
39 ಕೋಟಿ ರೂ ವೆಚ್ಚದಲ್ಲಿ ಕರುಣಾನಿಧಿ ಸ್ಮಾರಕ ನಿರ್ಮಾಣ ಘೋಷಣೆ
ಚೆನ್ನೈ, ಆಗಸ್ಟ್ 24: ಡಿಎಂಕೆ ನಾಯಕ ಹಾಗೂ ಮಾಜಿ ಸಿಎಂ ದಿವಂಗತ ಎಂ. ಕರುಣಾನಿಧಿ ಸ್ಮರಣಾರ್ಥ ಚೆನ್ನೈನ ಮರಿನಾದಲ್ಲಿನ ಕಾಮರಾಜರ್ ಸಲೈನಲ್ಲಿ 39 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಮಾರಕ ನಿರ್ಮಾಣ ಮಾಡುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮಂಗಳವಾರ ಘೋಷಣೆ ಮಾಡಿದ್ದಾರೆ.
'ಆಧುನಿಕ ತಮಿಳುನಾಡು' ನಿರ್ಮಾಣಕ್ಕೆ ಕರುಣಾನಿಧಿ ಅವರು ನೀಡಿರುವ ಕೊಡುಗೆಯ ಸ್ಮರಣಾರ್ಥ ಸ್ಮಾರಕ ನಿರ್ಮಾಣ ಮಾಡುತ್ತಿರುವುದಾಗಿ ಸ್ಟಾಲಿನ್ ತಿಳಿಸಿದ್ದಾರೆ.
ಪ್ರಸಿದ್ಧ ಮರೀನಾ ಕಡಲ ತೀರದಲ್ಲಿ ಎರಡು ಎಕರೆ 23 ಗುಂಟೆಯಲ್ಲಿ ಈ ಸ್ಮಾರಕ ನಿರ್ಮಾಣ ಮಾಡಲಾಗುವುದು ಎಂದು ರಾಜ್ಯ ವಿಧಾನಸಭೆಗೆ ಸ್ಟಾಲಿನ್ ವಿವರ ನೀಡಿದರು.
ತಮಿಳುನಾಡಿನಲ್ಲಿ ಸಮಾಜ ಕಲ್ಯಾಣ, ಸಾರಿಗೆ, ಸಾಹಿತ್ಯ, ಶಿಕ್ಷಣ, ನಗರೀಕರಣ ಮತ್ತು ಮೂಲಸೌಕರ್ಯ ಅಭಿವೃದ್ಧಿಯಂಥ ವಿವಿಧ ಕ್ಷೇತ್ರಗಳಿಗೆ ಕರುಣಾನಿಧಿಯವರು ನೀಡಿದ ಕೊಡುಗೆ ಸ್ಮರಿಸಿದ ಸ್ಟಾಲಿನ್, ನನ್ನ ತಂದೆ ಹಾಗೂ ಡಿಎಂಕೆ ಧುರೀಣ ಕರುಣಾನಿಧಿ ಅವರು 'ಆಧುನಿಕ ತಮಿಳುನಾಡಿನ ಶಿಲ್ಪಿ' ಎಂದು ಕರೆದಿದ್ದಾರೆ.
ಅರ್ಧ ಶತಮಾನದವರೆಗೂ ಸುದ್ದಿಯಲ್ಲಿದ್ದ ಕರುಣಾನಿಧಿ ಅವರು ಆಗಸ್ಟ್ 7, 2018ರಲ್ಲಿ ಚಿರನಿದ್ರೆಗೆ ಜಾರಿದರು ಎಂದ ಸ್ಟಾಲಿನ್, ಅವರ ಸಾವಿಗೂ ಮುನ್ನ ತಮಿಳು ಸಮುದಾಯಕ್ಕಾಗಿ ಅವರು ಸಾಕಷ್ಟು ಕಾರ್ಯಗಳನ್ನು ಮಾಡಿದರು ಎಂದು ಹೇಳಿದರು.
