ಕೊನೆಗೂ ಕನ್ನಡಿಗರ ಕ್ಷಮೆ ಕೇಳಿದ ಕಟ್ಟಪ್ಪ

Posted By:
Subscribe to Oneindia Kannada

ಚೆನ್ನೈ, ಏಪ್ರಿಲ್ 21: ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಹಾಗೂ ಕನ್ನಡ ಪರ ಸಂಘಟನೆಗಳ ವಿರುದ್ಧ ಲಘುವಾಗಿ ಮಾತನಾಡಿದ್ದ ತಮಿಳು ನಟ, ನಿರ್ದೇಶಕ ಹಾಗೂ ಬಾಹುಬಲಿ ಚಿತ್ರದಲ್ಲಿ ಕಟ್ಟಪ್ಪ ಪಾತ್ರಧಾರಿಯಾದ ಸತ್ಯರಾಜ್, ಕೊನೆಗೂ ಕನ್ನಡಿಗರ ಕ್ಷಮೆ ಕೇಳಿದ್ದಾರೆ.

ಈ ಬಗ್ಗೆ ಅಧಿಕೃತವಾಗಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ನಾನು ಯಾವತ್ತೂ ಕನ್ನಡ ವಿರೋಧಿಯಲ್ಲ. ಒಂಭತ್ತು ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ಕಾವೇರಿ ನೀರಿಗಾಗಿ ಹೋರಾಟ ನಡೆಯುತ್ತಿದ್ದಾಗ ನಾನು ಪ್ರಚೋದನೆಗೊಂಡು ಭಾಷಣ ಮಾಡಿದ್ದೆ. ಅದರಿಂದ ಕನ್ನಡ ಭಾಷಿಗರಿಗೆ ನೋವಾಗಿದ್ದರೆ ನಾನು ಕ್ಷಮೆ ಯಾಚಿಸುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.ಇದರ ಜತೆಗೆ, ಕರ್ನಾಟಕದಲ್ಲಿ 'ಬಾಹುಬಲಿ - 2' ಚಿತ್ರ ಪ್ರದರ್ಶನಕ್ಕೆ ಅನುವು ಮಾಡಿಕೊಡಬೇಕೆಂದೂ ಅವರು ಪ್ರಾರ್ಥಿಸಿದ್ದಾರೆ.[ಕನ್ನಡಿಗರನ್ನ ಹೀಯಾಳಿಸುತ್ತಿರುವ ತಮಿಳರು: ಟ್ವಿಟ್ಟರ್ ನಲ್ಲಿ ಘೋರ ಯುದ್ಧ.!]

Tamil actor Sathraj appologise Kanndadigas

ಏನಿದು ವಿವಾದ?: 2008ರಲ್ಲಿ ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರಗಳ ನಡುವೆ ಕಾವೇರಿ ವಿವಾದ ಉಲ್ಬಣವಾಗಿದ್ದ ಕಾಲಘಟ್ಟದಲ್ಲಿ ಚೆನ್ನೈನಲ್ಲಿ ತಮಿಳುನಾಡು ಚಿತ್ರರಂಗದ ಗಣ್ಯರಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಆ ಸಂದರ್ಭದಲ್ಲಿ ಮಾತನಾಡಿದ್ದ ಸತ್ಯರಾಜ್, ಕನ್ನಡಿಗರನ್ನು ಹೀನಾಯವಾಗಿ ಬೈಯ್ದಿದ್ದಲ್ಲದೆ, ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ವಿರುದ್ಧಅವಹೇಳನಕಾರಿ ಮಾತುಗಳನ್ನಾಡಿದ್ದರು. ಇದು ಕನ್ನಡ ಪರ ಸಂಘಟನೆಗಳನ್ನು ಕೆರಳಿಸಿತ್ತು.

ಸತ್ಯರಾಜ್ ಅವರ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಅದು ಕನ್ನಡಿಗರನ್ನು ಕೆರಳಿಸಿತ್ತು. ಹಾಗಾಗಿ, ಸತ್ಯರಾಜ್ ಅವರು ಅಭಿನಯಿಸಿರುವ, ಇದೀಗ ಬಿಡುಗಡೆಗೆ ಸಿದ್ಧವಾಗಿರುವ 'ಬಾಹುಬಲಿ - 2' ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆಯಾಗಲು ಬಿಡುವುದಿಲ್ಲ ಎಂದೂ ಕನ್ನಡ ಸಂಘಟನೆಗಳು ಪ್ರತಿಜ್ಞೆ ಮಾಡಿದ್ದವು.[ಕನ್ನಡ ವಿರೋಧಿ ಕಟ್ಟಪ್ಪ ಈಗಲಾದರೂ ಬಾಯ್ಬಿಟ್ಟು ಕ್ಷಮೆ ಕೇಳಪ್ಪ.!]

ಅಲ್ಲದೆ, ಸತ್ಯರಾಜ್ ವಿರುದ್ಧ ಅಲ್ಲಲ್ಲಿ ಪ್ರತಿಭಟನೆಗಳು ನಡೆದಿದ್ದವು. ಏತನ್ಮಧ್ಯೆ, ಬಾಹುಬಲಿ - 2 ಚಿತ್ರ ಬಿಡುಗಡೆಯಾಗಲಿರುವ ಏ. 28ರಂದು ಬೆಂಗಳೂರು ಬಂದ್ ಮಾಡಲು ಕನ್ನಡ ಪರ ಸಂಘಟನೆಗಳು ಘೋಷಿಸಿದ್ದವು.

ಇದೆಲ್ಲದರ ನಡುವೆ, ಬಾಹುಬಲಿ -2 ಚಿತ್ರದ ನಿರ್ದೇಶಕ ರಾಜಮೌಳಿ ಅವರು, ವಿಡಿಯೋ ಮೂಲಕ ಕನ್ನಡಿಗರು ಬಾಹುಬಲಿ ಚಿತ್ರದ ಪ್ರದರ್ಶನಕ್ಕೆ ಅನುವು ಮಾಡಿಕೊಡಬೇಕೆಂದು ಪ್ರಾರ್ಥಿಸಿದ್ದರು.

ಆದರೆ, ಇದಕ್ಕೆ ಸ್ಪಷ್ಟನೆ ನೀಡಿದ್ದ ಕನ್ನಡಪರ ಸಂಘಟನೆಗಳು, ''ನಮಗೆ ರಾಜಮೌಳಿ ಬಗ್ಗೆ ಗೌರವವಿದೆ. ಆದರೆ, ನಮಗೆ ಸತ್ಯರಾಜ್ ಹೇಳಿಕೆಯು ನೋವುಂಟು ಮಾಡಿರುವುದರಿಂದ ಅವರಿಂದಲೇ ಬೇಷರತ್ ಕ್ಷಮಾಪಣೆ ಬರಬೇಕು'' ಎಂದು ಪಟ್ಟು ಹಿಡಿದಿದ್ದವು.

ಈಗ, ಸತ್ಯರಾಜ್ ಕ್ಷಮೆ ಕೋರುವ ಮೂಲಕ ಈ ವಿವಾದ ಸುಖಾಂತ್ಯಗೊಂಡಿದ್ದು, ಬಾಹುಬಲಿ - 2 ಚಿತ್ರದ ಬಿಡುಗಡೆಗೆ ಇದ್ದ ಅಡ್ಡಿ ನಿವಾರಣೆ ಆಗಿದೆ ಎಂದು ನಿರೀಕ್ಷಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tamil actor, Director Sathyaraj apologised Kannada People for his derogatory statement which hurted Kannadigas 9 years ago.
Please Wait while comments are loading...