'ಬಿಜೆಪಿ, ಸಂಘ ಪರಿವಾರದ ಒತ್ತಡ; ಎನ್ ಐಎನಿಂದ ಮುಸ್ಲಿಮರೇ ಟಾರ್ಗೆಟ್'
ತಮಿಳುನಾಡಿನಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ ಐ) ಕಚೇರಿ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್ ಐಎ) ದಾಳಿ ನಡೆಸಿದ ನಂತರ ಶುಕ್ರವಾರ ಹೇಳಿಕೆ ನೀಡಿದ್ದು, ಮುಸ್ಲಿಮರನ್ನು ಗುರಿ ಮಾಡಿಕೊಂಡು, ಸಾಮಾಜಿಕ ಸಂಘಟನೆ ಪಿಎಫ್ ಐ ಅನ್ನು ಭಯೋತ್ಪಾದನೆ ಜತೆ ನಂಟು ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಪಿಎಫ್ ಐ ತಮಿಳುನಾಡು ಘಟಕದ ಅಧ್ಯಕ್ಷ ಎಂ.ಮೊಹ್ಮದ್ ಇಸ್ಮಾಯಿಲ್ ಅವರು ಆರೋಪ ಮಾಡಿದ್ದು, ರಾಷ್ಟ್ರೀಯ ತನಿಖಾ ದಳವು ಆಡಳಿತಾರೂಢ ಬಿಜೆಪಿ ಹಾಗೂ ಸಂಘ ಪರಿವಾರದ ಒತ್ತಡಕ್ಕೆ ಸಿಲುಕಿ, ಮುಸ್ಲಿಮರನ್ನು ಗುರಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ರಾಷ್ಟ್ರೀಯ ತನಿಖಾ ದಳವು ತಮಿಳುನಾಡು, ಪುದುಚೆರಿಯಲ್ಲಿ ಇಪ್ಪತ್ತು ಕಡೆ ಶೋಧ ಕಾರ್ಯಾಚರಣೆ ನಡೆಸಿತ್ತು. ಅದರಲ್ಲಿ ಪಿಎಫ್ ಐನ ನಾಲ್ಕು ಕಚೇರಿ ಕೂಡ ಸೆರಿತ್ತು. ಫೆಬ್ರವರಿ ಕೊನೆಯಲ್ಲಿ ಕುಂಭಕೋಣಂನಲ್ಲಿ ಪಿಎಂಕೆ ಕಾರ್ಯಕರ್ತನ ಕೊಲೆ ಅಗಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ.

ಹದಿನಾರು ಮೊಬೈಲ್ ಫೋನ್, ಇಪ್ಪತ್ತೊಂದು ಸಿಮ್ ಕಾರ್ಡ್, ಮೂರು ಲ್ಯಾಪ್ ಟಾಪ್, ಒಂಬತ್ತು ಹಾರ್ಡ್ ಡಿಸ್ಕ್, ಏಳು ಮೆಮೊರಿ ಕಾರ್ಡ್ ಹಾಗೂ ಪಿಎಫ್ ಐ ಎರಡು ಬ್ಯಾನರ್ ಸೇರಿ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್ ಐಎ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇಸ್ಮಾಯಿಲ್ ಮಾತನಾಡಿ, ಪಿಎಫ್ ಐನಿಂದ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡಲಾಗುತ್ತಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಇದೆ. ಆದರೂ ರಾಜ್ಯದಲ್ಲಿ ಎನ್ ಐಎನಿಂದ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಒಂದೋ ಪಿಎಂಕೆ ಕಾರ್ಯಕರ್ತ ರಾಮಲಿಂಗಂ ಕೊಲೆ ವಿಚಾರಕ್ಕೋ ಅಥವಾ ಶ್ರೀಲಂಕಾ ಚರ್ಚ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ನಂಟು ಹಾಕಲು ಹೀಗೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಎನ್ ಐಎನಿಂದ ಹೀಗೆ ಮುಸ್ಲಿಮರನ್ನು "ಗುರಿ" ಮಾಡಿಕೊಂಡು ದಾಳಿ ನಡೆಯುವುದು ಮುಂದುವರಿದರೆ ಪಿಎಫ್ ಐನಿಂದ ಕಾನೂನು ಮೊರೆ ಹೋಗಲಾಗುವುದು ಹಾಗೂ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಇಸ್ಮಾಯಿಲ್ ಹೇಳಿದ್ದಾರೆ.












Click it and Unblock the Notifications