• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಪಘಾತದಲ್ಲಿ ಕಂದರದೊಳಗೆ ಬಿದ್ದು ಸತ್ತ ಸ್ನೇಹಿತರ ಸುಳಿವು ಕೊಟ್ಟಿದ್ದು ಮೊಬೈಲ್ ಕರೆ

|

ಚೆನ್ನೈ, ಅಕ್ಟೋಬರ್ 5: ಪ್ರವಾಸಕ್ಕೆಂದು ತೆರಳಿದ್ದ ತಮಿಳುನಾಡಿನ ಗೆಳೆಯರ ಗುಂಪಿನಲ್ಲಿ ಐವರು ಭೀಕರ ಅಪಘಾತದಿಂದ ಮೃತಪಟ್ಟಿದ್ದರೆ, ಇಬ್ಬರು ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಊಟಿ-ಕಲ್ಕಟ್ಟಿ ಘಾಟ್ ರಸ್ತೆಯಲ್ಲಿ ಏಳು ಮಂದಿ ಗೆಳೆಯರು ಪ್ರಯಾಣಿಸುತ್ತಿದ್ದ ಕಾರ್ ಚಾಲಕನ ನಿಯಂತ್ರಣ ತಪ್ಪಿ ಕಂದರವೊಂದಕ್ಕೆ ಬಿದ್ದಿತ್ತು. ಈ ಅಪಘಾತ ನಡೆದಿದ್ದು ಸೋಮವಾರ ಬೆಳಿಗ್ಗೆ. ಆದರೆ, ಅಪಘಾತವಾದ ಕಾರು ದೊರೆತಿದ್ದು ಬುಧವಾರ.

ಬಂಗಾರಪೇಟೆ: ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸಾವು

ಸತತ ಹುಡುಕಾಟದ ಬಳಿಕ ಪೊಲೀಸರಿಗೆ ಈ ಮಾರ್ಗದ 35ನೇ ಹೇರ್‌ಪಿನ್ ತಿರುವಿನಲ್ಲಿ 50-60 ಅಡಿ ಆಳದ ಕಂದರದೊಳಗೆ ಕಾರು ಮಗುಚಿ ಬಿದ್ದಿದ್ದು ಪತ್ತೆಯಾಗಿತ್ತು. ಏಳು ಮಂದಿಯ ಪೈಕಿ ಐವರು ಮೃತಪಟ್ಟಿದ್ದರೆ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರು ಅಪಘಾತ ಸಂಭವಿಸಿದ ಎರಡು ದಿನ ಆಶ್ಚರ್ಯಕರ ರೀತಿಯಲ್ಲಿ ಹೇಗೋ ಜೀವ ಉಳಿಸಿಕೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತಕ್ಕೀಡಾದವರ ವಿವರ

ಅಪಘಾತಕ್ಕೀಡಾದವರ ವಿವರ

ರವಿವರ್ಮಾ (38), ಇಬ್ರಾಹಿಂ (36), ಜಯಕುಮಾರ್ (37), ಅಮರನಾಥ್ (36) ಮತ್ತು ಜುದೆಸ್ ಆಂಟೊ ಕೆವಿನ್ (33) ಅಪಘಾತದಲ್ಲಿ ಜೀವ ಕಳೆದುಕೊಂಡಿದ್ದಾರೆ. ಅವರ ಜತೆಯಲ್ಲಿದ್ದ ರಾಮ ರಾಜೇಶ್ (37) ಮತ್ತು ಅರುಣ್ (37) ತೀವ್ರ ಗಾಯಗೊಂಡಿದ್ದರು. ಗಂಭೀರ ಸ್ಥಿತಿಯಲ್ಲಿರುವ ಇಬ್ಬರೂ ಕೊಯಮತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

(ಚಿತ್ರ ಕೃಪೆ: ಟ್ವಿಟ್ಟರ್)

