಕಾಂತ್ ಸೇರಿದಂತೆ ಗಣ್ಯರು ಭೇಟಿ ಮಾಡಿದ್ದು, ಅವರ ಅಭಿಮಾನಿಗಳ ದಂಡು ಆಸ್ಪತ್ರೆ ಎದುರು ಕಳೆದ ನಾಲ್ಕೈದು ದಿನಗಳಿಂದ ಊಟ-ನಿದ್ದೆ ಬಿಟ್ಟು ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದೆ.












Click it and Unblock the Notifications