ಬಿಜೆಪಿಯ ಟಿಕ್ ಟಾಕ್ ಸ್ಟಾರ್ ಸೋಲಿಸಿದ ಮಾಜಿ ಸಿಎಂ ಪುತ್ರ ಕುಲದೀಪ್
ಚಂದೀಗಢ, ಅಕ್ಟೋಬರ್ 24: ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಅಚ್ಚರಿ ಮೂಡಿಸಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಎಣಿಕೆ ತಪ್ಪಾಗಿದೆ. ಹರ್ಯಾಣದಲ್ಲಿ ಟಿಕ್ ಟಾಕ್ ಸ್ಟಾರ್ ಗೆ ಭಾರತೀಯ ಜನತಾ ಪಕ್ಷ(ಬಿಜೆಪಿ) ಟಿಕೆಟ್ ನಿಂದ ಸ್ಪರ್ಧಿಸುವ ಅವಕಾಶ ನೀಡಿದ್ದು ಫಲ ಕೊಟ್ಟಿಲ್ಲ. ನಟಿ ಸೊನಾಲಿಯನ್ನು ಮಾಜಿ ಸಿಎಂ ಭಜನ್ ಲಾಲ್ ಪುತ್ರ ಕುಲದೀಪ್ ಬಿಷ್ನೋಯಿ ಸುಲಭವಾಗಿ ಸೋಲಿಸುವ ಹಾದಿಯಲ್ಲಿದ್ದಾರೆ.
ಟಿವಿ ತಾರೆ, ಟಿಕ್ ಟಾಕ್ ಆಪ್ ವಿಡಿಯೋ ಮೂಲಕ ಜನಪ್ರಿಯತೆ ಗಳಿಸಿರುವ ಬಿಜೆಪಿ ಮಹಿಳಾ ಮೋರ್ಚಾದ ನಾಯಕಿ ಸೊನಾಲಿ ಸಿಂಗ್ ಫೋಗಟ್ ಗೆ ಅದೃಷ್ಟ ಖುಲಾಯಿಸಿ ಅದಂಪುರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಲದೀಪ್ ಬಿಷ್ನೋಯಿ ವಿರುದ್ಧ ಸ್ಪರ್ಧಿಸಿದ್ದರು.

ಆದರೆ, ಈ ಸಮಯದ ಟ್ರೆಂಡ್ ನಂತೆ ಕುಲದೀಪ್ ಬಿಷ್ನೋಯಿ ಒಟ್ಟು 42,578 ಮತ(ಶೇ 54.8) ಹಾಗೂ ಸೊನಾಲಿ ಫೋಗಟ್ 20404(ಶೇ 26.26) ಮತಗಳನ್ನು ಪಡೆದುಕೊಂಡಿದ್ದಾರೆ. ಅಂತಿಮ ಫಲಿತಾಂಶ ಅಧಿಕೃತವಾಗಿ ಇನ್ನೂ ಪ್ರಕಟವಾಗಬೇಕಿದೆ.
2014ರ ಚುನಾವಣೆಯಲ್ಲಿ ಹರ್ಯಾಣ ಜನಹಿತ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಬಿಷ್ನೋಯಿ ಅವರು 47.1% ಮತಗಳನ್ನು ಗಳಿಸಿದ್ದರು. ಸಮೀಪದ ಪ್ರತಿಸ್ಪರ್ಧಿ ಕುಲವೀರ್ ಸಿಂಗ್ 32.75% ಮತಗಳಿಸಿದ್ದರು. ಕಾಂಗ್ರೆಸ್ಸಿನ ಸತೀಂದರ್ ಸಿಂಗ್ 8.47% ಮತ ಗಳಿಸಿದ್ದರೆ, ಬಿಜೆಪಿ ಅಭ್ಯರ್ಥಿ ಕರಣ್ ಸಿಂಗ್ 6.9% ಗಳಿಸಿ ನಾಲ್ಕನೆ ಸ್ಥಾನಕ್ಕೆ ದೂಡಲ್ಪಟ್ಟಿದ್ದರು. 2016ರಲ್ಲಿ ಕಾಂಗ್ರೆಸ್ ಜೊತೆಗೆ ಹರ್ಯಾಣ ಜನಹಿತ ಕಾಂಗ್ರೆಸ್ ವಿಲೀನಗೊಂಡಿತ್ತು.












Click it and Unblock the Notifications