ಮಾಜಿ ಸಿಎಂ ಪುತ್ರರು ಹಾಲಿ ಸಿಎಂ ಆಗಿರುವ ದೇಶದ ಐದು ರಾಜ್ಯಗಳು
'ಕರುಣಾನಿಧಿಯವರಂಥ ನಾಯಕನನ್ನು ದೇಶದಲ್ಲೇ ಕಾಣಲು ಸಾಧ್ಯವಿಲ್ಲ. ಚುನಾವಣೆಯಲ್ಲಿ ಹದಿಮೂರು ಬಾರಿ ಸ್ಪರ್ಧಿಸಿದರೂ ಒಂದು ಬಾರಿ ಕೂಡ ಸೋಲನ್ನು ಕಂಡಿಲ್ಲ. ತಮ್ಮ 80 ವರ್ಷದ ರಾಜಕೀಯ ಜೀವನದಲ್ಲಿ 60 ವರ್ಷ ವಿಧಾನಸಭಾ ಸದಸ್ಯರಾಗಿದ್ದರು' ಎಂದರು.
'ತಾಯ್ನಾಡು ತಮಿಳುನಾಡಿಗಾಗಿ ಅವರು ಮಾಡಿದ ಮಹಾನ್ ಕಾರ್ಯವನ್ನು ಗುರುತಿಸಲು ಹಾಗೂ ಅವರ ಸಾಧನೆಗಳನ್ನು ಭವಿಷ್ಯದ ಪೀಳಿಗೆಗೆ ತೋರಲು ಡಿಎಂಕೆ ಸಂಸ್ಥಾಪಕ ಅಣ್ಣಾದೊರೈ ಅವರ ಸ್ಮಾರಕದ ಪಕ್ಕದಲ್ಲೇ ಕರುಣಾನಿಧಿ ಅವರ ಸ್ಮಾರಕವನ್ನು 39 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು' ಎಂದು ಸ್ಟಾಲಿನ್ ವಿವರಿಸಿದರು.
ಈ ಸ್ಮಾರಕ ಕರುಣಾನಿಧಿ ಅವರ ಜೀವನಚರಿತ್ರೆಯನ್ನು ತಿಳಿಸುವಂತಿರುತ್ತದೆ. ತಮಿಳುನಾಡು ರಾಜಕೀಯ, ಅಭಿವೃದ್ಧಿಯಲ್ಲಿ ಅವರ ಪಾತ್ರವನ್ನು ಸ್ಮರಿಸುವಂತಿರುತ್ತದೆ ಎಂದಿದ್ದಾರೆ.
ನಾನು ಕಲೈನಾರ್ ಮಗ, ಇದಕ್ಕೆಲ್ಲ ಹೆದರುವುದಿಲ್ಲ: ಅಳಿಯ ಮೇಲೆ ಐಟಿ ದಾಳಿಗೆ ಸ್ಟಾಲಿನ್ ತಿರುಗೇಟು
1957ರಿಂದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕರುಣಾನಿಧಿಯವರು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದವರು. 2018ರಲ್ಲಿ ತಮ್ಮ 94ನೇ ವಯಸ್ಸಿನಲ್ಲಿ ಸಾವನ್ನಪ್ಪಿದರು. ಅವರು ಸತ್ತ ನಂತರದ ಮೂರನೇ ವರ್ಷದಲ್ಲಿ ಸ್ಮಾರಕ ನಿರ್ಮಾಣ ಘೋಷಣೆಯನ್ನು ಅವರ ಪುತ್ರ, ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಮಾಡಿದ್ದಾರೆ.
Recommended Video
ಘೋಷಣೆಗೆ ವಿರೋಧ ಪಕ್ಷ ಸ್ವಾಗತ
ಈ ಘೋಷಣೆಯನ್ನು ವಿರೋಧಪಕ್ಷ ಎಐಎಡಿಎಂಕೆ ಸ್ವಾಗತಿಸಿದೆ. 'ರಾಜ್ಯಕ್ಕೆ ಹಲವು ಕಲ್ಯಾಣ ಯೋಜನೆಗಳನ್ನು ಕರುಣಾನಿಧಿಯವರು ತಂದರು. ಕರುಣಾನಿಧಿ ಸಿನಿಮಾ ಡೈಲಾಗ್‌ಗಳು ಕೂಡ ರಾಜ್ಯದಲ್ಲಿ ಹಿಂದುಳಿದ ಸಮುದಾಯ ಮುಂದೆ ಬರಲು ಸಹಾಯ ಮಾಡಿದವು. ಅವರ ನಾಯಕತ್ವದಲ್ಲಿ ಡಿಎಂಕೆ ಹಾಗೂ ಎಐಎಡಿಎಂಕೆ ಸಾಕಷ್ಟು ಪಾಠಗಳನ್ನು ಕಲಿತಿವೆ' ಎಂದು ಒ ಪನ್ನೀರ್‌ಸೆಲ್ವಂ ಹೊಗಳಿದರು.