ಗುಟ್ಕಾ ಹಗರಣ: ಚೆನ್ನೈನಲ್ಲಿ ಗಣ್ಯಾತಿಗಣ್ಯರ ಮನೆ ಮೇಲೆ ಸಿಬಿಐ ದಾಳಿ
ಚೆನ್ನೈ, ಸೆಪ್ಟೆಂಬರ್ 05: ಗುಟ್ಕಾ ಹಗರಣಕ್ಕೆ ಸಂಬಂಧಿಸಿದಂತೆ ಚೆನ್ನೈನ ವಿವಿಧೆಡೆಗಳಲ್ಲಿ ಸಿಬಿಐ ತಂಡವು ಇಂದು ದಾಳಿ ನಡೆಸಿದೆ. ತಮಿಳುನಾಡಿನ ಆರೋಗ್ಯ ಸಚಿವ ಸಿ. ವಿಜಯ ಭಾಸ್ಕರ್, ಡಿಜಿಪಿ ಟಿ.ಕೆ. ರಾಜೇಂದ್ರ ಹಾಗೂ ಇನ್ನಿತರ ಉನ್ನತ ಅಧಿಕಾರಿಗಳ ನಿವಾಸದ ಮೇಲೆ ದಾಳಿ ನಡೆಸಲಾಗಿದೆ.
ಬೆಳಗ್ಗೆ 7 ಗಂಟೆಗೆ ಆರಂಭವಾದ ದಾಳಿ ಏಕಕಾಲಕ್ಕೆ 40 ಕಡೆಗಳಲ್ಲಿ ಮುಂದುವರೆದಿದೆ.
ತಮಿಳುನಾಡಿನಲ್ಲಿ ಗುಟ್ಕಾ ಮಾರಾಟ ನಿಷೇಧಿಸಲಾಗಿದೆ. ಆದರೆ, ಅಕ್ರಮವಾಗಿ ತಂಬಾಕು ಮಾರಾಟಕ್ಕೆ ಉತ್ತೇಜನ ನೀಡಿರುವ ಆರೋಪಗಳು ಕೇಳಿ ಬಂದಿತ್ತು. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸಿಬಿಐಗೆ ಏಪ್ರಿಲ್ ತಿಂಗಳಿನಲ್ಲಿ ಮದ್ರಾಸ್ ಹೈಕೋರ್ಟ್ ಸೂಚಿಸಿತ್ತು.

2016ರಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಮಾಧವ್ ರಾವ್ ಅವರ ಕಚೇರಿಯಲ್ಲಿ ಡೈರಿ ಸಿಕ್ಕಿತ್ತು. ಸುಮಾರು 250 ಕೋಟಿ ರು ಗೂ ಅಧಿಕ ತೆರಿಗೆ ವಂಚನೆ ಜಾಲ ಕಂಡು ಬಂದಿತು. ಅಕ್ರಮ ಮಾರಾಟಕ್ಕಾಗಿ 40 ಕೋಟಿ ರುಗೂ ಅಧಿಕ ಮೊತ್ತದ ಲಂಚ ಅದಲು ಬದಲಾಗಿದೆ.
ಎಡಿಎಂ ಬ್ರ್ಯಾಂಡ್ ಗುಟ್ಕಾ ತಯಾರಿಸುವ ತಂಬಾಕು ಉದ್ಯಮಿ ಮಾಧವ್ ರಾವ್ ಅವರಿಗೆ ಸೇರಿದ ಆಸ್ತಿ ಮೇಲೆ ದಾಳಿ ನಡೆಸಿದ ನಂತರ ಅಲ್ಲಿ ಸಿಕ್ಕ ಡೈರಿಯಲ್ಲಿ ಲಂಚ ಪಡೆದಿದ್ದ ರಾಜಕೀಯ ನಾಯಕರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರಿತ್ತು. ಕಾಳಸಂತೆಯಲ್ಲಿ ಮಾರಾಟ ಮಾಡಲು ವ್ಯವಸ್ಥಿತ ಜಾಲವನ್ನು ರೂಪಿಸಲಾಗಿತ್ತು.
ಮಾಜಿ ಪೊಲೀಸ್ ಆಯುಕ್ತ ಎಸ್. ಜಾರ್ಜ್, ಆಹಾರ ಸಂರಕ್ಷಣೆ ಇಲಾಖೆ ಮತ್ತು ಮಾರಾಟ ತೆರಿಗೆ ಅಧಿಕಾರಿಗಳ ನಿವಾಸ ಸೇರಿದಂತೆ 40 ಕಡೆಗಳಲ್ಲಿ ದಾಳಿ ಮಾಡಿ, ಅಪಾರ ಪ್ರಮಾಣದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.












Click it and Unblock the Notifications