ಲಾಕ್ಡೌನ್ ಉಲ್ಲಂಘನೆ: ಪೊಲೀಸ್ ಕಸ್ಟಡಿಯಲ್ಲೇ ಪ್ರಾಣಬಿಟ್ಟ ತಂದೆ, ಮಗ
ಚೆನ್ನೈ, ಜೂನ್ 23: ಕೊರೊನಾ ಲಾಕ್‌ಡೌನ್ ನಿಯಮ ಉಲ್ಲಂಘನೆ ಮಾಡಿ ಅಂಗಡಿ ಬಾಗಿಲು ತೆಗೆದ ಆರೋಪದ ಮೇಲೆ ಬಂಧಿಸಲಾಗಿದ್ದ ತಂದೆ, ಮಗ ಜೈಲಿನಲ್ಲಿಯೇ ಪ್ರಾಣಬಿಟ್ಟಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
Recommended Video
ಜೆ ಫೆನಿಕ್ಸ್ (31) ಹಾಗೂ ಪಿ.ಜಯರಾಜ್ (63) ಮೃತ ವ್ಯಕ್ತಿಗಳೆಂದು ಹೇಳಲಾಗುತ್ತಿದೆ. ಜಯರಾಜ್ ಅವರು ಮರದ ವ್ಯಾಪಾರಿಯಾಗಿದ್ದು, ಜೂನ್.19ರಂದು ರಾತ್ರಿ 9 ಗಂಟೆಯ ನಂತರವೂ ಅಂಗಡಿ ತೆರೆದಿದ್ದ ಕಾರಣ ಪೊಲೀಸರು ಜಯರಾಜ್ ಅವರನ್ನು ವಶಕ್ಕೆ ಪಡೆದುಕೊಂಡು ಠಾಣೆಯಲ್ಲಿರಿಸಿಕೊಂಡಿದ್ದರು.
ತಂದೆಯನ್ನು ಬಿಡುಗಡೆ ಮಾಡುವಂತೆ ಠಾಣೆ ಎದುರು ಪ್ರತಿಭಟಿಸಿದ ಕಾರಣ ಫೆನಿಕ್ಸ್'ಗೆ ಪೊಲೀಸರು ಥಳಿಸಿದ್ದರು. ಅಲ್ಲದೆ ವಶಕ್ಕೆ ಪಡೆದುಕೊಂಡಿದ್ದ ಜಯರಾಜ್ ಅವರಿಗೂ ಥಳಿಸಿದ್ದರು ಎಂದು ಸ್ಥಳೀಯರು ಹಾಗೂ ಸಂಬಂಧಿಕರು ಆರೋಪಿಸಿದ್ದಾರೆ.

ಜಯರಾಜ್ ಅವರ ಪುತ್ರ ಫೆನಿಕ್ಸ್ ಮೊಬೈಲ್ ಅಂಗಡಿ ನಡೆಸುತ್ತಿದ್ದು, ತಂದೆಯನ್ನು ಪೊಲೀಸರು ಕರೆದೊಯ್ದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡುವಂತೆ ಪೊಲೀಸ್ ಠಾಣೆಗೆ ತೆರಳಿದ್ದರು.
ಮಾತಿನ ಚಕಮಕಿ ಬಳಿಕ ಪೊಲೀಸರು ಫೆನಿಕ್ಸ್ ನನ್ನೂ ಕೂಡ ವಶಕ್ಕೆ ಪಡೆದು, ಇಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆ 188, 269, 294, 353 ಮತ್ತು 506ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.
ಗಾಯಗೊಂಡಿದ್ದ ಇಬ್ಬರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ಇಬ್ಬರ ಸಾವು ಹಿನ್ನೆಲೆಯಲ್ಲಿ ಸ್ಥಳೀಯ ವ್ಯಾಪಾರಿಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಪೊಲೀಸರ ವರ್ತನೆ ವಿರುದ್ಧ ಕಿಡಿಕಾರಲು ಆರಂಭಿಸಿದ್ದಾರೆ. ಅಲ್ಲದೆ, ಪೊಲೀಸರ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ.












Click it and Unblock the Notifications