ಚಂಡೀಗಢ ವೈರಲ್ ವಿಡಿಯೋ ಕೇಸ್; ಹಾಸ್ಟಲ್ ವಾರ್ಡನ್ ಅಮಾನತು, ಮೂವರ ಬಂಧನ
ಚಂಡೀಗಢ, ಸೆ. 19: ಚಂಡೀಗಢ ವಿಶ್ವವಿದ್ಯಾಲಯದ ಹಾಸ್ಟೆಲ್‌ನಿಂದ ಆಕ್ಷೇಪಾರ್ಹ ವಿಡಿಯೋಗಳನ್ನು ಸೋರಿಕೆ ಮಾಡಿದ ಪ್ರಕರಣದಲ್ಲಿ ಕ್ರಮಕ್ಕೆ ಒತ್ತಾಯಿಸಿ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆ ನಡೆದಿದೆ. ಈ ಬೆನ್ನಲ್ಲೇ ಚಂಡೀಗಢ ವಿಶ್ವವಿದ್ಯಾಲಯದ ಆಡಳಿತವು ಶನಿವಾರದವರೆಗೆ ರಜೆ ಘೋಷಿಸಿದೆ.
ಜೊತೆಗೆ ಚಂಡೀಗಢ ವಿಶ್ವವಿದ್ಯಾಲಯದ ಆಡಳಿತವು ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ವಿದ್ಯಾರ್ಥಿನಿಯರ ಹಾಸ್ಟೆಲ್ ವಾರ್ಡನ್ ರಾಜ್ವಿಂದರ್ ಕೌರ್ ಅವರನ್ನು ಅಮಾನತುಗೊಳಿಸಿದೆ.
ವೈರಲ್ ವಿಡಿಯೋವನ್ನು ವಿಶ್ವವಿದ್ಯಾನಿಲಯದ ಹೊರಗಿನ ಯುವಕರಿಗೆ ವಿಡಿಯೋಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಿ ಬಂಧಿಸಲಾಗಿರುವ ಯುವತಿಯ ವಿಡಿಯೋದಲ್ಲಿ ಕಂಡುಬಂದಿರುವ ಹಾಸ್ಟೆಲ್ ವಾರ್ಡನ್, ಈ ವಿಷಯದ ಬಗ್ಗೆ ತಕ್ಷಣವೇ ಪೊಲೀಸರಿಗೆ ತಿಳಿಸಲಿಲ್ಲ ಎಂದು ವರದಿಯಾಗಿದೆ. ಘಟನೆ ಕುರಿತು ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದಾಗ ಅವರು ವಿದ್ಯಾರ್ಥಿನಿಯರನ್ನು ಗದರಿಸಿದ್ದರು.

ಪ್ರಕರಣದಲ್ಲಿ ಇದುವರೆಗೆ ಮೂವರ ಬಂಧನ
ಆಕ್ಷೇಪಾರ್ಹ ವಿಡಿಯೋಗಳನ್ನು ಸೋರಿಕೆ ಮಾಡಿದ ಪ್ರಕರಣದಲ್ಲಿ ಇದುವರೆಗೆ ಮೂವರನ್ನು ಬಂಧಿಸಲಾಗಿದೆ. ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆಯ ನಂತರ ಆರೋಪಿ ಯುವತಿ, ಆಕೆಯ ಪ್ರಿಯಕರ ಮತ್ತು ಶಿಮ್ಲಾದ ನಿವಾಸಿಯೊಬ್ಬರನ್ನು ಬಂಧಿಸಲಾಗಿದೆ.
ಬಂಧಿತ ಇಪ್ಪತ್ಮೂರು ವರ್ಷದ ಸನ್ನಿ ಮೆಹ್ತಾ ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಎರಡನೇ ವ್ಯಕ್ತಿಯನ್ನೂ ಬಂಧಿಸಲಾಗಿದೆ. ಆದರೆ, ಪ್ರಕರಣದಲ್ಲಿ ಅವರ ಪಾತ್ರ ಇನ್ನೂ ಸ್ಪಷ್ಟವಾಗಿಲ್ಲ.

ಪ್ರತಿಭಟನೆ ಅಂತ್ಯಗೊಳಿಸಿದ ವಿದ್ಯಾರ್ಥಿಗಳು
ಆರೋಪಗಳ ಬಗ್ಗೆ ನ್ಯಾಯಯುತ ಮತ್ತು ಪಾರದರ್ಶಕ ತನಿಖೆ ನಡೆಸುವುದಾಗಿ ಜಿಲ್ಲಾಡಳಿತ ಮತ್ತು ಪೊಲೀಸರು ಭರವಸೆ ನೀಡಿದ್ದಾರೆ. ನಂತರ ವಿದ್ಯಾರ್ಥಿಗಳು ಸೋಮವಾರ ಮುಂಜಾನೆ ತಮ್ಮ ಪ್ರತಿಭಟನೆಯನ್ನು ಅಂತ್ಯಗೊಳಿಸಿದರು.
ಪಂಜಾಬ್‌ನ ಮೊಹಾಲಿಯಲ್ಲಿರುವ ಹಾಸ್ಟೆಲ್ ವಿಶ್ವವಿದ್ಯಾನಿಲಯದಲ್ಲಿ ಯುವತಿಯರ ಆಕ್ಷೇಪಾರ್ಹ ವಿಡಿಯೋಗಳನ್ನು ತೆಗೆದುಕೊಂಡು ಬಿಡುಗಡೆ ಮಾಡಿದ ಆರೋಪದ ಮೇಲೆ ಮಹಿಳಾ ವಿದ್ಯಾರ್ಥಿನಿಯ ಫೋನ್‌ನಲ್ಲಿ ಕೇವಲ ನಾಲ್ಕು ವಿಡಿಯೋಗಳು ಮಾತ್ರ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದರು.
ಈ ಎಲ್ಲಾ ವಿಡಿಯೋಗಳು ಆಕೆಯದ್ದೇ, ಆಕೆ ತನ್ನ ಗೆಳೆಯನಿಗೆ ಕಳುಹಿಸಿದ್ದಾರೆ ಎಂದು ಮೊಹಾಲಿಯ ಉನ್ನತ ಪೊಲೀಸ್ ಅಧಿಕಾರಿ ನವರೀತ್ ಸಿಂಗ್ ವಿರ್ಕ್ ಹೇಳಿದ್ದಾರೆ. ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಹೇಳುವಂತೆ ವಿಶ್ವವಿದ್ಯಾನಿಲಯದಲ್ಲಿ ಯಾವುದೇ ಆತ್ಮಹತ್ಯೆ ಯತ್ನವೂ ನಡೆದಿಲ್ಲ. ವೈರಲ್ ಆಗಿದೆ ಎಂದು ಅವರು ಹೇಳಿಕೊಳ್ಳುವ ವಿಡಿಯೋಗಳು ಇನ್ನೂ ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ.

