ತಮಿಳ್ನಾಡು ಬೃಹನ್ನಾಟಕ : ರಾಜ್ಯಪಾಲರ ಮುಂದಿರುವ ಆಯ್ಕೆಗಳು

By: ವಿಕಾಸ್ ನಂಜಪ್ಪ
Subscribe to Oneindia Kannada

ಚೆನ್ನೈ, ಫೆಬ್ರವರಿ 09 : ಕಳೆದ ವರ್ಷದ ಡಿಸೆಂಬರ್ 5ರಂದು ಜಯಲಲಿತಾ ಅಸುನೀಗಿದ ನಂತರ ತಮಿಳುನಾಡಿನಲ್ಲಿ ರಾಜಕೀಯ ಬೃಹನ್ನಾಟಕದ ಎರಡನೇ ಅಂಕ ಆರಂಭವಾಗಿದೆ. ದೃಶ್ಯ ಆರಂಭವಾಗಿದ್ದರೂ ರಾಜ್ಯಪಾಲರಾದ ವಿದ್ಯಾಸಾಗರ್ ರಾವ್ ಅವರು ಪ್ರವೇಶ ತೆಗೆದುಕೊಳ್ಳದಿರುವುದು ಪ್ರೇಕ್ಷಕರ ಚಟಪಡಿಕೆಗೆ ಕಾರಣವಾಗಿದೆ.

ಈ ನಾಟಕದ ಸೂತ್ರಧಾರಿ ಯಾರೋ ಏನೋ ಆದರೆ ಪ್ರಮುಖ ಪಾತ್ರಧಾರಿ ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಶಶಿಕಲಾ ಮತ್ತು ಅಷ್ಟೇ ಪ್ರಮುಖ ಪಾತ್ರ ವಹಿಸುತ್ತಿರುವ 'ರೆಬೆಲ್ ಸ್ಟಾರ್' ಪನ್ನೀರ್ ಸೆಲ್ವಂ ಅವರು, ವಿದ್ಯಾಸಾಗರ್ ಅವರು ಯಾವಾಗ ಪ್ರವೇಶ ಪಡೆಯುತ್ತಾರೋ ಎಂದು ಮೇಕಪ್ ಹಚ್ಚಿಕೊಂಡು ಕುಳಿತಿದ್ದಾರೆ.[ಪನ್ನೀರ್ ಗೆ ಇದ್ದಕ್ಕಿದ್ದಂತೆ ಏನಾಯಿತು? ಯಾಕೆ ಹೀಗೆ ಆಡ್ತಿದ್ದಾರೆ?]

ಸೂತ್ರಧಾರಿಯ ಪಾತ್ರ ಅಸ್ಪಷ್ಟವಾಗಿರುವುದರಿಂದ ಸೂತ್ರಧಾರಿಯ ಪಾತ್ರವಹಿಸಿ ವಿದ್ಯಾಸಾಗರ್ ಅವರು ಶಶಿಕಲಾ ಮತ್ತು ಪನ್ನೀರ್ ಸೆಲ್ವಂ ಅವರ ಪಾತ್ರಗಳಿಗೆ ಸೂಕ್ತ ನಿರ್ದೇಶನ ನೀಡಬೇಕಾಗಿದೆ. ಪನ್ನೀರ್ ಅವರು ರಾಜೀನಾಮೆ ನೀಡಿದ್ದರೂ, ಸದ್ಯಕ್ಕೇ ಅವರೇ ಮುಖ್ಯಮಂತ್ರಿ ಪಾತ್ರದಲ್ಲಿ ಮುಂದುವರಿದಿದ್ದಾರೆ.

