ಆರ್ ಕೆ ನಗರ್ ಉಪ ಚುನಾವಣೆ: ವಿಶಾಲ್, ದೀಪಾ ನಾಮಪತ್ರ ತಿರಸ್ಕೃತ
ಚೆನ್ನೈ, ಡಿಸೆಂಬರ್ 5: ಜಯಲಲಿತಾ ಅವರ ನಿಧನದಿಂದ ತೆರವಾದ ಆರ್.ಕೆ.ನಗರ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ನಾಮಪತ್ರ ಸಲ್ಲಿಕೆಯೇ ಮಂಗಳವಾರ ಇಡೀ ಪ್ರಹಸನದಂತೆ ಆಯಿತು. ನಟ ವಿಶಾಲ್ ಹಾಗೂ ಜಯಲಲಿತಾ ಅವರ ಸೋದರ ಸಂಬಂಧಿ ದೀಪಾ ನಾಮಪತ್ರ ತಿರಸ್ಕೃತವಾಯಿತು.
ಇದರಿಂದ ಆಕ್ರೋಶಗೊಂಡ ನಟ ವಿಶಾಲ್ ತಮ್ಮ ಬೆಂಬಲಿಗರ ಜತೆಗೂಡಿ ಧರಣಿ ಕೂಡ ಮಾಡಿದರು. ಆ ನಂತರ ಮರು ಪರಿಶೀಲನೆ ಮಾಡುವಂತೆ ಮನವಿ ಕೂಡ ಮಾಡಿದರು. ಆಗ ವಿಶಾಲ್ ಅವರ ನಾಮಪತ್ರ ಅಂಗೀಕೃತವಾಗಿದೆಯಂತೆ ಎಂಬ ಸುದ್ದಿ ಹರಿದಾಡಿತು. ತಮ ನಾಮಪತ್ರ ಅಂಗೀಕೃತವಾಗಿದೆ. ಇದು ಸತ್ಯಕ್ಕೆ ಸಂದ ಜಯ ಎಂದು ಟ್ವಿಟ್ಟರ್ ಖಾತೆಯಲ್ಲಿ ಕೂಡ ವಿಶಾಲ್ ಹಾಕಿಕೊಂಡರು.

ಆದರೆ, ಅಂತಿಮವಾಗಿ ವಿಶಾಲ್ ನಾಮಪತ್ರ ತಿರಸ್ಕೃತವಾಗಿರುವುದಾಗಿ ತಿಳಿದುಬಂದಿದೆ. ಇನ್ನು ತಾಂತ್ರಿಕ ಕಾರಣಗಳಿಂದಾಗಿ ದೀಪಾ ಜಯಕುಮಾರನ್ ಅವರ ನಾಮಪತ್ರ ಕೂಡ ತಿರಸ್ಕೃತವಾಗಿದೆ. "ಇದು ರಾಜಕೀಯದ ಕುತಂತ್ರ" ಎಂದು ಪ್ರತಿಕ್ರಿಯಿಸಿರುವ ದೀಪಾ, ಈ ಕುರಿತು ನ್ಯಾಯಾಲಯದ ಮೊರೆ ಹೋಗುವುದಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಕ್ಷೇತ್ರದಲ್ಲಿ ಉಪ ಚುನಾವಣೆಗೆ ನೂರಾ ನಲವತ್ತಕ್ಕೂ ಹೆಚ್ಚು ನಾಮಪತ್ರ ಸಲ್ಲಿಕೆಯಾಗಿದೆ.












Click it and Unblock the Notifications