ಪರಪುರುಷನ ತೆಕ್ಕೆಗೆ ಬಿದ್ದ ಪತ್ನಿಯನ್ನು ಕೊಚ್ಚಿ ಕೊಂದ ಪತಿ
ಮದುರೈ, ಜುಲೈ 23: ಅಕ್ರಮ ಸಂಬಂಧದಲ್ಲಿ ಸುಖ ಕಾಣುತ್ತಿದ್ದ ಪತ್ನಿಯನ್ನು ಆಕೆಯ ಪತಿ ಭೀಕರವಾಗಿ ಹತ್ಯೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ದಂಪತಿಯ 10 ವರ್ಷದ ಮಗ ತನ್ನ ತಾಯಿಯನ್ನು ತಂದೆಯೇ ಕೊಚ್ಚಿ ಕೊಲೆ ಮಾಡಿದ ಭೀಕರ ದೃಶ್ಯವನ್ನು ಕಣ್ಣಾರೆ ಕಂಡಿದ್ದಾನೆ.
37 ವರ್ಷ ವಯಸ್ಸಿನ ಸೀಲೈಕ್ಕರಿ ಎಂಬುವವರನ್ನು ಕೊಂದ ಆರೋಪದ ಮೇಲೆ 47 ವರ್ಷ ವಯಸ್ಸಿನ ಕೆ ಪೆರಿಯಸ್ವಾಮಿ ಅವರನ್ನು ಬಂಧಿಸಲಾಗಿದೆ. ಪಕ್ಕದ ಮನೆಯಾತನೊಡನೆ ನನ್ನ ಪತ್ನಿ ಚಕ್ಕಂದವಾಡುತ್ತಿದ್ದಳು. ಅದಕ್ಕಾಗಿ ಆಕೆಯನ್ನು ನಾನು ಕೊಂದೆ ಎಂದು ಪೆರಿಯಾಸ್ವಾಮಿ ತನ್ನ ತಪ್ಪೊಪ್ಪಿಕೊಂಡಿದ್ದಾನೆ.
ಬೇಡ ನನಗೆ ಮೋಸ ಮಾಡಬೇಡ. ನಾನು ಎಷ್ಟೋ ಸಾರಿ ಅವಳಿಗೆ ಹೇಳಿದ್ದೆ ಆದರೆ, ಅವಳು ನನ್ನ ಮಾತನ್ನು ತಿರಸ್ಕರಿಸಿ ನೆರೆ ಮನೆಯವನೊಂದಿಗೆ ದೈಹಿಕ ಸಂಬಂಧ ಬೆಳೆಸಿದಳು ಎಂದು ಪೆರಿಯಾಸ್ವಾಮಿ ಹೇಳಿದ್ದಾನೆ.

ಈ ಘಟನೆಗೆ ಸಾಕ್ಷಿಯಾದ 10 ವರ್ಷದ ಮಗನಲ್ಲದೆ ಇನ್ನೂ ಇಬ್ಬರು ಹೆಣ್ಣು ಮಕ್ಕಳನ್ನು ಈ ದಂಪತಿ ಹೊಂದಿದ್ದಾರೆ. ಘಟನೆ ನಡೆದ ದಿನ ಸೀಲಕ್ಕಾರಿ ತನ್ನ 10 ವರ್ಷದ ಮಗನೊಂದಿಗೆ ಮನೆಯ ಸಾಕುಪ್ರಾಣಿಗಳನ್ನು ಮೇಯಿಸಲು ಹೊರಕ್ಕೆ ಕರೆದುಕೊಂಡು ಹೋಗಿದ್ದರು. ಸಂಜೆ ವೇಳೆಗೆ ಬಂದು ಸುಸ್ತಾಗಿ ಮಂಚದ ಮೇಲೆ ಮಲಗಿಬಿಟ್ಟರು. ಈ ಸಂದರ್ಭದಲ್ಲಿ ಬಾಲಕ ತಾಯಿಯ ಮೊಬೈಲ್ ಫೋನ್ ಹಿಡಿದುಕೊಂಡು ಆಟವಾಡುತ್ತಿದ್ದ. ಕೆಲಸದ ಮೇಲೆ ಹೊರಕ್ಕೆ ಹೋಗಿದ್ದ ಪೆರಿಯಾಸ್ವಾಮಿ ಮನೆಗೆ ಹಿಂತಿರುಗಿದ ತಕ್ಷಣವೇ ಪತ್ನಿಗೆ ಕಾಲಿನಿಂದ ಒದ್ದಿದ್ದಾನೆ. ಗಾಬರಿಯಿಂದ ಆಕೆ ಎಚ್ಚರಗೊಂಡಿದ್ದಾಳೆ.
ತಾಯಿಯನ್ನು ಹೊಡೆಯುವುದನ್ನು ಕಂಡ ಮಗ ಅಡ್ಡಬಂದಾಗ ಆತನಿಗೂ ಪೆಟ್ಟು ಬಿದ್ದಿದೆ. ಇಬ್ಬರ ನಡುವೆ ಜೋರು ಜಗಳವಾಗಿದೆ. ಅಲ್ಲೇ ಸಮೀಪದಲ್ಲಿದ್ದ ಮಚ್ಚು ತೆಗೆದುಕೊಂಡು ಪತ್ನಿಯನ್ನು ಕೊಚ್ಚಿ ಹಾಕಿ ಪರಾರಿಯಾಗಿದ್ದಾನೆ. ಈ ಘಟನೆಯಿಂದ ದಂಪತಿಯ ಮೂವರು ಮಕ್ಕಳು ತೀವ್ರವಾಗಿ ಗಾಬರಿಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications