11 ಲಕ್ಷಕ್ಕಾಗಿ ಕಾರಿನಲ್ಲೇ ಉದ್ಯಮಿಯನ್ನು ಸುಟ್ಟು ಹಾಕಿದ ದುಷ್ಕರ್ಮಿಗಳು
ಚಂಡೀಘರ್, ಅಕ್ಟೋಬರ್.08: ಉದ್ಯಮಿಯೊಬ್ಬರ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ತಂಡ 11 ಲಕ್ಷ ರೂಪಾಯಿ ದೋಚಿದ್ದು, ನಂತರ ಆವರನ್ನು ಕಾರಿನಲ್ಲೇ ಕೂಡಿಹಾಕಿ ಕಾರಿಗೆ ಬೆಂಕಿ ಹಚ್ಚಿರುವ ಘಟನೆಯು ಹರಿಯಾಣದ ಹಿಸಾರ್ ಜಿಲ್ಲೆಯಲ್ಲಿ ವರದಿಯಾಗಿದೆ.
ಕಳೆದ ಮಂಗಳವಾರ ಮಧ್ಯರಾತ್ರಿ ಹಂಸಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದಾಟಾ ಗ್ರಾಮದ ನಿವಾಸಿಯಾಗಿದ್ದ ಉದ್ಯಮಿ ರಾಮ್ ಮೆಹಾರ್ ಭಾಟ್ಲಾ-ದಾಟಾ ರಸ್ತೆಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳ ತಂಡವು ಕಾರನ್ನು ಅಡ್ಡಗಟ್ಟಿದೆ.
ಉದ್ಯಮಿ ಬಳಿಯಿದ್ದ 11 ಲಕ್ಷ ರೂಪಾಯಿಯನ್ನು ಕಿತ್ತುಕೊಂಡ ದುಷ್ಕರ್ಮಿಗಳು ರಾಮ್ ಮೆಹಾರ್ ರನ್ನು ಕಾರಿನಲ್ಲೇ ಕೂಡಿ ಹಾಕಿ, ಕಾರಿಗೆ ಬೆಂಕಿ ಹಚ್ಚಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಕಾರಿನ ನಂಬರ್ ಪ್ಲೇಟ್ ಆಧರಿಸಿ ವ್ಯಕ್ತಿಯ ಗುರುತು ಪತ್ತೆ ಹಚ್ಚಿದ್ದಾರೆ.

ಬ್ಯಾಂಕಿನಿಂದ 11 ಲಕ್ಷ ವಿತ್ ಡ್ರಾ:
ಕಳೆದ ಮಂಗಳವಾರ ಮಧ್ಯಾಹ್ನದ ವೇಳೆಗೆ ಬ್ಯಾಂಕಿನಲ್ಲಿ 11 ಲಕ್ಷ ರೂಪಾಯಿ ಹಣವನ್ನು ಬಿಡಿಸಿಕೊಂಡ ಉದ್ಯಮಿ ರಾಮ್ ಮೆಹಾರ್ ಕೆಲಸವನ್ನು ಮುಗಿಸಿಕೊಂಡು ರಾತ್ರಿ ಮನೆಗೆ ವಾಪಸ್ ಆಗುತ್ತಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಇನ್ನು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ದುಷ್ಕರ್ಮಿಗಳ ಪತ್ತೆಗೆ ಸ್ಥಳದಲ್ಲಿದ್ದ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಹಂಸಿ ಪೊಲೀಸ್ ವಕ್ತಾರ ಸುಭಾಷ್ ಮಾಹಿತಿ ನೀಡಿದ್ದಾರೆ.












Click it and Unblock the Notifications