ಪಂಜಾಬ್ ಚುನಾವಣೆ: 23 ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟಿಸಿದ ಕಾಂಗ್ರೆಸ್
ಚಂಡೀಗಢ, ಜನವರಿ 26: ಪಂಜಾಬ್ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ 23 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಮಂಗಳವಾರ ರಾತ್ರಿ ಬಿಡುಗಡೆ ಮಾಡಿದ್ದು, ಮಾಜಿ ಮುಖ್ಯಮಂತ್ರಿ ಹರ್ಚರಣ್ ಸಿಂಗ್ ಬ್ರಾರ್ ಅವರ ಸೊಸೆ ಕರಣ್ ಬ್ರಾರ್ ಅವರನ್ನು ಮುಕ್ತಸರದಿಂದ ಕಣಕ್ಕಿಳಿಸಿದೆ.
ಇದರೊಂದಿಗೆ ಪಂಜಾಬ್‌ನ ಒಟ್ಟು 117 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವು ಇದುವರೆಗೆ 109 ಅಭ್ಯರ್ಥಿಗಳನ್ನು ಘೋಷಿಸಿದಂತಾಗಿದೆ. ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಪರಮಾಪ್ತ ಸ್ಮಿತ್ ಸಿಂಗ್‌ರನ್ನು ಅಮರ್‌ಗಢ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದ್ದು, ಪಂಜಾಬ್ ಮಾಜಿ ಮುಖ್ಯಮಂತ್ರಿ ರಾಜಿಂದರ್ ಕೌರ್ ಭತಲ್ ಅವರ ಅಳಿಯ ವಿಕ್ರಮ್ ಬಾಜ್ವಾ ಅವರು ಸಹನೆವಾಲ್ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.
ಪಂಜಾಬ್‌ನ ಮಾಜಿ ಸಚಿವ ಅಶ್ವನಿ ಸೆಖ್ರಿ ಅವರು ಕಳೆದ ಬಾರಿ ಸೋತಿದ್ದ ಬಟಾಲಾ ವಿಧಾನಸಭಾ ಕ್ಷೇತ್ರದಿಂದ ಮತ್ತೊಮ್ಮೆ ಅದೃಷ್ಟ ಪರೀಕ್ಷಗೆ ಇಳಿದಿದ್ದಾರೆ. ಇನ್ನು ಮಾಜಿ ಶಾಸಕ ಹರಚಂದ್ ಕೌರ್ ಅವರನ್ನು ಮೆಹಲ್ ಕಲಾನ್ (ಎಸ್‌ಸಿ) ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ.

ಭೋವಾ (ಎಸ್‌ಸಿ) ಕ್ಷೇತ್ರದ ಹಾಲಿ ಶಾಸಕ ಜೋಗಿಂದರ್ ಪಾಲಾ ಅದೇ ಕ್ಷೇತ್ರದಿಂದ ಮತ್ತು ರಾಮನ್‌ಜೀತ್ ಸಿಂಗ್ ಸಿಕ್ಕಿ ಖಾದೂರ್ ಸಾಹಿಬ್ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿದಿದ್ದಾರೆ.
ಕಾಂಗ್ರೆಸ್ ಪಕ್ಷದ ಹಾಲಿ ಶಾಸಕ ರಾಣಾ ಗುರ್ಜಿತ್ ಸಿಂಗ್ ಸೋಧಿ ಬಿಜೆಪಿಗೆ ಸೇರ್ಪಡೆಯಾದ ನಂತರ ಗುರು ಹರ್ ಸಹಾಯ್‌ನಿಂದ ವಿಜಯ್ ಕಲ್ರಾ ಅವರನ್ನು ಕಣಕ್ಕಿಳಿಸಿದೆ. ಇದೇ ವೇಳೆ ಎಎಪಿಯಿಂದ ಕಾಂಗ್ರೆಸ್‌ಗೆ ಸೇರ್ಪಡೆಯಾದ ಅಶು ಬಂಗಾರ್ ಅವರು ಫಿರೋಜ್‌ಪುರ ಗ್ರಾಮಾಂತರದಿಂದ ಕಣಕ್ಕಿಳಿದಿದ್ದಾರೆ.
ಕಾಂಗ್ರೆಸ್ ಪಕ್ಷವು ಸಮ್ರಾಲಾ ಕ್ಷೇತ್ರದಿಂದ ಅಮ್ರಿಕ್ ಸಿಂಗ್ ಧಿಲ್ಲೋನ್ ಅವರನ್ನು ಕೈಬಿಟ್ಟಿದೆ ಮತ್ತು ಅವರ ಸ್ಥಾನದಲ್ಲಿ ರಾಜಾ ಗಿಲ್ ಅವರನ್ನು ಕಣಕ್ಕಿಳಿಸಿದೆ. ಇನ್ನು ಫಿರೋಜ್‌ಪುರ ಗ್ರಾಮಾಂತರ, ಸಮ್ರಾಲಾ, ಅಮರಗಢ ಮತ್ತು ಶೂತ್ರಾನಾ ವಿಧಾನಸಭಾ ಕ್ಷೇತ್ರಗಳ ಹಾಲಿ ಶಾಸಕರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನಿರಾಕರಿಸಿದೆ.
ಗಮನಾರ್ಹ ಸಂಗತಿಯೆಂದರೆ, ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹಾಲಿ ಶಾಸಕರಾಗಿರುವ ಪಟಿಯಾಲ ನಗರ ಸೇರಿದಂತೆ ಇನ್ನೂ ಎಂಟು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಕಾಂಗ್ರೆಸ್ ಇನ್ನೂ ಘೋಷಿಸಿಲ್ಲ.
ಮಾಜಿ ಸಿಎಂ ಅಮರಿಂದರ್ ಸಿಂಗ್ ಅವರು ಇತ್ತೀಚೆಗೆ ಪಂಜಾಬ್ ಲೋಕ ಕಾಂಗ್ರೆಸ್ ಅನ್ನು ಸ್ಥಾಪಿಸಿದ್ದು ಮತ್ತು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ನವನ್‌ಶಹರ್‌ನಿಂದ ಮತ್ತು ಪ್ರಸ್ತುತ ಪಕ್ಷದ ಶಾಸಕರನ್ನು ಹೊಂದಿರುವ ಅಂಗದ್ ಸೈನಿ ಮತ್ತು ಜಲಾಲಾಬಾದ್ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷವು ಇನ್ನೂ ಅಭ್ಯರ್ಥಿಗಳನ್ನು ಹೆಸರಿಸಿಲ್ಲ.
ಪಂಜಾಬ್‌ನ 117 ವಿಧಾನಸಭಾ ಸ್ಥಾನಗಳಿಗೆ ಫೆಬ್ರವರಿ 20ರಂದು ಮತದಾನ ನಡೆಯಲಿದೆ. ಜನವರಿ 25ರಂದು ಅಧಿಸೂಚನೆ ಹೊರಬೀಳಲಿದ್ದು, ನಾಮಪತ್ರ ಸಲ್ಲಿಸಲು ಜನವರಿ 28 ಕೊನೆಯ ದಿನಾಂಕವಾಗಿರುತ್ತದೆ, ಜನವರಿ 29ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ, ನಾಮಪತ್ರ ಹಿಂಪಡೆಯಲು ಜನವರಿ 31 ಕೊನೆಯ ದಿನಾಂಕವಾಗಿರುತ್ತದೆ.












Click it and Unblock the Notifications