ಹತ್ತಾರು ಜನರ ಜೀವ ಉಳಿಸಿದವ, ಅಪಘಾತದಲ್ಲಿ ಪ್ರಾಣ ಕಳೆದುಕೊಂಡ: ಕೇರಳದಲ್ಲಿ ನಡೆದ ದುರಂತ

ಚೆಕ್‌ಔಟ್ ಮಾಡಬೇಕಿತ್ತು

ಚೆಕ್‌ಔಟ್ ಮಾಡಬೇಕಿತ್ತು

ಏಳು ಮಂದಿ ಸ್ನೇಹಿತರ ಗುಂಪು ಸೆ.30ರ ಸಂಜೆ ಸ್ಟೆರ್ಲಿನ್ ಫೆರ್ನ್ ಹಿಲ್ ರೆಸಾರ್ಟ್‌ಗೆ ಬಂದಿತ್ತು. ಮರುದಿನ ಅಂದರೆ, ಅ.1ರಂದು ಬೆಳಿಗ್ಗೆ ಬೂದು ಬಣ್ಣದ ಮಾರುತಿ ಎರ್ಟಿಗಾ ಕಾರ್‌ನಲ್ಲಿ ನೀಲಗಿರಿ ಅರಣ್ಯ ಪ್ರದೇಶದಲ್ಲಿ ಸುತ್ತಾಡಲು ತೆರಳಿದ್ದರು. ಮಂಗಳವಾರ ಮಧ್ಯಾಹ್ನ 12ಕ್ಕೆ ಚೆಕ್‌ಔಟ್ ಮಾಡಬೇಕಿದ್ದ ಈ ಸ್ನೇಹಿತರು, ಬುಧವಾರ ಬೆಳಿಗ್ಗೆಯಾದರೂ ಮರಳಿ ಬಾರದಿದ್ದನ್ನು ಗಮನಿಸಿದ ಹೋಟೆಲ್‌ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಎಚ್ಚೆತ್ತ ಪೊಲೀಸರು ಅವರು ತೆರಳಿದ್ದ ಪ್ರದೇಶದಲ್ಲಿ ಹುಡುಕಾಟ ಆರಂಭಿಸಿದ್ದರು.

ಬುಧವಾರ ಮಧ್ಯಾಹ್ನ ಪೊಲೀಸರು ಮತ್ತು ಮದುಮಲೆ ಹುಲಿ ಸಂರಕ್ಷಣಾ ತಂಡದ ಅಧಿಕಾರಿಗಳು ಹುಡುಕಾಟ ನಡೆಸಿದರು. ಆದರೆ, ವಿಪರೀತ ಮಳೆಯಿಂದಾಗಿ ಪತ್ತೆ ಕಾರ್ಯಕ್ಕೆ ಅಡ್ಡಿಯುಂಟಾಯಿತು.

(ಚಿತ್ರ ಕೃಪೆ: ಟ್ವಿಟ್ಟರ್)

ಬ್ರೇಕ್ ವೈಫಲ್ಯದಿಂದ ಅಡ್ಡಾದಿಡ್ಡಿ ಲಾರಿ ಚಲಿಸಿ ಮಂಡ್ಯದಲ್ಲಿ ನಾಲ್ವರು ಸಾವು

ಕರೆ ಮಾಡಿದರೂ ಸಿಗಲಿಲ್ಲ

ಈ ತಂಡ ಹೋಟೆಲ್‌ಗೆ ಹಿಂತಿರುಗದೆ ಇದ್ದಿದ್ದರಿಂದ ಎಲ್ಲ ಏಳು ಮಂದಿಯ ಮೊಬೈಲ್‌ ನಂಬರ್‌ಗಳಿಗೂ ಹೋಟೆಲ್ ಸಿಬ್ಬಂದಿ ಹಲವು ಬಾರಿ ಕರೆ ಮಾಡಿದ್ದರು. ಎಲ್ಲರ ಫೋನ್‌ಗಳೂ ನಾಟ್ ರೀಚಬಲ್ ಆಗಿದ್ದವು. ಅವರು ಎಲ್ಲಿ ಹೋಗಿದ್ದಾರೆ ಎಂಬುದು ಯಾರಿಗೂ ತಿಳಿದಿರಲಿಲ್ಲ.

ಸಾಮಾನ್ಯವಾಗಿ ಅಲ್ಲಿಗೆ ಬರುವ ಅತಿಥಿಗಳು ಹೊರ ಹೋಗುವ ಮುನ್ನ ಎಲ್ಲಿ ಹೋಗುತ್ತೇವೆ ಎಂದು ಹೋಟೆಲ್ ಸಿಬ್ಬಂದಿಗೆ ಮಾಹಿತಿ ನೀಡುವುದಿಲ್ಲ. ಚಾರಣಕ್ಕೆ ಹೋದರೆ ಅಥವಾ ದಾರಿ ತಪ್ಪಿದರೆ ಎಲ್ಲಿಯೂ ಮೊಬೈಲ್ ಸಂಪರ್ಕ ಸಿಗದ ಕಾರಣ ಯಾರಿಗೂ ಕರೆ ಮಾಡಲು ಆಗುವುದಿಲ್ಲ. ಇನ್ನು ಜಿಪಿಎಸ್‌ ಮೂಲಕ ದಾರಿ ಹುಡುಕುವುದಂತೂ ಅಸಾಧ್ಯ.

