ಕಾವೇರಿ ವಿಚಾರದಲ್ಲಿ ಮತ್ತೆ ಕ್ಯಾತೆ ತೆಗೆದ ಮಿಸ್ ಜಯಮ್ಮ
ಚೆನ್ನೈ, ಜೂ. 05 : ಜಯಲಲಿತಾ ಅವರು ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಕಾವೇರಿ ನದಿ ನೀರಿನ ವಿಚಾರದಲ್ಲಿ ಕ್ಯಾತೆ ತೆಗೆದಿದ್ದಾರೆ. ಕಾವೇರಿ ನದಿಗೆ ಮಲಿನ ನೀರನ್ನು ಬಿಡುತ್ತಿದ್ದಾರೆ ಎಂದು ಆರೋಪಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಲು ತೀರ್ಮಾನಿಸಿದ್ದಾರೆ.
ಜಯಲಲಿತಾ ಅಧ್ಯಕ್ಷತೆಯಲ್ಲಿ ಗುರುವಾರ ಸಂಜೆ ಚೆನ್ನೈನಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಕರ್ನಾಟಕ ಕಾವೇರಿ ನದಿಗೆ ಮಲಿನ ನೀರನ್ನು ಹರಿದು ಬಿಡುತ್ತಿದೆ. ಇದನ್ನು ನಿಲ್ಲಿಸುವಂತೆ ಕರ್ನಾಟಕಕ್ಕೆ ಸೂಚನೆ ನೀಡಬೇಕು ಎಂದು ತಮಿಳುನಾಡು ಸುಪ್ರೀಂ ಮೆಟ್ಟಿಲೇರಲಿದೆ.

ಕರ್ನಾಟಕದ ಕೆಲವು ನಗರಗಳಿಂದ ಕಾವೇರಿ ನದಿಗೆ ಚರಂಡಿ ನೀರು ಸೇರುತ್ತಿದೆ. ತಮಿಳುನಾಡಿನಲ್ಲಿ ಕಾವೇರಿ ನೀರನ್ನು ಕೃಷಿ ಮತ್ತು ಕುಡಿಯಲು ಬಳಸುತ್ತಿದ್ದಾರೆ. ಆದ್ದರಿಂದ ಮಲಿನ ನೀರನ್ನು ಬಿಡದಂತೆ ಸೂಚನೆ ನೀಡಬೇಕು ಎಂದು ಕೋರ್ಟ್‌ಗೆ ಅರ್ಜಿ ಸಲ್ಲಿಸಲಿದೆ. [ಕಾನೂನು ಚೌಕಟ್ಟಿನಲ್ಲಿ ಮೇಕೇದಾಟಿನಲ್ಲಿ ಅಣೆಕಟ್ಟು ನಿರ್ಮಾಣ]
ಕೋರ್ಟಿಗೆ ಹೋದ ವಕೀಲರು : ಚೆನ್ನೈ ಮೂಲದ ವಕೀಲರೊಬ್ಬರು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ದಕ್ಷಿಣ ಪೀಠಲ್ಲಿ ಕಾವೇರಿ ನದಿಗೆ ಮಲಿನ ನೀರು ಬಿಡುತ್ತಿರುವ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯನ್ನು ವಿಚಾರಣೆಗೆ ನಡೆಸಿದ ಕೋರ್ಟ್ ಕೇಂದ್ರ ಸರ್ಕಾರ, ಕರ್ನಾಟಕ, ತಮಿಳುನಾಡು ಸರ್ಕಾರ ಸೇರಿದಂತೆ ಒಟ್ಟಾರೆ 28 ಮಂದಿಗೆ ನೋಟಿಸ್ ಜಾರಿಗೊಳಿಸಿ, ಜುಲೈ 28ಕ್ಕೆ ವಿಚಾರಣೆ ಮುಂದೂಡಿದೆ. [ತಮಿಳುನಾಡಿಗೆ 26 ಟಿಎಂಸಿ ನೀರು ಬಿಡಬೇಕು]
ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಕರ್ನಾಟಕ ಸರ್ಕಾರ ಜಯಲಲಿತಾ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಿದ್ಧವಾಗಿದ್ದರೆ. ತಮಿಳುನಾಡು ಸರ್ಕಾರ ಕಾವೇರಿ ಖ್ಯಾತೆ ತೆಗೆದಿದೆ. ಅತ್ತ ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾ ಭಾರತಿ ಅವರು ಕಾವೇರಿ ವಿವಾದವನ್ನು ಪ್ರಧಾನಿ ಕಚೇರಿ ಬಗೆಹರಿಸಲಿದೆ ಎಂದು ಹೇಳಿಕೆ ನೀಡಿದ್ದಾರೆ.












Click it and Unblock the Notifications