ತಾನು ನಡೆದಿದ್ದೇ ದಾರಿ: ಕಾಂಗ್ರೆಸ್ ಹೈಕಮಾಂಡಿಗೆ ಬಿಸಿತುಪ್ಪವಾಗುತ್ತಿರುವ ಸಿಧು
ಚಂಡೀಗಢ, ಜ 12: ಚುನಾವಣೆಯ ಹೊಸ್ತಿಲಲ್ಲಿರುವ ಪಂಜಾಬ್ ನಲ್ಲಿ ಕಾಂಗ್ರೆಸ್ಸಿಗೆ ಇರುವ ರಾಜ್ಯವೊಂದನ್ನು ಉಳಿಸಿಕೊಳ್ಳುವ ಚಿಂತೆ. ಇನ್ನೊಂದು ಕಡೆ, ಆಮ್ ಆದ್ಮಿ ಪಕ್ಷ ದಿನದಿಂದ ದಿನಕ್ಕೆ ತಮ್ಮ ಬೇರನ್ನು ಗಟ್ಟಿಗೊಳಿಸುತ್ತಿರುವುದು. ಇದೆಲ್ಲಾ ಒಂದು ಕಡೆಯಾದರೆ, ರಾಜ್ಯದಲ್ಲಿನ ನಾಯಕತ್ವದ ಗೊಂದಲ.
ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರ ರಾಜೀನಾಮೆಗೆ ಪ್ರಮುಖ ಕಾರಣಕರ್ತರಾದ ಪಂಜಾಬ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ನವಜೋತ್ ಸಿಂಗ್ ಸಿಧು, ಮುಂದಿನ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರು ಆಗುತ್ತಾರೆ ಎನ್ನುವ ವಿಚಾರದಲ್ಲಿ ಹೈಕಮಾಂಡ್ ತಲೆಬಿಸಿಯಾಗುವ ಹೇಳಿಕೆಯನ್ನು ನೀಡಿದ್ದಾರೆ.
ತಮ್ಮಾಪ್ತ ಚರಣ್ ಜಿತ್ ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಸಿಧು, ದೈನಂದಿನ ಆಡಳಿತದಲ್ಲಿ ವಿನಾಕಾರಣ ಮೂಗು ತೂರಿಸುತ್ತಿದ್ದಾರೆ ಎನ್ನುವ ಆರೋಪವೂ ಸ್ವಪಕ್ಷೀಯರಿಂದಲೇ ಜೋರಾಗಿ ಬರುತ್ತಿದೆ.
ಮುಂದಿನ ತಿಂಗಳು ಪಂಜಾಬ್ ನಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿದೆ. ಅದಕ್ಕೆ ಮುನ್ನ ಪಕ್ಷದಲ್ಲಿ ಆಂತರಿಕ ಗೊಂದಲ ಉಂಟಾದರೆ, ಚುನಾವಣೆಯನ್ನು ಗೆಲ್ಲುವುದು ಕಷ್ಟ ಎಂದು ಸಾಧ್ಯವಾದಷ್ಟು ಸ್ಥಳೀಯ ಮುಖಂಡರನ್ನು ಸಮಾಧಾನ ಪಡಿಸುವ ಕೆಲಸವನ್ನು ಕಾಂಗ್ರೆಸ್ ವರಿಷ್ಠರು ಮಾಡುತ್ತಿದ್ದಾರೆ. ಆದರೆ, ಸಿಧು ರಾಜ್ಯ ಕಾಂಗ್ರೆಸ್ ಪಕ್ಷದ ಎಲ್ಲಾ ಆಗುಹೋಗುಗಳ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ.

ನಟ ಸೋನು ಸೂದ್ ಅವರ ಸಹೋದರಿ ಕಾಂಗ್ರೆಸ್ಸಿಗೆ ಸೇರ್ಪಡೆ
ಚುನಾವಣೆಯ ಸಮಯವಾಗಿರುವುದರಿಂದ ನಾಯಕರ ನಿಯತ್ತು ಬೇರೆ ಬೇರೆ ಪಕ್ಷಗಳಿಗೆ ಬದಲಾಗುವುದು ಸಾಮಾನ್ಯ. ಅದರಂತೇ, ಸಿಎಂ ಚನ್ನಿ ಅವರ ಸೋದರ ಸಂಬಂಧಿ ಜಸ್ವಿಂದರ್ ಸಿಂಗ್ ಧಾರೀವಾಲ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಅವರನ್ನು ಬಿಜೆಪಿ ನಾಯಕರು ಬರ ಮಾಡಿಕೊಂಡಿದ್ದಾರೆ. ಜೊತೆಗೆ, ಸ್ಥಳೀಯ ಇನ್ನೋರ್ವ ಕಾಂಗ್ರೆಸ್ ಮುಖಂಡ ಅರವಿಂದ್ ಖನ್ನಾ, ಅಕಾಲಿದಳದ ಮುಖಂಡ ಗುರದೀಪ್ ಸಿಂಗ್ ಗೋಶಾ ಕೂಡಾ ಬಿಜೆಪಿಗೆ ಸೇರಿದ್ದಾರೆ. ಒಂದು ದಿನದ ಹಿಂದೆ ನಟ ಸೋನು ಸೂದ್ ಅವರ ಸಹೋದರಿ ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದ್ದರು.

