ತಲೆತಗ್ಗಿಸುವಂಥ ಆದೇಶ ಹಿಂಪಡೆದ ಮದ್ರಾಸ್ ನ್ಯಾಯಮೂರ್ತಿ
ಚೆನ್ನೈ, ಜು. 11 : ನ್ಯಾಯ ಕೊಡಿಸುವ ಉನ್ನತ ಸ್ಥಾನದಲ್ಲಿ ಕುಳಿತು, ನ್ಯಾಯ ಕೇಳಲು ಬಂದ ಅತ್ಯಾಚಾರ ಸಂತ್ರಸ್ತೆಗೆ ಅತ್ಯಾಚಾರಿಯೊಂದಿಗೆ 'ಒಪ್ಪಂದ' ಮಾಡಿಕೊ ಎಂದು ಆದೇಶಿಸಿದ್ದ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಯನ್ನು ಸರ್ವೋಚ್ಚ ನ್ಯಾಯಾಲಯ ಕಡೆಗೂ ಸರಿದಾರಿಗೆ ಬರುವಂತೆ ಮಾಡಿದೆ.
ಮಧ್ಯಸ್ಥಿಕೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿರುವ ನ್ಯಾಯಮೂರ್ತಿ ಪಿ ದೇವದಾಸ್, ಅತ್ಯಾಚಾರ ಎಸಗಿರುವ ಪಿ ಮೋಹನ್ ಜುಲೈ 13ರೊಳಗೆ ಪೊಲೀಸರೆದಿರು ಶರಣಾಗಬೇಕು ಮತ್ತು ಕಡ್ಲೋರ್ ನಲ್ಲಿರುವ ಮಹಿಳಾ ನ್ಯಾಯಾಲಯದೆದಿರು ಹಾಜರಾಗಬೇಕು ಎಂದು ಶುಕ್ರವಾರ ಆದೇಶಿಸಿದ್ದಾರೆ.
ಅತ್ಯಾಚಾರ ಪ್ರಕರಣಗಳಲ್ಲಿ 'ಮಧ್ಯಸ್ಥಿಕೆ'ಗೆ ಯಾವುದೇ ಅವಕಾಶ ನೀಡಬಾರದು, ಅತ್ಯಾಚಾರಿಗೆ ಶಿಕ್ಷೆಯಾಗಲೇಬೇಕು ಎಂದು ಭಾರತದ ಸುಪ್ರೀಂ ಕೋರ್ಟ್ ಜುಲೈ 1ರಂದು, ಮಧ್ಯಪ್ರದೇಶ ವರ್ಸಸ್ ಮದನ್‌ಲಾಲ್ ಎಂಬ ಕೇಸಿನಲ್ಲಿ ಮಹತ್ವದ ಆದೇಶ ನೀಡಿತ್ತು. [ರೇಪ್ ಆಯ್ತಾ, ಒಪ್ಪಂದ ಮಾಡ್ಕೊಳ್ಳಿ ಅಂದ ಮದ್ರಾಸ್ ಜಡ್ಜ್!]

ಅತ್ಯಾಚಾರಕ್ಕೊಳಗಾದ ತಾಯಿಗಿಂತ ಆಕೆಯ ಮಗುವಿನ ಭವಿಷ್ಯ ಹೆಚ್ಚಿನದು. ಆದ್ದರಿಂದ ಅತ್ಯಾಚಾರಿಯೊಂದಿಗೆ 'ಒಪ್ಪಂದ' ಮಾಡಿಕೊಂಡು ಜೀವನ ಸಾಗಿಸು ಎಂದು ನ್ಯಾ. ದೇವದಾಸ್ ಟೀಕಾರ್ಹವಾದ ಆದೇಶ ನೀಡಿದ್ದರು. ಸಂತ್ರಸ್ತೆ 15 ವರ್ಷದವಳಿದ್ದಾಗ ಮೋಹನ್ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ನಂತರ ಒಂದು ವರ್ಷದಲ್ಲಿ ಆಕೆಗೆ ಮಗುವಾಗಿತ್ತು.
ಈ ಆದೇಶ ದೇಶದೆಲ್ಲೆಡೆ ತೀವ್ರ ಟೀಕೆಗೊಳಗಾಗಿತ್ತು. ಮಹಿಳಾ ಹೋರಾಟಗಾರ್ತಿಯರು ನ್ಯಾಯಮೂರ್ತಿಯ ವಿರುದ್ಧ ತಿರುಗಿಬಿದ್ದಿದ್ದರು. ಎಷ್ಟೆಲ್ಲ ಪ್ರತಿಭಟನೆಗಳು ನಡೆದಿದ್ದರೂ, ತಮ್ಮ ಆದೇಶವನ್ನು ನ್ಯಾಯಮೂರ್ತಿ ದೇವದಾಸ್ ಸಮರ್ಥಿಸಿಕೊಂಡಿದ್ದರು. ಮಧ್ಯಸ್ಥಿಕೆ ತಜ್ಞರು ಕೂಡ ಈ ಆದೇಶಕ್ಕೆ ಅಚ್ಚರಿ ವ್ಯಕ್ತಪಡಿಸಿ, ಇದು ತಮ್ಮ ಪರಿಧಿಯ ಹೊರಗಿದೆ ಎಂದು ಪ್ರತಿರೋಧ ವ್ಯಕ್ತಪಡಿಸಿದ್ದರು.
ಮೋಹನ್ ಅತ್ಯಾಚಾರವೆಸಗಿದ್ದು ಸಾಬೀತಾಗಿದ್ದರಿಂದ ಕಡ್ಲೋರ್ ನ್ಯಾಯಾಲಯ ಜುಲೈ 22, 2014ರಲ್ಲಿ ಆತನಿಗೆ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 2 ಲಕ್ಷ ರು. ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಮೋಹನ್ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದ. ಅಲ್ಲಿ ನ್ಯಾಯಮೂರ್ತಿ ದೇವದಾಸ್ ಸಮಾಜವೇ ತಲೆತಗ್ಗಿಸುವಂಥ ಆದೇಶ ನೀಡಿದ್ದರು. [ವಿಡಿಯೋ ವಿಡಂಬನೆ : ಅತ್ಯಾಚಾರಕ್ಕೆ ಕಾರಣ ಯಾರು?]












Click it and Unblock the Notifications