ವಿಡಿಯೋಗೆ ಪೋಸ್ ನೀಡುವಾಗ ಜಾರಿ ಬಿದ್ದು ಜಲಪಾತದಲ್ಲಿ ಕೊಚ್ಚಿಹೋದ ಯುವಕ
ಚೆನ್ನೈ, ಆಗಸ್ಟ್ 4: ದೇಶಾದ್ಯಂತ ಮಳೆ ಆರ್ಭಟ ಜೋರಾಗಿದೆ. ಹಳ್ಳ ಕೊಳ್ಳಗಳು, ನದಿಗಳು ಉಕ್ಕಿ ಹರಿಯುತ್ತಿವೆ. ಜಲಪಾತಗಳು ಭೋರ್ಗರೆಯುತ್ತಿವೆ. ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಪ್ರವಾಸಿಗರು, ನದಿ, ಸಮುದ್ರ, ಜಲಪಾತಗಳಿಗೆ ಭೇಟಿ ನೀಡುತ್ತಾರೆ. ಆದರೆ ಇಂತಹ ಪ್ರದೇಶಗಳಲ್ಲಿ ನೀವು ಜಾಗರೂಕರಾಗಿರಬೇಕು, ಇಲ್ಲವಾದಲ್ಲಿ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ.
ಅದರಲ್ಲೂ ಜಲಪಾತಗಳು ರುದ್ರ ರಮಣೀಯವಾಗಿ ಹರಿಯುತ್ತವೆ. ಇಂತಹ ಸಮಯದಲ್ಲಿ ಜಲಪಾತಗಳ ಸಮೀಪ ಹೋಗುವುದು ಅಪಾಯಕಾರಿ, ತಮಿಳುನಾಡಿನಲ್ಲಿ ಯುವಕನೊಬ್ಬ ಅಪಾಯವನ್ನೂ ಲೆಕ್ಕಿಸದೇ ಜಲಪಾತದ ಬಳಿ ಫೋಟೋಗೆ ಪೋಸ್ ಕೊಡಲು ಹೋಗಿ ಜಾರಿ ಬಿದ್ದಿದ್ದಾನೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದಿಂಡುಗಲ್ ಜಿಲ್ಲೆಯ ಕೊಡೈಕೆನಾಲ್ ಬಳಿ ವಿಡಿಯೋಗೆ ಪೋಸ್ ಮಾಡುತ್ತಿದ್ದಾಗ ಜಲಪಾತಕ್ಕೆ ಬಿದ್ದು ಕೊಚ್ಚಿ ಹೋಗಿದ್ದಾನೆ. ನಾಪತ್ತೆಯಾಗಿರುವ ವ್ಯಕ್ತಿಗಾಗಿ ಇನ್ನೂ ಹುಡುಕಾಟ ನಡೆಸಲಾಗುತ್ತಿದೆ.

ಕೊಚ್ಚಿ ಹೋಗಿರುವ ವ್ಯಕ್ತಿಯನ್ನು ಅಜಯ್ ಪಾಂಡಿಯನ್ ಎಂದು ಗುರುತಿಸಲಾಗಿದೆ. ಆ ವ್ಯಕ್ತಿ ತನ್ನ ಇನ್ನೊಬ್ಬ ಸ್ನೇಹಿತನೊಂದಿಗೆ ಪುಲ್ಲವೇಲಿ ಜಲಪಾತಕ್ಕೆ ಹೋಗಿದ್ದ. ಅಜಯ್ ತಾಂಡಿಕುಡಿಯ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ.
ಫೋಟೊ ಹುಚ್ಚಿಗೆ ಅಪಾಯ ತಂದುಕೊಳ್ಳಬೇಡಿ
ಇಡೀ ಘಟನೆ ಮೊಬೈಲ್‌ನಲ್ಲಿ ಸೆರೆಯಾಗಿದೆ. ಅಜಯ್ ಚಿತ್ರಗಳನ್ನು ತೆಗೆಯುತ್ತಿದ್ದ ಅವನ ಸ್ನೇಹಿತ ಕ್ಯಾಮೆರಾದಲ್ಲಿ ಅಜಯ್ ಬೀಳುವ ದೃಶ್ಯ ಸೆರಯಾಗಿದೆ. ಅಜಯ್ ತನ್ನ ಸ್ನೇಹಿತನನ್ನು ತನ್ನ ಚಿತ್ರವನ್ನು ತೆಗೆಯುವಂತೆ ಕೇಳಿಕೊಂಡಾಗ ಬಂಡೆಗಳ ಮೇಲೆ ಇಳಿಯುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಅಜಯ್‌ನ ಸ್ನೇಹಿತ ತನ್ನ ಬಹು ಚಿತ್ರಗಳನ್ನು ತೆಗೆದುಕೊಳ್ಳುತ್ತಿದ್ದಂತೆ, ಅವನು ಬಂಡೆಯ ಮೇಲೆ ಜಾರಿ ಜಲಪಾತಕ್ಕೆ ಬಿದ್ದನು. ಏತನ್ಮಧ್ಯೆ, ಪೊಲೀಸರು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ವ್ಯಕ್ತಿಯ ಪತ್ತೆಗೆ ಹುಡುಕಾಟ ನಡೆಸಿದ್ದಾರೆ. ಮಳೆ ಮತ್ತು ಬೆಳಕಿನ ಕೊರತೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪುಲ್ಲವೇಲಿ ಗ್ರಾಮದ ಜಲಪಾತವನ್ನು ಅಪಾಯಕಾರಿ ಎಂದು ಪರಿಗಣಿಸಲಾಗಿದೆ ಮತ್ತು ಜಲಪಾತಕ್ಕೆ ಬಿದ್ದು ಕನಿಷ್ಠ ಐದು ಜನರು ಮೃತಪಟ್ಟಿದ್ದಾರೆ.
ಈ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಬಂಡೆ ಜಾರಲು ಕಾರಣವಾಗಿರಬಹುದು. ಮಳೆಯ ರಭಸಕ್ಕೆ ನೀರಿನ ಪ್ರಮಾಣ ಮತ್ತು ಪ್ರವಾಹದ ವೇಗವೂ ಹೆಚ್ಚಾಗಿದೆ.
ವಾರಾಂತ್ಯಗಳಲ್ಲಿ ಜಲಪಾತ, ನದಿ, ಸಮುದ್ರ ತೀರಗಳಿಗೆ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಯಾವುದೇ ಕಾರಣಕ್ಕೂ ಫೋಟೋ ತೆಗೆಸಿಕೊಳ್ಳುವ ಆಸೆಗೆ, ಸಾಹಸ ಮಾಡುವ ಮನಸ್ಥಿತಿಯಿಂದಲೋ ಅಪಾಯವನ್ನು ತಂದುಕೊಳ್ಳಬೇಡಿ. ಸ್ವಲ್ಪ ಯಾಮಾರಿದರು ಅಪಾಯ ತಪ್ಪಿದ್ದಲ್ಲ, ಆದಷ್ಟೂ ಜಾಗರೂಕರಾಗಿರಬೇಕು ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications