ವೈರಲ್ ಆದ ಜಯಲಲಿತಾ ಆಸ್ಪತ್ರೆ ಬಿಲ್! ಲೀಕ್ ಆಗಿದ್ದು ಹೇಗೆ?

ಚೆನ್ನೈ, ಡಿಸೆಂಬರ್ 19: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಚಿಕಿತ್ಸೆಗೆ ವೆಚ್ಚವಾದ ಆಸ್ಪತ್ರೆಯ ಬಿಲ್ ಸೋರಿಕೆಯಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಗೌಪ್ಯವಾಗಿದ್ದ ಅದು ಜಯಲಲಿತಾ ಸಾವಿನ ಕುರಿತು ತನಿಖೆ ನಡೆಸುತ್ತಿರುವ ಆರ್ಮುಗಂ ಸ್ವಾಮಿ ಸಮಿತಿ ಮತ್ತು ಆಸ್ಪತ್ರೆಗೆ ಮಾತ್ರವಲ್ಲದೆ ಮತ್ಯಾರಿಗೂ ಸಿಕ್ಕಿರಲಿಲ್ಲ. ಆದರೆ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಿಲ್ ವೈರಲ್ ಆಗಿದೆ.
ಜಯಾ ಆಸ್ಪತ್ರೆಯಲ್ಲಿದ್ದಾಗ 75 ದಿನಗಳೂ ಸಿಸಿಟಿವಿ ಸ್ವಿಚ್ಡ್ ಆಫ್ ಆಗಿದ್ದೇಕೆ?
ಜಯಲಲಿತಾ ಚಿಕಿತ್ಸೆಗೆ 6,85,00,000 ರೂ. ವೆಚ್ಚವಾಗಿದೆ ಎಂದು ಆಸ್ಪತ್ರೆ ಬಿಲ್ ವಿವರ ನೀಡಿದೆ. ಮಾತ್ರವಲ್ಲ, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಸುಮಾರು 1,17,04,925 ಕೋಟಿ ರೂ.ನಷ್ಟು ಕೇವಲ ಊಟ, ತಿಂಡಿಗೇ ವೆಚ್ಚವಾಗಿದೆ ಎಂದು ಈ ಬಿಲ್ ನಲ್ಲಿ ಹೇಳಲಾಗಿದೆ.
ಅನಾರೋಗ್ಯದ ಕಾರಣ 2016 ರ ಸೆಪ್ಟೆಂಬರ್ ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಜಯಲಲಿತಾ ಅವರು ಡಿಸೆಂಬರ್ 5, 2016 ರಂದು ಇಹಲೋಕ ತ್ಯಜಿಸಿದ್ದರು.
ಜಯಲಲಿತಾ ಸಾವಿನ ತನಿಖೆಗೆ ತಿರುವು; ಆಡಿಯೋ ಕ್ಲಿಪ್ಪಿಂಗ್ ಬಿಡುಗಡೆ
ಅವರ ಸಾವು ಸಹಜವಲ್ಲ ಎಂದು ಅವರ ಆಪ್ತೇಷ್ಟರು ಮತ್ತು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ ಕಾರಣ ಅವರ ಸಾವಿನ ಕುರಿತು ತನಿಖೆ ನಡೆಸಲು ಆರ್ಮುಗಂ ಸ್ವಾಮಿ ಸಮಿತಿಯನ್ನು ನೇಮಿಸಲಾಗಿದ್ದು, ಈ ಸಮಿತಿಯು ಸಮಗ್ರ ತನಿಖೆ ನಡೆಸುತ್ತಿದೆ. ಕೆಲವು ಗೌಪ್ಯ ವಿಚಾರಗಳು ಸೋರಿಕೆಯಾಗದಂತೆ ಅದು ಎಚ್ಚರಿಕೆ ವಹಿಸಿದೆ. ಆದರೆ ಜಯಲಲಿತಾ ಆಸ್ಪತ್ರೆಯ ವೆಚ್ಚದ ವಿವರ ಇದೀಗ ಸೋರಿಕೆಯಾಗಿರುವುದು ಸಮಿತಿಗೂ ಅಚ್ಚರಿ ಮೂಡಿಸಿದೆ.