ಇಂಗ್ಲಿಷ್‌ನಲ್ಲೇ ಪ್ರತಿಕ್ರಿಯಿಸಿ; ಹಿಂದಿಯಲ್ಲಿ ಪತ್ರ ಬರೆದಿದ್ದ ಕೇಂದ್ರಕ್ಕೆ ನ್ಯಾಯಾಲಯದ ನಿರ್ದೇಶನ
ನವದೆಹಲಿ, ಆಗಸ್ಟ್ 20: ರಾಜ್ಯದ ಅಧಿಕಾರಿಗಳು, ಜನತೆ, ಸಂಸದರು ಹಾಗೂ ಜನಪ್ರತಿನಿಧಿಗಳು ಯಾವ ಭಾಷೆಯಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತಾರೋ ಅದೇ ಭಾಷೆಯಲ್ಲಿಯೇ ಕೇಂದ್ರ ಸರ್ಕಾರವೂ ಅವರಿಗೆ ಪ್ರತಿಕ್ರಿಯೆ ನೀಡಬೇಕು ಎಂದು ಮದ್ರಾಸ್ ಹೈಕೋರ್ಟ್ ಕೇಂದ್ರಕ್ಕೆ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿ ಎನ್ ಕಿರುಬಾಕರನ್ ಹಾಗೂ ಎಂ ದೊರೈಸ್ವಾಮಿ ಅವರಿದ್ದ ವಿಭಾಗೀಯ ಪೀಠ, ಮದುರೈ ಸಂಸದ ವೆಂಕಟೇಶನ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಕೇಂದ್ರಕ್ಕೆ ಈ ಮಾತನ್ನು ಹೇಳಿದೆ.

'ಕೇಂದ್ರ ಸರ್ಕಾರ ಭಾರತದ ಅಧೀಕೃತ ಭಾಷೆಗಳ ಕಾಯ್ದೆ, 1963 ಅನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ರಾಜ್ಯದಿಂದ ಇಂಗ್ಲಿಷ್ ಭಾಷೆಯಲ್ಲಿ ಪತ್ರ ಬಂದರೆ ಅದಕ್ಕೆ ಇಂಗ್ಲಿಷ್‌ನಲ್ಲಿಯೇ ಪ್ರತಿಕ್ರಿಯೆ ನೀಡುವುದು ಕೇಂದ್ರದ ಕರ್ತವ್ಯ. ಆ ಕರ್ತವ್ಯವನ್ನು ಸರಿಯಾಗಿ ಪಾಲಿಸಬೇಕು' ಎಂದು ನ್ಯಾಯಪೀಠ ತಿಳಿಸಿದೆ.
'ಕೇಂದ್ರ ಸರ್ಕಾರ ಪ್ರತಿ ಭಾಷೆಯ ಪ್ರಾಮುಖ್ಯವನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ಅದರ ಬೆಳವಣಿಗೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು' ಎಂದು ಸಲಹೆ ನೀಡಿದೆ.
ಸಂವಿಧಾನದ ಆರ್ಟಿಕಲ್ 350ಅನ್ನು ಉಲ್ಲೇಖಿಸಿ, ಕೇಂದ್ರ ಅಥವಾ ರಾಜ್ಯಗಳಲ್ಲಿ ಬಳಸುವ ಯಾವುದೇ ಭಾಷೆಯಲ್ಲಿ ಕೇಂದ್ರಕ್ಕೆ ಪತ್ರ ಬರೆಯಬಹುದಾಗಿದೆ. ಇಂಗ್ಲಿಷ್‌ನಲ್ಲಿ ಪತ್ರ ಬರೆದರೆ ಕೇಂದ್ರ ಸರ್ಕಾರ ಅದಕ್ಕೆ ಇಂಗ್ಲಿಷ್ ಭಾಷೆಯಲ್ಲಿಯೇ ಉತ್ತರಿಸಬೇಕು. ಇದು ಅಧಿಕೃತ ಭಾಷೆಗಳ ಕಾಯ್ದೆಗೆ ಅನ್ವಯ ಎಂದು ನ್ಯಾಯಪೀಠ ತಿಳಿಸಿದೆ.
ಇಂಗ್ಲಿಷ್‌ನಲ್ಲಿ ಬರೆದ ಪತ್ರಕ್ಕೆ ಹಿಂದಿಯಲ್ಲಿ ಉತ್ತರ ನೀಡಿರುವುದು ಸರಿಯಲ್ಲ ಎಂದು ನ್ಯಾಯಾಲಯ ಹೇಳಿದ್ದು, ಇದಕ್ಕೆ ಕೇಂದ್ರ ಸರ್ಕಾರ ವಿವರಣೆಯನ್ನು ನೀಡಿದೆ. 1963ರ ಅಧಿಕೃತ ಭಾಷಾ ಕಾಯ್ದೆಯನ್ನು, ಅದರಲ್ಲೂ ಮುಖ್ಯವಾಗಿ ಸೆಕ್ಷನ್ 3 ಅನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದೆ.
ಗ್ರೂಪ್ ಬಿ ಹಾಗೂ ಗ್ರೂಪ್ ಸಿನಲ್ಲಿರುವ ಖಾಲಿ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಬರೆಯಲು ಪುದುಚೇರಿಯಲ್ಲಿ ತಮಿಳುನಾಡು ಸರ್ಕಾರ ಪರೀಕ್ಷಾ ಕೇಂದ್ರವನ್ನು ನಿರ್ಮಿಸಿಲ್ಲ. ಹೀಗಾಗಿ ಗೃಹ ವ್ಯವಹಾರಗಳ ಸಚಿವಾಲಯಕ್ಕೆ ನಾನು ಅಕ್ಟೋಬರ್ 9ರಂದು ಪತ್ರ ಬರೆದಿದ್ದೆ. ಈ ಪ್ರದೇಶದಲ್ಲಿ ಒಂದು ಪರೀಕ್ಷಾ ಕೇಂದ್ರವನ್ನಾದರೂ ನಿರ್ಮಿಸಬೇಕು ಎಂದು ಕೇಳಿದ್ದೆ. ನನಗೆ ನವೆಂಬರ್ 9ರಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದಿಂದ ಹಿಂದಿಯಲ್ಲಿ ಪತ್ರ ಬಂತು. ಆದರೆ ಅವರು ಏನು ಹೇಳುತ್ತಿದ್ದಾರೆ ಎಂಬುದು ನನಗೆ ಅರ್ಥವಾಗಿಲ್ಲ' ಎಂದು ವೆಂಕಟೇಷನ್ ಪತ್ರದಲ್ಲಿ ಉಲ್ಲೇಖಿಸಿದ್ದರು.
ಇದನ್ನು ಉಲ್ಲೇಖಿಸಿದ್ದ ನ್ಯಾಯಪೀಠ, 'ಈ ಪ್ರಕರಣದಲ್ಲಿ, ಹಿಂದಿಯಲ್ಲಿ ಉತ್ತರ ನೀಡುವುದು ಕಾನೂನು ಉಲ್ಲಂಘನೆ' ಎಂದು ತಿಳಿಸಿದೆ. ತಮಿಳುನಾಡು ಜನರು ಹಿಂದಿಯಲ್ಲಿಯೇ ಕೇಂದ್ರಕ್ಕೆ ಪತ್ರ ಬರೆಯುತ್ತಿದ್ದಾರೆ. ಇದು ಸಾಂವಿಧಾನಿಕ ಹಕ್ಕಿಗೆ ಹಾಗೂ ಅಧೀಕೃತ ಭಾಷೆಗಳ ಕಾಯ್ದೆ 1963ಗೆ ವಿರುದ್ಧವಾದದ್ದು ಎಂದು ಹೇಳಿದೆ.
ಕೇಂದ್ರ ಸರ್ಕಾರ ಈ ಕುರಿತು ಅರ್ಥ ಮಾಡಿಕೊಳ್ಳಬೇಕು ಹಾಗೂ ಇದನ್ನು ಉಲ್ಲಂಘನೆ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದೆ.
ಮಾತೃಭಾಷೆಗೆ ಪ್ರಾಮುಖ್ಯ ನೀಡುವಂತೆ ನ್ಯಾಯಾಲಯ ಕೇಂದ್ರಕ್ಕೆ ತಿಳಿಸಿದೆ.
'ಯಾವುದೇ ವ್ಯಕ್ತಿಗೆ ಮಾತೃಭಾಷೆ ತುಂಬಾ ಮುಖ್ಯ. ಮಾತೃಭಾಷೆಯಲ್ಲಿಯೇ ಮೂಲ ಶಿಕ್ಷಣ ದೊರೆಯಬೇಕು. ಸದ್ಯ ಇಂಗ್ಲಿಷ್ ಭಾಷೆಗೆ ಪ್ರಾಮುಖ್ಯ ನೀಡಲಾಗುತ್ತಿದೆ. ಆರ್ಥಿಕ ನೀತಿಯಲ್ಲಿಯೂ ಇಂಗ್ಲಿಷ್ ಭಾಷೆ ಪ್ರಾಮುಖ್ಯ ಗಳಿಸಿದೆ' ಎಂದು ನ್ಯಾಯಾಲಯ ವಿವರಣೆ ನೀಡಿದೆ.












Click it and Unblock the Notifications