ಮೇಲ್ಮುಖದಲ್ಲಿ ಶಾಂತ ಕಳೆಯ ಪ್ರಸಾಧನವನ್ನು ಬಳಿದುಕೊಂಡಿದ್ದರೂ ಒಳಗಿಂದಲೇ ಬುಸುಗುಡುತ್ತಿರುವ ಶಶಿಕಲಾ ನಟರಾಜನ್ ಅವರು, ತಮ್ಮ ಬಳಿ ಬಹುತೇಕ ಶಾಸಕರ ಬೆಂಬಲವಿದೆ ಎಂದು ಹೇಳುತ್ತಿದ್ದು, ಪ್ರಮಾಣ ವಚನ ಸ್ವೀಕರಿಸಲು ಸ್ಕ್ರಿಪ್ಟ್ ರೆಡಿಮಾಡಿಕೊಂಡು ಕುಳಿತಿದ್ದಾರೆ.[ಬ್ಯಾಂಕುಗಳಿಗೆ ಪನ್ನೀರ್ ಸೆಲ್ವಂ ಬರೆದ ಪತ್ರದಲ್ಲೇನಿದೆ?]

ಇಂಥ ಸ್ಕ್ರಿಪ್ಟನ್ನು ಹಲವಾರು ಬಾರಿ ಓದಿ ಕಂಠಪಾಠ ಮಾಡಿರುವ ಪನ್ನೀರ್ ಸೆಲ್ವಂ ಅವರು, ಜಯಲಲಿತಾ ಅವರ ಸಮಾಧಿಯ ಮುಂದೆ ಬಿಕ್ಕಿಬಿಕ್ಕಿ ಅತ್ತ ನಂತರ ಒಂದು ಬಾರಿ ಚಾತುರ್ಯವನ್ನು ತೋರಿದ್ದು, ನಾನ್ಯಾರಿಗೂ ಕಮ್ಮಿಯಿಲ್ಲ, ಮುಖ್ಯಮಂತ್ರಿ ಪಾತ್ರ ನನಗೇ ಸಿಗಬೇಕು ಎಂದು ದುಂಬಾಲು ಬಿದ್ದಿದ್ದಾರೆ.

ಇಬ್ಬರೂ ಮುಖ್ಯಮಂತ್ರಿ ಪಾತ್ರ ತಮಗೇ ಬೇಕೆಂದು ದುಂಬಾಲು ಬಿದ್ದಿರುವುದರಿಂದ ರಾಜ್ಯಪಾಲರಾದ ವಿದ್ಯಾಸಾಗರ್ ರಾವ್ ಅವರು ಬಲುಪೇಚಿಗೆ ಸಿಲುಕಿದ್ದಾರೆ. ವಿದ್ಯಾಸಾಗರ್ ಅವರ ಮುಂದಿರುವ ಆಯ್ಕೆಗಳೇನು ಮುಂದೆ ನೋಡೋಣ.

ಮುಖ್ಯಮಂತ್ರಿಯಾಗಲು ಶಶಿಕಲಾಗೆ ಅವಕಾಶ

ಮುಖ್ಯಮಂತ್ರಿಯಾಗಲು ಶಶಿಕಲಾಗೆ ಅವಕಾಶ

ಪನ್ನೀರ್ ಸೆಲ್ವಂ ಸ್ವಲ್ಪ ದುಡುಕಿ ರಾಜೀನಾಮೆಯನ್ನು ಮೊದಲೇ ಬಿಸಾಕಿದ್ದರಿಂದ ಎಐಎಡಿಎಂಕೆಯ ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆಯಾಗಿರುವ ಶಶಿಕಲಾ ಅವರಿಗೆ ಅನಿವಾರ್ಯವಾಗಿ ಸರಕಾರ ರಚಿಸುವ ಅವಕಾಶವನ್ನು ನೀಡಬೇಕಾಗುತ್ತದೆ. 133 ಸದಸ್ಯರ ಬಲವಿದೆ ಎಂದಿರುವ ಅವರು ಸದನದಲ್ಲಿ ಬಹುಮತ ಸಾಬೀತುಪಡಿಸಬೇಕಾಗುತ್ತದೆ.

ಕಾದು ನೋಡುವ ತಂತ್ರ

ಕಾದು ನೋಡುವ ತಂತ್ರ

ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಶಿಕಲಾ ಅವರು ಎರಡನೇ ಆರೋಪಿಯ ಸ್ಥಾನವನ್ನು ಅಲಂಕರಿಸಿರುವುದರಿಂದ ರಾಜ್ಯಪಾಲರು ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೆ ಕಾದುನೋಡುವ ತಂತ್ರ ಅನುಸರಿಸಲೇಬೇಕಾಗುತ್ತದೆ.

