ಹಿಜಾಬ್ ತೀರ್ಪು ಕೊಟ್ಟ ಸಿಜೆಗೆ ಬೆದರಿಕೆ: ತಿರುಪತ್ತೂರು ಜೈಲಿನಲ್ಲಿ ಆರೋಪಿಗಳು
ಮದುರೈ/ಬೆಂಗಳೂರು, ಮಾರ್ಚ್ 20: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಮಧುರೈ ಪೊಲೀಸರು ಬಂಧಿಸಿದ್ದು, ತಿರಪತ್ತೂರು ಜೈಲಿನಲ್ಲಿರಿಸಲಾಗಿದೆ. ತಮಿಳುನಾಡಿನ ತೌಹೀದ್ ಜಮಾತ್ ಸಂಘಟನೆಯ ಮೂವರು ಪದಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.
ಹಿಜಾಬ್ ಪ್ರಕರಣದಲ್ಲಿ ತೀರ್ಪು ನೀಡಿದ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಆವಸ್ಥಿಗೆ ತೌಹೀದ್ ಜಮಾತ್ ಸಂಘಟನೆಯ ಸದಸ್ಯರು ಸಾರ್ವಜನಿಕ ಸಭೆಯಲ್ಲಿ ಬೆದರಿಕೆ ಹಾಕಿದ್ದರು. ಮದುರೈನ ಕೋರಿಪಾಳ್ಯಂನಲ್ಲಿ ಮಾರ್ಚ್ 17ರಂದು ಭಾಷಣ ಮೂಲಕ ಮುಖ್ಯ ನ್ಯಾಯಮೂರ್ತಿಗಳಿಗೆ ಜೀವ ಬೆದರಿಕೆ ಹಾಕಿದ್ದ ಕಾರ್ಯಕರ್ತ ರಹಮತ್ ಉಲ್ಲಾ ಸೇರಿದಂತೆ ಮೂವರು ಪದಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಜಾರ್ಖಂಡ್ ಹೈಕೋರ್ಟ್ ನ್ಯಾಯಾಧೀಶರ ಸಾವಿನ ಉದಾಹರಣೆ ಉಲ್ಲೇಖಿಸಿದ ಪದಾಧಿಕಾರಿಯೊಬ್ಬ ಹಿಜಾಬ್ ತೀರ್ಪಿನ ಮೇಲೆ ನ್ಯಾಯಾಧೀಶರು ಈಗ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

ಮಧುರೈ ಪೊಲೀಸರು ಮೂವರು ಟಿಎನ್‌ಟಿಜೆ ಪದಾಧಿಕಾರಿಗಳ ವಿರುದ್ಧ ಐಪಿಸಿಯ 153(ಎ), 505(1)(ಸಿ), 505(2), 506(1) ಆರ್/ಡಬ್ಲ್ಯು 109 ಐಪಿಸಿ ಸೇರಿದಂತೆ ಐದು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಹಿಜಾಬ್ ಕುರಿತು ತೀರ್ಪು ನೀಡಿದ ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶರಿಗೆ ಕೊಲೆ ಬೆದರಿಕೆ ಹಾಕಿದ್ದ ಇಬ್ಬರನ್ನು ತಮಿಳುನಾಡು ಪೊಲೀಸರು ಶನಿವಾರ ಬಂಧಿಸಿದ್ದರು. ಹಿಜಾಬ್ ಪ್ರಕರಣದ ಕುರಿತು ತೀರ್ಪು ನೀಡುವಾಗ ನ್ಯಾಯಾಲಯವು ತರಗತಿಯಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿ, ಆದೇಶ ಹೊರಡಿಸಿದೆ. ಕೋವೈ ರಹಮತುಲ್ಲಾ ಅವರನ್ನು ತಿರುನಲ್ವೇಲಿಯಲ್ಲಿ ಬಂಧಿಸಲಾಗಿದ್ದು, 44 ವರ್ಷದ ಎಸ್ ಜಮಾಲ್ ಮೊಹಮ್ಮದ್ ಉಸ್ಮಾನಿಯನ್ನು ತಂಜಾವೂರಿನಲ್ಲಿ ಬಂಧಿಸಲಾಗಿದೆ. ತಿರುಪತ್ತೂರು ಜೈಲಿನಲ್ಲಿರಿಸಲಾಗಿದೆ.

