Breaking; ಎಂ. ಕೆ. ಸ್ಟಾಲಿನ್ ಆರೋಗ್ಯ ಚೇತರಿಕೆ, ವಿಶ್ರಾಂತಿಗೆ ಸಲಹೆ
ಚೆನ್ನೈ, ಜುಲೈ 17; ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಸೋಮವಾರ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತದೆ.
ಭಾನುವಾರ ಚೆನ್ನೈನ ಕಾವೇರಿ ಆಸ್ಪತ್ರೆ ಎಂ. ಕೆ. ಸ್ಟಾಲಿನ್ ಆರೋಗ್ಯದ ಕುರಿತು ಹೆಲ್ತ್ ಬುಲೆಟಿನ್ ಹೊರಡಿಸಿದೆ. ಕೋವಿಡ್ ಸೋಂಕಿನಿಂದ ಅವರು ಚೇತರಿಸಿಕೊಂಡಿದ್ದಾರೆ ಎಂದು ಹೇಳಿದೆ.
ಎಂ. ಕೆ. ಸ್ಟಾಲಿನ್ ಐಸೋಲೇಷನ್ ಅವಧಿ ಸೋಮವಾರಕ್ಕೆ ಅಂತ್ಯಗೊಳ್ಳಲಿದೆ. ಜುಲೈ 18ರ ಸೋಮವಾರ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತದೆ ಎಂದು ಆಸ್ಪತ್ರೆ ತಿಳಿಸಿದೆ.

ಒಂದು ವಾರಗಳ ಮುಖ್ಯಮಂತ್ರಿಗಳಿಗೆ ಮನೆಯಲ್ಲಿ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಸೂಚನೆ ನೀಡಲಾಗಿದೆ ಎಂದು ಕಾವೇರಿ ಆಸ್ಪತ್ರೆ ಸಹ ಸಂಸ್ಥಾಪಕ ಮತ್ತು ಕಾರ್ಯಕಾರಿ ನಿರ್ದೇಶಕ ಡಾ. ಅರವಿಂದ್ ಸೆಲ್ವರಾಜ್ ಹೆಲ್ತ್ ಬುಲೆಟಿನ್‌ನಲ್ಲಿ ತಿಳಿಸಿದ್ದಾರೆ.
ಗುರುವಾರ ಎಂ. ಕೆ. ಸ್ಟಾಲಿನ್ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ಆಸ್ಪತ್ರೆ ಹೆಲ್ತ್ ಬುಲೆಟಿನ್‌ನಲ್ಲಿ ಹೇಳಿತ್ತು.
ಮಂಗಳವಾರ ಸ್ಟಾಲಿನ್‌ಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಸ್ವಲ್ಪ ಬಳಲಿದ್ದೇನೆ. ಕೋವಿಡ್ ಖಚಿತವಾಗಿದ್ದು, ಪ್ರತ್ಯೇಕವಾಸದಲ್ಲಿ ಉಳಿದಿದ್ದೇನೆ ಎಂದು ಸ್ಟಾಲಿನ್ ಟ್ವೀಟ್ ಮಾಡಿದ್ದರು.
ಪನ್ನೀರ್ ಸೆಲ್ವಂ ಆಸ್ಪತ್ರೆಗೆ ದಾಖಲು; ಎಐಎಡಿಎಂಕೆ ಪಕ್ಷದ ನಾಯಕ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂಗೆ ಕೋವಿಡ್ ಸೋಂಕು ತಗುಲಿದೆ. ಭಾನುವಾರ ಅವರು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆಸ್ಪತ್ರೆಯ ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯ ವೈದ್ಯರ ತಂಡ ಅವರ ಆರೋಗ್ಯದ ಬಗ್ಗೆ ನಿಗಾವಹಿಸಿದೆ ಎಂದು ಹೆಲ್ತ್ ಬುಲೆಟಿನ್‌ನಲ್ಲಿ ಮಾಹಿತಿ ನೀಡಲಾಗಿದೆ.
ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಪನ್ನೀರ್ ಸೆಲ್ವಂ ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.












Click it and Unblock the Notifications