ಅಪಘಾತದಲ್ಲಿ ಗಾಯಗೊಂಡಿದ್ದ ಸಂಗೀತಗಾರ ಬಾಲಭಾಸ್ಕರ್ ಇನ್ನಿಲ್ಲ

ನೆರವಾದ ಕಾಲ್ ರೆಕಾರ್ಡ್ಸ್

ನೆರವಾದ ಕಾಲ್ ರೆಕಾರ್ಡ್ಸ್

ಕೂಡಲೇ ಪೊಲೀಸರು ತಂತ್ರಜ್ಞಾನದ ಮೊರೆ ಹೊಕ್ಕರು. ಎಲ್ಲರ ಫೋನ್‌ಗಳ ಕಾಲ್ ದಾಖಲೆಗಳನ್ನು ತೆಗೆದರು. ಈ ಗುಂಪು ಕಡೆಯ ಬಾರಿ ಮೊಬೈಲ್ ಟವರ್ ಸಂಪರ್ಕಕ್ಕೆ ಬಂದ ಸುಳಿವು ಸಿಗುವ ನಿರೀಕ್ಷೆ ಅವರಲ್ಲಿತ್ತು. ಅಪಘಾತ ನಡೆದ ನಾಲ್ಕು ಕಿಮೀ ದೂರದಲ್ಲಿನ ಹುಲ್ಲಟ್ಟಿ ಎಂಬಲ್ಲಿ ಎಲ್ಲರ ಫೋನ್‌ಗಳೂ ಸ್ವಿಚ್‌ ಆಫ್ ಆಗಿದ್ದವು.

ಬೆಳಿಗ್ಗೆ 9.45ರ ವೇಳೆಗೆ, ಅಂದರೆ ಹೋಟೆಲ್‌ನಿಂದ ಹೊರಟ ಒಂದು ಗಂಟೆಯಲ್ಲಿ ಎಲ್ಲರ ಮೊಬೈಲ್‌ಗಳೂ ಸಿಗ್ನಲ್ ಕಳೆದುಕೊಂಡಿದ್ದವು. ಸಮೀಪದ ಎಲ್ಲ ಮೊಬೈಲ್ ಟವರ್‌ಗಳಿಂದ ಕರೆಗಳ ವಿವರ ಕಲೆಹಾಕಿದ ಪೊಲೀಸರು ಅವುಗಳಲ್ಲಿ ದಾಖಲಾಗಿದ್ದ ಸಮಯದ ಅಂದಾಜಿನಲ್ಲಿ ನಿರ್ದಿಷ್ಟ ಸ್ಥಳಗಳಲ್ಲಿ ಹುಡುಕಾಟ ನಡೆಸಿದ್ದರು.

(ಚಿತ್ರ ಕೃಪೆ: ಟ್ವಿಟ್ಟರ್)

ಕೊಳೆಯಲು ಆರಂಭಿಸಿದ್ದ ದೇಹಗಳು

ಕೊಳೆಯಲು ಆರಂಭಿಸಿದ್ದ ದೇಹಗಳು

ಅತಿ ಸಾಂದ್ರತೆಯುಳ್ಳ ಕಾಡು ಮತ್ತು ಅಪಾಯಕಾರಿ ಹೇರ್‌ಪಿನ್ ತಿರುವುಗಳನ್ನು ಒಳಗೊಂಡ ಈ ಮಾರ್ಗದಲ್ಲಿ ಅವರು ಎಲ್ಲಿರಬಹುದು ಎಂಬುದನ್ನು ಪತ್ತೆ ಹಚ್ಚುವುದು ಸುಲಭವಾಗಿರಲಿಲ್ಲ. ಅವರು ಊಟಿಯಿಂದ ಮಸಿಣಗುಡಿಗೆ ಹೋಗುವ ಅಡ್ಡದಾರಿಯಾದ ಕಲ್ಹಟ್ಟಿ ಮಾರ್ಗದಲ್ಲಿ ಹೋಗಿರಬಹುದು ಎಂಬ ಅನುಮಾನ ವ್ಯಕ್ತವಾಗಿತ್ತು. ಈ ರಸ್ತೆ ಪ್ರವಾಸಿಗರ ಓಡಾಟಕ್ಕೆ ಮುಕ್ತವಾಗಿರಲಿಲ್ಲ. ಇತರೆ ತಿರುವುಗಳಿಗಿಂತ ಹೆಚ್ಚು ಕಡಿದಾದ ರಸ್ತೆ ಅದು. ಮಧ್ಯಾಹ್ನ 3.45ರ ವೇಳೆಗೆ ಕಲ್ಹಟ್ಟಿ-ಮಸಿಣಗುಡಿ ರಸ್ತೆಯಲ್ಲಿನ 35ನೇ ತಿರುವಿನಲ್ಲಿ ಅಪಘಾತ ನಡೆದಿರುವುದು ಪತ್ತೆಯಾಯಿತು.

