ಮಹಾಬಲಿಪುರಂನಲ್ಲಿ ಚೀನಾ ಅಧ್ಯಕ್ಷರು ಮೆಚ್ಚಿದ 'ತಕ್ಕಾಲಿ ರಸಂ'
ಚೆನ್ನೈ, ಅಕ್ಟೋಬರ್ 11: ತಮಿಳುನಾಡಿನ ಮಹಾಬಲಿಪುರಂನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಅನೌಪಚಾರಿಕ ಸಭೆಯಲ್ಲಿ ಭಾಗವಹಿಸಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರಿಗೆ ಸ್ಥಳೀಯ ಸಂಸ್ಕೃತಿ, ಕಲೆ ಪರಿಚಯದ ಜೊತೆಗೆ ಊಟೋಪಚಾರದಲ್ಲೂ ತಮಿಳು ಸಂಸ್ಕೃತಿಯ ವಿಶೇಷ ಖಾದ್ಯಗಳನ್ನು ಉಣಬಡಿಸಲಾಗಿದೆ.
ಎರಡು ದಿನಗಳ ಭಾರತದ ಪ್ರವಾಸದಲ್ಲಿರುವ ಚೀನಾ ಅಧ್ಯಕ್ಷರು ಇಂದು ಚೆನ್ನೈನ ಐತಿಹಾಸಿಕ ನಗರಿಯಲ್ಲಿ ಪ್ರಧಾನಿ ಮೋದಿ ಜೊತೆ ವಿಹರಿಸಿದರು. ತಮಿಳುನಾಡಿನ ಸಾಂಪ್ರದಾಯಿಕ ಉಡುಗೆ ಬಿಳಿ ಪಂಚೆ, ಶರ್ಟ್ ಮತ್ತು ಶಲ್ಯ ಧರಿಸಿದ್ದ ಪ್ರಧಾನಿ ಮೋದಿ ಹಾಗೂ ಕ್ಸಿ ಜಿನ್ಪಿಂಗ್ ಮಹಾಬಲಿಪುರಂ ದೇಗುಲವನ್ನು ಸುತ್ತು ಹಾಕಿ ಅಲ್ಲಿನ ವಾಸ್ತುಶಿಲ್ಪ ಕಂಡರು. ನರೇಂದ್ರ ಮೋದಿಯವರು ಜಿನ್ಪಿಂಗ್ಗೆ ವಿವರಣೆ ನೀಡಿದರು.
ಬಂಗಾಳಕೊಲ್ಲಿ ಹೊಂದಿಕೊಂಡಿರುವ ಮಾಮಲ್ಲಪುರಂ ಬಂದರು ಜೊತೆಗೆ ವಾಸ್ತುಶಿಲ್ಪ ಶ್ರೀಮಂತಿಕೆ ಹೊಂದಿದೆ. ಪಂಚರಥ, ಕೃಷ್ಣನ ಬೆಣ್ಣೆಮುದ್ದೆ ಬಂಡೆ, ಅರ್ಜುನ ತಪಸ್ಸಿನ ಶಿಲಾಕೆತ್ತನೆ, ತೀರ ಪ್ರದೇಶದಲ್ಲಿ ದೇವಾಲಯವಿದೆ. ಯುನೆಸ್ಕೋ ಪಾರಂಪರಿಕ ಸ್ಮಾರಕಗಳನ್ನು ನೋಡಿದ ಬಳಿಕ ಇಬ್ಬರು ನಾಯಕರು ಮಧ್ಯಾಹ್ನ ಪಂಚರಥ ಕಾಪ್ಲೆಕ್ಸ್ನಲ್ಲಿ ಉಭಯ ನಾಯಕರು ಎಳೆನೀರು ಕುಡಿದು ಖುಷಿಪಟ್ಟಿದ್ದರು ನಂತರ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿದರು.ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ಗೆ ತಂಜಾವೂರ್ ಚಿತ್ರವನ್ನು ಪ್ರಧಾನಿ ಮೋದಿ ಉಡುಗೊರೆಯಾಗಿ ನೀಡಿದರು.

ರಾತ್ರಿಯ ಔತಣಕೂಟದಲ್ಲಿ ಜಿನ್ಪಿಂಗ್ ಹಾಗೂ ಪ್ರಧಾನಿ ಮೋದಿ ಜತೆಯಾಗಿ ಊಟ ಮಾಡಲಿದ್ದಾರೆ. ತಮಿಳುನಾಡಿನ ಪ್ರಸಿದ್ಧ ಅರ್ಚ ವಿಟ್ಟ ಸಾಂಬರ್ (ಕಾಳು ಸಾರು), ತಕ್ಕಾಲಿ ರಸಂ (ಟೊಮ್ಯಾಟೊ ಹಾಗೂ ಹುಣಸೇ ಹಣ್ಣಿನ ಸಾರು), ಕಡಲೈ ಕುರುಮಾ (ಕಡಲೆಕಾಳು ಗೊಜ್ಜು), ಕವನರಾಸಿ ಹಲ್ವಾ ಸೇರಿದಂತೆ ಮಾಂಸಾಹಾರವನ್ನೂ ತಯಾರಿಸಲಾಗಿದೆ. ಈ ಪೈಕಿ ತಕ್ಕಾಲಿ ರಸಂ ಸ್ವಲ್ಪ ಸೇವಿಸಿ ಜಿನ್ ಪಿಂಗ್ ಇಷ್ಟಪಟ್ಟಿದ್ದಾರೆ ಎಂಬ ವರದಿ ಇದೆ.

ಐಟಿಸಿ ಗ್ರ್ಯಾಂಡ್ ಚೋಳ ಐಷಾರಾಮಿ ಹೋಟೆಲ್ ನಲ್ಲಿ ತಂಗಿರುವ ಜಿನ್ ಪಿಂಗ್ ಅವರ ಹಂದಿ ಮಾಂಸ, ಈರುಳ್ಳಿ ಬನ್ಸ್, ಹಂದಿ ಕರುಳಿನ ಖಾದ್ಯ ಜೊತೆಗೆ ಹಸಿ ಸೊಪ್ಪಿನ ಸೂಪ್ ಇಷ್ಟಪಡುತ್ತಾರೆ.












Click it and Unblock the Notifications