Breaking: ಶವಪರೀಕ್ಷೆಗೆ ಷರತ್ತುಬದ್ಧ ಒಪ್ಪಿಗೆ ನೀಡಿದ ಸೋನಾಲಿ ಫೋಗಟ್ ಕುಟುಂಬ
ಚಂಡೀಗಢ, ಆಗಸ್ಟ್ 25: ಗೋವಾದಲ್ಲಿ ಅಸಹಜವಾಗಿ ಮೃತಪಟ್ಟ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ನಿಧನರಾಗಿ ಎರಡು ದಿನಗಳ ನಂತರ, ಶವಪರೀಕ್ಷೆ ಅಥವಾ ವಿಧಿವಿಜ್ಞಾನ ಪರೀಕ್ಷೆಗೆ ತಮ್ಮ ಒಪ್ಪಿಗೆಯನ್ನು ನೀಡಲು ಒಪ್ಪಿದ್ದೇವೆ ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ. ಆದರೆ ಕಾರ್ಯವಿಧಾನದ ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೋ ಮಾಡಬೇಕೆಂಬ ಷರತ್ತಿನೊಂದಿಗೆ ಒಪ್ಪಿಗೆ ನೀಡಲಾಗಿದೆ.
ಮಂಗಳವಾರ, ಹರಿಯಾಣ ಬಿಜೆಪಿ ನಾಯಕಿ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಖ್ಯಾತರಾಗಿದ್ದ ನಟಿ ಸೋನಾಲಿ ಫೋಗಟ್ ಅವರನ್ನು ಸೋಮವಾರ ತಡರಾತ್ರಿ ಗೋವಾದ ಆಸ್ಪತ್ರೆಗೆ ಕರೆದೊಯ್ದ ನಂತರ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. ಪ್ರಾಥಮಿಕ ವರದಿಗಳು ಸೋನಾಲಿ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಸೂಚಿಸಿದೆ
ಆದರೆ, ಅವರ ಕುಟುಂಬ ಸದಸ್ಯರು ಆಕೆಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರಕರಣವನ್ನು ಸಿಬಿಐ ತನಿಖೆಗೆ ಒತ್ತಾಯಿಸಿದರು. 'ನನ್ನ ತಾಯಿಗೆ ನ್ಯಾಯ ಸಿಗಬೇಕು' ಎಂದ ಸೋನಾಲಿ ಫೋಗಟ್ ಅವರ 15 ವರ್ಷದ ಮಗಳು ಕೂಡ ಆಗ್ರಹಿಸಿದ್ದರು.

ಸೋನಾಲಿ ಫೋಗಟ್ ಅವರ ಶವಪರೀಕ್ಷೆಯನ್ನು ಈ ಹಿಂದೆ ಬುಧವಾರ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಿಗದಿಪಡಿಸಲಾಗಿತ್ತು ಆದರೆ ಆಕೆಯ ಸಹೋದರ ರಿಂಕು ಢಾಕಾ ಅವರು ಸೋನಾಲಿ ಫೋಗಟ್ ಅವರನ್ನು ಆಕೆಯ ಇಬ್ಬರು ಸಹಚರರು ಕೊಂದಿದ್ದಾರೆ ಎಂದು ಆರೋಪಿಸಿದ್ದರಿಂದ ಆಕೆಯ ಕುಟುಂಬದ ಒಪ್ಪಿಗೆಯ ಬಗ್ಗೆ ವಿವಾದ ಉಂಟಾಗಿತ್ತು.
ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ಗೋವಾ ಪೊಲೀಸರು ಎಫ್‌ಐಆರ್ ದಾಖಲಿಸಿದ ನಂತರವೇ ಕುಟುಂಬದವರು ಶವ ಪರೀಕ್ಷೆಗೆ ಅವಕಾಶ ಮಾಡಿಕೊಡುತ್ತಾರೆ ಎಂದು ಅವರು ಹೇಳಿದ್ದರು.
"ನಮ್ಮ ದೂರಿಗೆ ಸಂಬಂಧಿಸಿದಂತೆ ಎಫ್‌ಐಆರ್ ಅನ್ನು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ದಾಖಲಿಸಲಾಗುವುದು ಎಂದು ಪೊಲೀಸರು ನಮಗೆ ತಿಳಿಸಿದ್ದಾರೆ" ಎಂದು ಸೋನಾಲಿ ಫೋಗಟ್ ಅವರ ಸೋದರಳಿಯ ಹೇಳಿದ್ದು, ಶವಪರೀಕ್ಷೆಗೆ ಕುಟುಂಬ ಒಪ್ಪಿಗೆ ನೀಡಿರುವುದನ್ನು ಖಚಿತಪಡಿಸಿದ್ದಾರೆ.
ಸೋನಾಲಿ ಫೋಗಟ್ ಅವರ ದೇಹವನ್ನು GMCH ಶವಾಗಾರದಲ್ಲಿ ಇರಿಸಲಾಗಿದೆ. ಶವಪರೀಕ್ಷೆಗಾಗಿ ಆಸ್ಪತ್ರೆಯು ಇಬ್ಬರು ವಿಧಿವಿಜ್ಞಾನ ತಜ್ಞರ ಸಮಿತಿಯನ್ನು ರಚಿಸಿದೆ.

