ಜಯಲಲಿತಾರ ಆರ್ ಕೆ ನಗರ ಕ್ಷೇತ್ರಕ್ಕೆ ಇಂದು ಉಪಚುನಾವಣೆ
ಚೆನ್ನೈ, ಡಿಸೆಂಬರ್ 21: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ನಿಧನಾನಂತರ ತೆರವಾದ ರಾಧಾಕೃಷ್ಣನ್ ನಗರ(ಆರ್ ಕೆ ನಗರ) ವಿಧಾನಸಭಾ ಕ್ಷೇತ್ರಕ್ಕೆ ಇಂದು(ಡಿ.21) ಮತದಾನ ನಡೆಯಲಿದೆ.
ಜಯಲಲಿತಾ ಅವರ ಕ್ಶಃಏತ್ರವಾಗಿರುವ ಕಾರಣಕ್ಕೆ ಆರ್ ಕೆ ನಗರ ಪ್ರತಿಷ್ಟೇಯ ಕಣವಾಗಿದೆ. ಕಳೆದ ಏಪ್ರಿಲ್ 12 ರಲ್ಲೇ ಈ ಉಪಚುನಾವಣೆ ನಡೆಯಬೇಕಿತ್ತು. ಆದರೆ ವೋಟಿಗಾಗಿ ನೋಟು ಹಂಚಿದ ಆರೋಪದಿಂದಾಗಿ ಈ ಚುನಾವಣೆಯನ್ನು ರದ್ದುಗೊಳಿಸಿ, ನಂತರ ಡಿ.21 ಕ್ಕೆ ದಿನಾಂಕ ಮುಂದೂಡಲಾಗಿತ್ತು.

ಅಚ್ಚರಿಯ ವಿಷಯವೆಂದರೆ ಆರ್ ಕೆ ನಗರ ಕ್ಷೇತ್ರದಿಂದ ಬರೋಬ್ಬರಿ 59 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, ಅವರಲ್ಲಿ 47 ಜನ ಪಕ್ಷೇತರ ಅಭ್ಯರ್ಥಿಗಳು! ಡಿಎಂಕೆಯಿಂದ ಮರುದು ಗಣೇಶನ್, ಎಐಎಡಿಎಂಕೆಯಿಂದ ಇ. ಮಧುಸೂದನ್, ಶಶಿಕಲಾ ಬಣದಿಂದ ಟಿಟಿವಿ ದಿನಕರನ್ ಸ್ಪರ್ಧೆಯಲ್ಲಿದ್ದಾರೆ.
ಡಿ.24 ರಂದು ಮತಎಣಿಕೆ ನಡೆಯಲಿದ್ದು, ಜಯಾ ಅವರ ಸಾವಿನ ನಂತರ ಮತದಾರ ತಮಿಳುನಾಡಿನ ರಾಜಕೀಯಕ್ಕೆ ಹೊಸ ದಿಕ್ಕು ನೀಡಲಿದ್ದಾನೆಯೇ ಎಂಬುದನ್ನು ಕಾದುನೋಡಬೇಕಿದೆ.
ವಿವಿಧ ರಾಜ್ಯಗಳಲ್ಲಿ ಉಪಚುನಾವಣೆ
ತಮಿಳುನಾಡಿನ ಆರ್ ಕೆ.ನಗರ ಕ್ಷೇತ್ರದಲ್ಲಿ ಮಾತ್ರವಲ್ಲದೆ ಪಶ್ಚಿಮ ಬಂಗಾಳದ ಸಬಾಂಗ್, ಅರುಣಾಚಲ ಪ್ರದೇಶದ ಪಕ್ಕೆ ಕೆಸಾಂಗ್ ಮತ್ತು ಲಿಕಾಬಲಿ, ಉತ್ತರ ಪ್ರದೇಶದ ಸಿಕಾಂದರಗಳಲ್ಲೂ ಇಂದು ಉಪಚುನಾವಣೆ ನಡೆಯಲಿದೆ.
ಪಶ್ಚಿಮ ಬಂಗಾಳದ ಸಬಾಂಗ್ ನಲ್ಲಿ ತೃಣಮೂಲ ಕಾಂಗ್ರೆಸ್ ನ ಗೀತಾ ಭುನಿಯಾ, ಕಾಂಗ್ರೆಸ್ ನ ಚಿರಾಂಜಿಬ್ ಭೊವ್ಮಿಕ್, ಬಿಜೆಪಿಯ ಅಂತರ ಭಟ್ಟಾಚಾರ್ಯ ಮತ್ತು ಸಿಪಿಐ(ಎಂ) ನ ರಿತಾ ಮಂಡಲ್ ಈ ಚುನಾವಣೆಯ ಪ್ರಮುಖ ಅಭ್ಯರ್ಥಿಗಳು.
ಉತ್ತರ ಪ್ರದೇಶದ ಸಿಕಾಂದರಾದಲ್ಲಿ ಬಿಜೆಪಿ ಶಾಸಕ ಮಥುರಾ ಪ್ರಸಾದ್ ಪಾಲ್ ಅವರ ಮರಣಾನಂತರ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಒಟ್ಟು 12 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.












Click it and Unblock the Notifications