ತಿರುವಿನ ಪಾತಾಳದೊಳಗೆ ಇಳಿದು ಕಾರಿನ ಸಮೀಪ ಹೋಗುವಾಗಲೇ ಮೃತದೇಹಗಳು ಕೊಳೆಯಲು ಆರಂಭಿಸಿದ್ದವು. ಹೀಗಾಗಿ ಅವರ ಅಂಗಗಳಿಗೆ ಹಾನಿಯಾಗದಂತೆ ಬಹು ಎಚ್ಚರಿಕೆಯಿಂದ ಹೊರಗೆ ತೆಗೆಯಲಾಯಿತು. ಉಳಿದ ಇಬ್ಬರನ್ನು ಕೂಡಲೇ ಆಸ್ಪತ್ರೆಗೆ ರವಾನಿಸಲಾಯಿತು.

(ಚಿತ್ರ ಕೃಪೆ: ಟ್ವಿಟ್ಟರ್)

ಪ್ರವಾಸ ಹೋಗುವುದು ಮಾಮೂಲು

ಈ ಯುವಕರ ಕುಟುಂಬದ ಸದಸ್ಯರು ಕೂಡ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು. ಮೊಬೈಲ್ ಸಂಪರ್ಕ ಸಿಗದಿದ್ದರೂ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಈ ಎಲ್ಲ ಏಳು ಮಂದಿಗೆ ಪ್ರತಿ ಆರು ತಿಂಗಳಿಗೊಮ್ಮೆ ಹೊರ ಜಗತ್ತಿನ ನಂಟು ಕಳೆದುಕೊಂಡು ಪ್ರವಾಸ ಮಾಡುವುದು ಹವ್ಯಾಸವಾಗಿದ್ದರಿಂದ, ಕುಟುಂಬದವರು ಅವರ ಬಗ್ಗೆ ಚಿಂತಿಸುತ್ತಿರಲಿಲ್ಲ. ತಮ್ಮವರ ಅಂತ್ಯ ಹೀಗೆ ದುರಂತ ರೀತಿಯಲ್ಲಿ ಆಗಲಿದೆ ಎಂಬ ಕಲ್ಪನೆಯೂ ಅವರಲ್ಲಿ ಇರಲಿಲ್ಲ.

'ಅಮ್ಮಾ ಅಳಬೇಡ, ಅಪ್ಪಾ ಬರ್ತಾರೆ'!

'ಅಮ್ಮಾ ಅಳಬೇಡ, ಅಪ್ಪಾ ಬರ್ತಾರೆ'!

'ಅಳಬೇಡ ಅಮ್ಮಾ. ಅಪ್ಪ ಬೇಗನೆ ಬರ್ತಾರೆ'- ಇದು ಅಪಘಾತದಲ್ಲಿ ಮೃತಪಟ್ಟ ರವಿವರ್ಮ ಅವರ ಏಳು ವರ್ಷದ ಮಗಳು ದೈವತಾ, ತನ್ನ ತಾಯಿ ಮಂಜು ಪರ್ಕವಿ ಅವರನ್ನು ಸಮಾಧಾನಪಡಿಸಿದ ಪರಿ. ಅಪ್ಪ ಮೃತಪಟ್ಟಿರುವುದು ತಿಳಿಯದ ಮುಗ್ಧ ಕಂದಮ್ಮನ ಮಾತು, ಅಮ್ಮನ ಕಣ್ಣೀರನ್ನು ಮತ್ತಷ್ಟು ಹೆಚ್ಚಿಸಿತ್ತು.

ಸೋಮವಾರ ಬೆಳಿಗ್ಗೆ 8 ಗಂಟೆಗೆ ವಿಡಿಯೋ ಕಾಲ್ ಮಾಡಿದ್ದ ರವಿವರ್ಮ, ಸುಮಾರು ಹತ್ತು ನಿಮಿಷ ಮಗಳ ಜತೆ ಮಾತನಾಡಿದ್ದರು. 'ಈಗಷ್ಟೇ ಎದ್ದಿರುವುದು, ಇನ್ನು ಸಿದ್ಧರಾಗಿ ಹೊರಡಬೇಕು' ಎಂಬುದೇ ಮಂಜು ಪರ್ಕವಿ ತಮ್ಮ ಪತಿಯಿಂದ ಕೇಳಿಸಿಕೊಂಡ ಕೊನೆ ಮಾತುಗಳು. ಅ. 23ರಂದು ತಮ್ಮ ಎರಡನೆಯ ಮಗಳು ನೇತ್ರಾಳ ಮೊದಲ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಈ ದಂಪತಿ ಬಯಸಿದ್ದರು.

English summary
Five friends died and two others critically injured in a road accident in Ooty-Kalhatty road gorge. The accident was happned on Oct 1, but they found on Oct 3 after police took help of call recards to locate them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X