ಯುವತಿಯರ ಸುಮಾರು 60 ವಿಡಿಯೋ ರೆಕಾರ್ಡ್ ವದಂತಿ
ಚಂಡೀಗಢ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಸ್ಟೆಲ್ ಸ್ನಾನಗೃಹದಲ್ಲಿ ಬಂಧಿತ ವಿದ್ಯಾರ್ಥಿಯು ಇತರ ಯುವತಿಯರ ಆಕ್ಷೇಪಾರ್ಹ ವಿಡಿಯೋಗಳನ್ನು ತೆಗೆದಿದ್ದಾರೆ ಎಂಬುದಕ್ಕೆ ಯಾವುದೇ ಪ್ರಾಥಮಿಕ ಸಾಕ್ಷ್ಯಗಳಿಲ್ಲ ಎಂಬ ಪೊಲೀಸರ ಹೇಳಿಕೆಗಳನ್ನು ಒಪ್ಪಿಕೊಳ್ಳಲು ವಿದ್ಯಾರ್ಥಿನಿಯರು ನಿರಾಕರಿಸಿದ್ದಾರೆ.
ಹಲವಾರು ಮಹಿಳಾ ವಿದ್ಯಾರ್ಥಿಗಳ ಸುಮಾರು 60 ವಿಡಿಯೋಗಳನ್ನು ರೆಕಾರ್ಡ್ ಮಾಡಲಾಗಿದೆ ಎಂಬ "ವದಂತಿಗಳ" ಮೇಲೆ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಆತ್ಮಹತ್ಯೆ ಪ್ರಕರಣಗಳನ್ನು ಮುಚ್ಚಿಹಾಕಲು ಆಡಳಿತ ಪ್ರಯತ್ನಿಸುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

60 ವಿಡಿಯೋಗಳನ್ನು ಚಿತ್ರಿಸಿರುವ ವದಂತಿ ಸಂಪೂರ್ಣ ಸುಳ್ಳು!
ಯಾವುದೇ ಆತ್ಮಹತ್ಯಾ ಪ್ರಯತ್ನಗಳು ನಡೆದಿಲ್ಲ ಮತ್ತು ಆರೋಪಿಯ ಸ್ವಂತ ರೆಕಾರ್ಡಿಂಗ್‌ಗಳನ್ನು ಹೊರತುಪಡಿಸಿ ತನ್ನ ಗೆಳೆಯನಿಗೆ ಕಳುಹಿಸಿರುವ ಬೇರೆ ಯಾವುದೇ ವೀಡಿಯೊಗಳು ಇಲ್ಲಿಯವರೆಗೆ ಕಂಡುಬಂದಿಲ್ಲ ಎಂದು ಪೊಲೀಸರು ಪದೇ ಪದೇ ಹೇಳಿಕೊಂಡಿದ್ದಾರೆ.
ವಿಶ್ವವಿದ್ಯಾನಿಲಯವು ಅಧಿಕೃತ ಹೇಳಿಕೆಯಲ್ಲಿ, "ಒಬ್ಬ ಯುವರಿ ಚಿತ್ರೀಕರಿಸಿದ ವೈಯಕ್ತಿಕ ವಿಡಿಯೋವನ್ನು ಹೊರತುಪಡಿಸಿ ಯಾವುದೇ ವಿದ್ಯಾರ್ಥಿಗಳ ಆಕ್ಷೇಪಾರ್ಹ ವಿಡಿಯೋವನ್ನು ರೆಕಾಡ್ ಮಾಡಲಾಗಿಲ್ಲ. ಆಕೆ ತನ್ನ ವಿಡಿಯೋವನ್ನು ತನ್ನ ಗೆಳೆಯನೊಂದಿಗೆ ಹಂಚಿಕೊಂಡಿದ್ದಾಳೆ" ಎಂದು ಹೇಳಿದೆ.
"ಇತರ ವಿದ್ಯಾರ್ಥಿನಿಯರ ಆಕ್ಷೇಪಾರ್ಹ ವಿಡಿಯೋವನ್ನು ಚಿತ್ರೀಕರಿಸಲಾಗಿದೆ ಎಂಬ ಎಲ್ಲಾ ವದಂತಿಗಳು ಸಂಪೂರ್ಣವಾಗಿ ಸುಳ್ಳು ಮತ್ತು ಆಧಾರರಹಿತವಾಗಿವೆ" ಎಂದು ಚಂಡೀಗಢ ವಿಶ್ವವಿದ್ಯಾಲಯ ತಿಳಿಸಿದೆ.












Click it and Unblock the Notifications