ತೀರ್ಪು ಶಶಿಕಲಾ ವಿರುದ್ಧವಾದರೆ

ತೀರ್ಪು ಶಶಿಕಲಾ ವಿರುದ್ಧವಾದರೆ

ಒಂದು ವೇಳೆ ಸುಪ್ರೀಂ ತೀರ್ಪು ಶಶಿಕಲಾ ವಿರುದ್ಧವಾಗಿ ಬಂದರೆ ಮುಂದಿನ 6 ವರ್ಷಗಳ ಕಾಲ ಅವರು ಮುಖ್ಯಮಂತ್ರಿ ಪಾತ್ರವಹಿಸುವ ಕನಸು ಕಾಣುವಂತಿಲ್ಲ. ತೀರ್ಪು ಬರುವ ಮೊದಲೇ ಶಶಿಕಲಾ ಮುಖ್ಯಮಂತ್ರಿಯಾಗಿ, ನಂತರ ತೀರ್ಪಿನಲ್ಲಿ ಆರೋಪ ಸಾಬೀತಾದರೆ ತಮಿಳುನಾಡು ಮತ್ತೆ ಸಂಕಷ್ಟಕ್ಕೆ ಸಿಲುಕುತ್ತದೆ.

ಪನ್ನೀರ್ ಸೆಲ್ವಂಗೆ ಮತ್ತೊಂದು ಚಾನ್ಸ್

ಪನ್ನೀರ್ ಸೆಲ್ವಂಗೆ ಮತ್ತೊಂದು ಚಾನ್ಸ್

ಪನ್ನೀರ್ ಸೆಲ್ವಂ ಅವರು ತಮ್ಮ ಬಳಿಯೂ 60 ಶಾಸಕರಿದ್ದಾರೆ ಎಂದು ಹೇಳಿಕೊಂಡಿರುವುದರಿಂದ ಅವರಿಗೆ ಮತ್ತೊಂದು ಚಾನ್ಸ್ ಕೊಟ್ಟು ನೋಡುವುದು. ಬಹುಮತ ಸಾಬೀತುಪಡಿಸಲು ಪನ್ನೀರ್ ಅವರಿಗೆ ಡಿಎಂಕೆ ಪಕ್ಷದ 89 ಶಾಸಕರ ಬೆಂಬಲ ಬೇಕಾಗಬಹುದು. ಆದರೆ, ಡಿಎಂಕೆ ಬಾಹ್ಯ ಬೆಂಬಲ ನೀಡುತ್ತಾ?

ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆ

ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆ

ಪನ್ನೀರ್ ಅವರು 60 ಶಾಸಕರ ಬೆಂಬಲ ಸಾಬೀತುಪಡಿಸಿದರೆ, ಶಶಿಕಲಾಗೆ ಮುಖ್ಯಮಂತ್ರಿ ಪದವಿ ಏರುವುದು ಸಾಧ್ಯವಾಗುವುದೇ ಇಲ್ಲ. ಶಶಿಕಲಾ ಡಿಎಂಕೆ ಪಕ್ಷದ ಬೆಂಬಲ ನಿರೀಕ್ಷಿಸುವಂತೆಯೇ ಇಲ್ಲ. ಯಾವುದೇ ಪಕ್ಷ ಬಹುಮತ ಸಾಬೀತುಪಡಿಸಲು ವಿಫಲವಾದರೆ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡದೆ ಗತ್ಯಂತರವೇ ಇಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
All eyes would be on the Raj Bhavan at Chennai on Thursday. Governor of Tamil Nadu Vidyasagar Rao will visit Tamil Nadu to put an end to the ongoing political crisis in the state. The big question is will it be Sasikala Natarajan or O Paneerselvam who would lead the all important state of South India.
Please Wait while comments are loading...