ಮನೆಗೊಂದು ಹೆಲಿಕಾಪ್ಟರ್, 1 ಕೋಟಿ ರೂ. ಮತ್ತು ಚಂದ್ರನಲ್ಲಿಗೆ ಒಂದು ಟ್ರಿಪ್: ಅಭ್ಯರ್ಥಿಯ ಭರವಸೆ!
ಚೆನ್ನೈ, ಮಾರ್ಚ್ 25: ವಿಧಾನಸಭೆ ಚುನಾವಣೆಯ ಕಾವು ಜೋರಾಗುತ್ತಿರುವಂತೆಯೇ ಅಭ್ಯರ್ಥಿಗಳು ಮತದಾರರಿಗೆ ತರಹೇವಾರಿ ಆಶ್ವಾಸನೆಗಳನ್ನು ನೀಡುತ್ತಿದ್ದಾರೆ. ತಮಿಳುನಾಡಿನ ಪಕ್ಷೇತರ ಅಭ್ಯರ್ಥಿಯೊಬ್ಬರು ನೀಡಿರುವ ಭರವಸೆಗಳು ಕುತೂಹಲಕಾರಿಯಾಗಿದೆ.
ಪ್ರತಿ ಮನೆಗೂ ಒಂದು ಮಿನಿ ಹೆಲಿಕಾಪ್ಟರ್ ಮತ್ತು ಒಂದು ಕೋಟಿ ರೂಪಾಯಿ ಠೇವಣಿ, ಮದುವೆಗಳಿಗೆ ಚಿನ್ನಾಭರಣ, ಮೂರು ಅಂತಸ್ತಿನ ಮನೆ, ಅಷ್ಟೇ ಅಲ್ಲ ಚಂದ್ರನಲ್ಲಿಗೆ ಒಂದು ಟ್ರಿಪ್- ಇವು ಮದುರೈ ದಕ್ಷಿಣ ವಿಧಾನಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ದುಲಂ ಸರವಣನ್ ನೀಡಿರುವ ಭರವಸೆಗಳು.
ಏಪ್ರಿಲ್ 6ರಂದು ನಡೆಯಲಿರುವ ಚುನಾವಣೆಗೆ ದುಲಂ ಸರವಣನ್ ಬಿಡುಗಡೆ ಮಾಡಿರುವ ಪ್ರಣಾಳಿಕೆ ಗಮನ ಸೆಳೆದಿದೆ. ದಕ್ಷಿಣ ಮದುರೆ ಕ್ಷೇತ್ರದಲ್ಲಿ 13 ಅಭ್ಯರ್ಥಿಗಳ ಜತೆಗೆ ಸರವಣನ್ ಸ್ಪರ್ಧಿಸುತ್ತಿದ್ದಾರೆ. 'ರಾಜಕೀಯ ಪಕ್ಷಗಳ ಉಚಿತ ಕೊಡುಗೆಗಳ ಪೊಳ್ಳು ಭರವಸೆಗಳಿಗೆ ಬೀಳದಂತೆ ಜನರಲ್ಲಿ ಜಾಗೃತಿ ಮೂಡಿಸುವುದು ನನ್ನ ಗುರಿ. ವಿನಯವಂತಿಕೆಯ ಸಾಮಾನ್ಯ ವ್ಯಕ್ತಿಗಳನ್ನು ಅವರು ಆಯ್ಕೆ ಮಾಡಬೇಕು ಎಂದು ನಾನು ಬಯಸಿದ್ದೇನೆ' ಎಂದು 33 ವರ್ಷದ ಸರವಣನ್ ತಿಳಿಸಿದ್ದಾರೆ. ಅವರು ವೃತ್ತಿಯಿಂದ ಪತ್ರಕರ್ತ.

ಗೃಹಿಣಿಯರ ಮನೆಗೆಲಸದ ಹೊರೆ ತಗ್ಗಿಸಲು ರೋಬೋಟ್ ನೀಡುವುದು, ಕಾಲುವೆ ಸಮೀಪದ ಪ್ರತಿ ಮನೆಗಳಿಗೂ ದೋಣಿ, ಕ್ಷೇತ್ರವನ್ನು ತಂಪಾಗಿ ಇರಿಸಲು 300 ಅಡಿ ಎತ್ತರದ ಕೃತಕ ಹಿಮ ಪರ್ವತ ನಿರ್ಮಾಣ, ಬಾಹ್ಯಾಕಾಶ ಸಂಶೋಧನಾ ಕೇಂದ್ರ ಮತ್ತು ರಾಕೆಟ್ ಉಡಾವಣಾ ನೆಲೆ ಸ್ಥಾಪನೆಯ ಭರವಸೆಗಳನ್ನು ಅವರು ನೀಡಿದ್ದಾರೆ.
ಅವಿವಾಹಿತರಾಗಿರುವ ಸರವಣನ್, ತಮ್ಮ ವಯಸ್ಸಾದ ಬಡ ಪೋಷಕರ ಜತೆ ವಾಸಿಸುತ್ತಿದ್ದಾರೆ. ತಮ್ಮ ನಾಮಪತ್ರ ಸಲ್ಲಿಸಲು 20,000 ಠೇವಣಿಗಾಗಿ ಬಡ್ಡಿ ರೂಪದಲ್ಲಿ ಸಾಲ ಪಡೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.












Click it and Unblock the Notifications