ರಫೇಲ್ ಡಿಲ್ ಬಗ್ಗೆ ಮೌನ ಮುರಿದ ಕಮಲ್ ಹಾಸನ್
ಚೆನ್ನೈ, ಸೆಪ್ಟೆಂಬರ್ 28: ವಿವಾದಾತ್ಮಕ ರಫೇಲ್ ಡೀಲ್ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದ್ದರೂ, ಮೌನವಾಗಿಯೇ ಇದ್ದ ನಟ, ರಾಜಕಾರಣಿ ಕಮಲ್ ಹಾಸನ್ ಇದೀಗ ಮೌನ ಮುರಿದಿದ್ದಾರೆ.
'ರಫೇಲ್ ಡೀಲ್ ಕುರಿತಂತೆ ನಮಗೂ ಅನುಮಾನವಿದೆ. ಈ ಕುರಿತು ಸಮಗ್ರ ತನಿಖೆ ನಡೆಯಬೇಕು' ಎಂದು ಮಕ್ಕಳ್ ನೀತಿ ಮೈಯಂ ಪಕ್ಷದ ಮುಖ್ಯಸ್ಥರೂ ಆದ, ನಟ ಕಮಲ್ ಹಾಸನ್ ಅಭಿಪ್ರಾಯಪಟ್ಟಿದ್ದಾರೆ.
"ನಾವು ಯಾರನ್ನೂ ಅಪರಾಧಿಗಳು ಎಂದು ಹೇಳುತ್ತಿಲ್ಲ. ಆದರೆ ಕೆಲವರ ಮೇಲೆ ಅನುಮಾನವಿದೆಯಷ್ಟೇ. ಆದ್ದರಿಂದ ಈ ಕುರಿತು ತನಿಖೆ ನಡೆಯಬೇಕು ಎಂಬುದಷ್ಟೇ" ನಮ್ಮ ವಿನಂತಿ ಎಂದು ಅವರು ಹೇಳಿದ್ದಾರೆ.

ರಫೇಲ್ ಯುದ್ಧ ವಿಮಾನ ಖರೀದಿ ವಿಷಯಕ್ಕೆ ಸಂಬಂಧಿಸಿದಂತೆ ಭಾರತವು ಫ್ರಾನ್ಸ್ ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಇದರಲ್ಲಿ ಸಾಕಷ್ಟು ಅವ್ಯವಹಾರವಾಗಿದೆ ಎಂದು ಆರೋಪಿಸಲಾಗಿದೆ. ಫ್ರಾನ್ ನ ಮಾಜಿ ಅಧ್ಯಕ್ಷ ಫ್ರಾಂಕೋ ಹೋಲ್ಯಾಂಡ್ ಇತ್ತೀಚೆಗಷ್ಟೇ, 'ರಫೇಲ್ ಯುದ್ಧ ವಿಮಾನಗಳ ಬಿಡಿ ಭಾಗಗಳ ತಯಾರಿಕೆಗೆ ಅನಿಲ್ ಅಂಬಾನಿ ಅವರ ರಿಲಯನ್ಸ್ ಡಿಫೆನ್ಸ್ ಇಂಡಸ್ಟ್ರೀಸ್ ಹೆಸರನ್ನೇ ಸೂಚಿಸುವಂತೆ ಭಾರತವೇ ಫ್ರಾನ್ಸ್ ಅನ್ನು ಕೋರಿತ್ತು' ಎಂಬ ಹೇಳಿಕೆ ನೀಡಿದ್ದರು.
ರಫೇಲ್ ಯುದ್ಧ ವಿಮಾನಗಳ ಬಿಡಿಭಾಗಗಳ ತಯಾರಿಕೆಗೆ ಎಚ್ ಎಎಲ್ ಬದಲು ರಿಲಯನ್ಸ್ ಡಿಫೆನ್ಸ್ ಇಂಡಸ್ಟ್ರೀಸ್ ಗೆ ಅವಕಾಶ ನೀಡಿದ ಸರ್ಕಾರದ ಕ್ರಮವನ್ನು ವಿಪಕ್ಷಗಳು ವಿರೋಧಿಸುತ್ತಿವೆ.












Click it and Unblock the Notifications