ಸೋನಾಲಿ ಫೋಗಟ್ ಅವರ ಸಹೋದರ ಬುಧವಾರ ನೇರವಾಗಿ ತನ್ನ ಸಹೋದರಿಯನ್ನು ಕೊಲ್ಲಲಾಗಿದೆ ಎಂದು ಹೇಳಿದ್ದಾರೆ. ಸೋನಾಲಿ ಫೋಗಟ್ ಅವರ ನಿಗೂಢ ಸಾವಿನ ನಂತರ ಅವರ ಹರಿಯಾಣ ಫಾರ್ಮ್‌ಹೌಸ್‌ನ ಸಿಸಿಟಿವಿ ಕ್ಯಾಮೆರಾಗಳು, ಲ್ಯಾಪ್‌ಟಾಪ್ ಮತ್ತು ಇತರ ನಿರ್ಣಾಯಕ ವಸ್ತುಗಳು ನಾಪತ್ತೆಯಾಗಿವೆ ಎಂದು ಅವರು ಆರೋಪಿಸಿದ್ದರು.
ಸೋನಾಲಿ ಕಳೆದ 15 ವರ್ಷಗಳಿಂದ ಬಿಜೆಪಿ ನಾಯಕಿಯಾಗಿದ್ದರು. ಆಕೆಗೆ ನ್ಯಾಯ ದೊರಕಿಸಿಕೊಡಲು ಸಹಾಯ ಮಾಡುವಂತೆ ನಾವು ಪ್ರಧಾನಿಯವರಲ್ಲಿ ಮನವಿ ಮಾಡುತ್ತೇವೆ ಎಂದು ಆಕೆಯ ಸಹೋದರ ಹೇಳಿದರು.
ಸೋನಾಲಿ ಫೋಗಟ್ ಅವರು ಭಾರತೀಯ ಜನತಾ ಪಕ್ಷದ ಮಹಿಳಾ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದರು. ಅವರಿಗೆ ಹರಿಯಾಣ , ದೆಹಲಿ, ಚಂಡೀಗಢದ ನಿಗದಿತ ಪ್ರವಾಸ ವಿಭಾಗದ ಜವಾಬ್ದಾರಿಯನ್ನು ಸಹ ನೀಡಲಾಯಿತು. ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿಯೂ ಅವರು ಆಯ್ಕೆಯಾಗಿದ್ದರು. ಮಧ್ಯಪ್ರದೇಶ, ಜಾರ್ಖಂಡ್ ನಲ್ಲಿ ಆದಿವಾಸಿಗಳ ಪರ ಕೆಲಸ ಮಾಡಿದ್ದರು. 2019ರ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಸೋನಾಲಿ ಕಾಂಗ್ರೆಸ್‌ನ ಕುಲದೀಪ್ ಬಿಷ್ಣೋಯ್ ವಿರುದ್ಧ ಸ್ಪರ್ಧಿಸಿದ್ದರು. ಆದರೆ ಜಯ ಸಾಧಿಸಲಿಲ್ಲ.
ಕಾಂಗ್ರೆಸ್ ನಾಯಕ ಕುಲದೀಪ್ ಬಿಷ್ಣೋಯ್ ಬಿಜೆಪಿಗೆ ಸೇರ್ಪಡೆಗೊಂಡು, ಕಳೆದ ತಿಂಗಳು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಉಪಚುನಾವಣೆಯಲ್ಲಿ ಆದಂಪುರದಿಂದ ಸೋನಾಲಿ ಫೋಗಟ್ ಬಿಜೆಪಿ ಅಭ್ಯರ್ಥಿಯಾಗುತ್ತಾರೆ ಎಂಬ ಊಹಾಪೋಹಗಳಿದ್ದವು. ಇದರ ನಡುವೆ ಬಿಷ್ಣೋಯ್ ಕಳೆದ ವಾರ ಸೋನಾಲಿ ಫೋಗಟ್ ಅವರನ್ನು ಭೇಟಿ ಮಾಡಿದ್ದರು.












Click it and Unblock the Notifications