ಹೈಕಮಾಂಡ್ ನಿರ್ಧಾರ ಮಾಡುವುದಲ್ಲ, ಪಂಜಾಬಿನ ಜನತೆ
"ಪಂಜಾಬಿನ ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎನ್ನುವುದನ್ನು ಹೈಕಮಾಂಡ್ ನಿರ್ಧಾರ ಮಾಡುವುದಲ್ಲ, ಪಂಜಾಬಿನ ಜನತೆ. ನಿಮಗೆ ಹೈಕಮಾಂಡ್ ನಿರ್ಧಾರ ಮಾಡುತ್ತಾರೆ ಎಂದು ಹೇಳಿದವರು ಯಾರು? ಶಾಸಕರನ್ನು ಮತದಾರ ಆಯ್ಕೆ ಮಾಡುತ್ತಾನೆ, ಅದೇ ರೀತಿ ರಾಜ್ಯದ ಮುಖ್ಯಮಂತ್ರಿ ಯಾರಾಗಬೇಕು ಎಂದು ಜನತೆಯೇ ನಿರ್ಧಾರ ಮಾಡುತ್ತಾರೆ"ಎಂದು ನವಜೋತ್ ಸಿಧು ಮಾಧ್ಯಮದವರನ್ನು ಪ್ರಶ್ನಿಸಿದ್ದಾರೆ. ಸಿಧು ಅವರ ಹೇಳಿಕೆಗೆ ಪಕ್ಷದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಜಂಟಿ ನಾಯಕತ್ವದಲ್ಲಿ ಪಕ್ಷ ಚುನಾವಣೆ ಎದುರಿಸಲಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ಇತ್ತೀಚೆಗೆ ಹೇಳಿಕೆಯನ್ನು ನೀಡಿದ್ದರು.

ಅಮರೀಂದರ್ ಸಿಂಗ್ ಅವರ ವಿರುದ್ದ ಮುನಿಸಿಕೊಂಡಿದ್ದ ಸಿಧು
ಚುನಾವಣೆಯ ಸಮಯದಲ್ಲಿ ಸಿಧು ಅವರ ಹೇಳಿಕೆಯನ್ನು ವಿರೋಧ ಪಕ್ಷಗಳು ವಿವಿಧ ರೀತಿಯಲ್ಲಿ ವ್ಯಾಖ್ಯಾನಿಸುತ್ತಿದೆ. ಕಾಂಗ್ರೆಸ್ ಹೈಕಮಾಂಡಿಗೆ ದೇಶದಲ್ಲಿ ಎಲ್ಲೂ ಪವರ್ ಇಲ್ಲ ಎನ್ನುವುದು ಸಿಧು ಅವರಿಗೆ ತಿಳಿದಿದೆ, ಹಾಗಾಗಿಯೇ ಈ ಹೇಳಿಕೆ ಎಂದು ವ್ಯಂಗ್ಯವಾಡಲಾಗುತ್ತಿದೆ. ಮೊದಲು ಸಿಎಂ ಆಗಿದ್ದ ಅಮರೀಂದರ್ ಸಿಂಗ್ ಅವರ ವಿರುದ್ದ ಮುನಿಸಿಕೊಂಡಿದ್ದ ಸಿಧು ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿ ತಣ್ಣಗಾಗಿಸುವ ಪ್ರಯತ್ನವನ್ನು ಹೈಕಮಾಂಡ್ ಮಾಡಿತ್ತು. ಆದರೆ, ಇದಾದ ನಂತರ ಪಂಜಾಬ್ ಕಾಂಗ್ರೆಸ್ ಘಟಕದಲ್ಲಿ ಭಿನ್ನಮತ ತಾರಕಕ್ಕೇರಲಾರಂಭಿಸಿತು.

ಅಕಾಲಿದಳ ಕಿಂಗ್ ಮೇಕರ್ ಆಗಿ ಹೊರಹೊಮ್ಮಲಿದೆ
ಟೈಮ್ಸ್ ನೌ ಮತ್ತು ವೀಟೊ ಜಂಟಿಯಾಗಿ ನಡೆಸಿದ ಸಮೀಕ್ಷೆಯ ಪ್ರಕಾರ ಪಂಜಾಬ್ ನಲ್ಲಿ ಅತಂತ್ರ ಚುನಾವಣಾ ಫಲಿತಾಂಶ ಬರಲಿದೆ. 117 ಶಾಸಕರನ್ನು ಹೊಂದಿರುವ ಅಸೆಂಬ್ಲಿಯಲ್ಲಿ ಆಮ್ ಆದ್ಮಿ ಪಕ್ಷ 54-58, ಕಾಂಗ್ರೆಸ್ 41-47 ಮತ್ತು ಶಿರೋಮಣಿ ಅಕಾಳಿದಳ 11-15ಸ್ಥಾನವನ್ನು ಗೆಲ್ಲಬಹುದು ಎನ್ನುವ ಫಲಿತಾಂಶ ಸಮೀಕ್ಷೆಯಲ್ಲಿ ಹೊರಬಿದ್ದಿದೆ. ಈ ರೀತಿಯ ಫಲಿತಾಂಶ ಹೊರಬಿದ್ದಿದ್ದೇ ಆದಲ್ಲಿ ಅಕಾಲಿದಳ ಕಿಂಗ್ ಮೇಕರ್ ಆಗಿ ಹೊರಹೊಮ್ಮಲಿದೆ.












Click it and Unblock the Notifications