ಕರ್ನಾಟಕ ಹೈಕೋರ್ಟ್‌ನ ತ್ರಿಸದಸ್ಯ ಪೀಠವು ತನ್ನ ತೀರ್ಪಿನಲ್ಲಿ ಹಿಜಾಬ್ ಇಸ್ಲಾಂನ ಕಡ್ಡಾಯ ಅಭ್ಯಾಸವಲ್ಲ ಮತ್ತು ಹಿಜಾಬ್ ಬಹಿಷ್ಕರಿಸುವುದು ಸಮಂಜಸವಾದ ನಿರ್ಬಂಧಗಳ ಅಡಿಯಲ್ಲಿ ಬರುತ್ತದೆ ಎಂದು ಹೇಳಿದೆ. ಫೆಬ್ರವರಿ 5 ರಂದು ಕರ್ನಾಟಕ ಸರ್ಕಾರದ ಆದೇಶವನ್ನು ನ್ಯಾಯಾಲಯ ಎತ್ತಿಹಿಡಿದಿದೆ, ಶಿಕ್ಷಣ ಸಂಸ್ಥೆಗಳು ಕಡ್ಡಾಯಗೊಳಿಸಿದ ಸಮವಸ್ತ್ರವನ್ನು ಅನುಸರಿಸಲು ವಿದ್ಯಾರ್ಥಿಗಳಿಗೆ ಕೇಳಿಕೊಂಡಿದೆ.
ಕರ್ನಾಟಕ ಹೈಕೋರ್ಟ್‌ನ ತೀರ್ಪಿನ ವಿರುದ್ಧ ಹಲವಾರು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದ ಸಂಘಟನೆಗಳು ತಮಿಳುನಾಡಿನಾದ್ಯಂತ ಪ್ರತಿಭಟನೆ ನಡೆಸಿದ್ದವು. ತಮಿಳುನಾಡಿನ ಮಧುರೈನಲ್ಲಿ ನಡೆದ ಇಂತಹ ಪ್ರತಿಭಟನಾ ಸಭೆಯ ವಿಡಿಯೋ ತುಣುಕು ಎರಡು ದಿನಗಳ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ತಮಿಳುನಾಡು ತೌಹೀದ್ ಜಮಾತ್ (ಟಿಎನ್‌ಟಿಜೆ) ಲೆಕ್ಕಪರಿಶೋಧನಾ ಸಮಿತಿಯ ಸದಸ್ಯ ಕೋವೈ ರಹಮತುಲ್ಲಾ ಅವರು ತೀರ್ಪು ನೀಡಿದ ನ್ಯಾಯಾಧೀಶರನ್ನು ಜಾರ್ಖಂಡ್‌ನಲ್ಲಿ ಬೆಳಗಿನ ವಾಕ್ ಮಾಡುವಾಗ ಹತ್ಯೆ ಮಾಡಿದ್ದನ್ನು ಉಲ್ಲೇಖಿಸಿ ಭಾಷಣ ಮಾಡಿದ್ದರು.
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ನಿಂದಿಸಿದ್ದಾರೆ ಎಂದು ಆರೋಪಿಸಿ ಟಿಎನ್‌ಟಿಜೆ ಪ್ರಧಾನ ಕಚೇರಿಯ ಅಧ್ಯಕ್ಷ ಎಸ್ ಜಮಾಲ್ ಮೊಹಮ್ಮದ್ ಉಸ್ಮಾನಿ ಮತ್ತು ತಂಜಾವೂರು ಜಿಲ್ಲಾ ನಾಯಕ ರಾಜಿಕ್ ಮೊಹಮ್ಮದ್ ಅವರನ್ನು ತಂಜಾವೂರಿನಲ್ಲಿ ಪೊಲೀಸರು ಬಂಧಿಸಿದ್ದರು.












Click it and Unblock the Notifications