ಜಯಲಲಿತಾ ಹುಟ್ಟುಹಬ್ಬದಂದು ಜನಿಸಿದ ಮಕ್ಕಳಿಗೆ ಚಿನ್ನದ ಉಂಗುರ ಗಿಫ್ಟ್
ಚೆನ್ನೈ, ಫೆಬ್ರವರಿ 25: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಹುಟ್ಟುಹಬ್ಬವನ್ನು ಫೆಬ್ರವರಿ 24ರಂದು ತಮಿಳುನಾಡಿನಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಅಂದು ಹುಟ್ಟಿದ ಮಕ್ಕಳಿಗೆ ತಮಿಳುನಾಡು ಸರ್ಕಾರವು ಚಿನ್ನದುಂಗುರವನ್ನು ಉಡುಗೊರೆಯಾಗಿ ನೀಡಿದೆ. ಜಯಲಲಿತಾ ಅವರ ಹುಟ್ಟುಹಬ್ಬವನ್ನು ಸರ್ಕಾರದ ವತಿಯಿಂದಲೇ ಆಚರಿಸಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅಧಿವೇಶನದಲ್ಲಿ ಹೇಳಿದ್ದರು.
ಅಲ್ಲದೆ, ಜಯಲಲಿತಾ ಅವರ ಜನ್ಮದಿನವನ್ನು ಮಹಿಳಾ ಮತ್ತು ಮಕ್ಕಳ ಸುರಕ್ಷತಾ ದಿನ ಎಂದು ಘೋಷಿಸುವುದಾಗಿಯೂ ಹೇಳಿದ್ದರು. ಅದರಂತೆ ಇನ್ನು ಪ್ರತಿವರ್ಷವೂ ಫೆ. 24ನ್ನು ಸರ್ಕಾರಿ ದಿನವನ್ನಾಗಿ ಆಚರಿಸಲಾಗುತ್ತದೆ.

ಅಂತೆಯೇ ಜಯಲಲಿತಾ ಅವರ ಹುಟ್ಟುಹಬ್ಬವನ್ನು ಸೋಮವಾರ ಆಚರಿಸಲಾಯಿತು. ತಮಿಳುನಾಡಿನ ರಾಯಪುರಂನಲ್ಲಿರುವ ಆರ್ಎಸ್ಆರ್ಎಂ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ಹುಟ್ಟಿದ ಮಕ್ಕಳಿಗೆ ಸಚಿವ ಡಿ. ಜಯಕುಮಾರ್ ಚಿನ್ನದ ಉಂಗುರಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.
ಜಯಲಲಿತಾ ಅವರ ಹೆಸರಿನಲ್ಲಿ ಅನೇಕ ಯೋಜನೆಗಳನ್ನು ಕೂಡ ತಮಿಳುನಾಡು ಸರ್ಕಾರ ಘೋಷಿಸಿದೆ. ಮುಂದಿನ ವರ್ಷಗಳಲ್ಲೂ ಫೆ. 24ರಂದು ಜಯಲಲಿತಾ ಹುಟ್ಟುಹಬ್ಬದ ಪ್ರಯುಕ್ತ ಅಂದು ಜನಿಸಿದ ಮಕ್ಕಳಿಗೆ ಚಿನ್ನದ ಉಂಗುರಗಳನ್ನು ನೀಡುವುದಾಗಿ ಸರ್ಕಾರ ಘೋಷಿಸಿದೆ.
ಜಯಲಲಿತಾ ಸ್ಮರಣಾರ್ಥ ಎಐಎಡಿಎಂಕೆ ಪಕ್ಷ ಬಡವರಿಗೆ ನೆರವು ನೀಡಲು ಮತ್ತು ವೈದ್ಯಕೀಯ ಶಿಬಿರ ನಡೆಸಲು ಕಾರ್ಯಕರ್ತರಿಗೆ ಸೂಚನೆ ನೀಡಿತ್ತು.












Click it and Unblock the Notifications